
ಚಿತ್ರಕೃಪೆ: X/cricbuzz
ವಡೋದರ: ಇಂಗ್ಲೆಂಡ್ ಆಟಗಾರ್ತಿ ನ್ಯಾಟ್ ಶಿವರ್ ಬ್ರಂಟ್ ಅವರು ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಇತಿಹಾಸದಲ್ಲಿ ಮೊದಲ ಶತಕ ಗಳಿಸಿದ ಆಟಗಾರ್ತಿಯೆಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರ ಆಟದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು ಸೋಮವಾರ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 15 ರನ್‌ಗಳಿಂದ ಮಣಿಸಿತು.
ಈ ಗೆಲುವಿನೊಂದಿಗೆ ಎರಡು ಬಾರಿಯ ಚಾಂಪಿಯನ್ ಮುಂಬೈ ತಂಡವು ಪ್ಲೇ ಆಫ್ ಕನಸನ್ನು ಜೀವಂತವಾಗಿ ಇರಿಸಿಕೊಂಡಿತು. ಈಗಾಗಲೇ ಪ್ಲೇ ಆಫ್‌ಗೆ ಅರ್ಹತೆ ಪಡೆದಿರುವ ಆರ್‌ಸಿಬಿ ತಂಡವು ಸತತ ಎರಡನೇ ಸೋಲು ಅನುಭವಿಸಿತು. ಸ್ಮೃತಿ ಮಂದಾನ ಪಡೆಗೆ ಲೀಗ್‌ನಲ್ಲಿ ಇನ್ನು ಒಂದು ಪಂದ್ಯ (ಯು.ಪಿ ವಾರಿಯರ್ಸ್ ವಿರುದ್ಧ) ಬಾಕಿ ಇದೆ.
ಕೋತಂಬಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 33 ವರ್ಷದ ಬ್ರಂಟ್ ಅಜೇಯ 100 ರನ್ (57ಎ, 4x16, 6x1) ಗಳಿಸಿದರು. ಮುಂಬೈ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 199 ರನ್ ಗಳಿಸಿತು. ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡವು ಆರಂಭದಲ್ಲೇ ಕುಸಿತ ಕಂಡಿತು. ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ರಿಚಾ ಘೋಷ್ (90;50ಎ, 4x10, 6x6) ಏಕಾಂಗಿ ಹೋರಾಟ ನಡೆಸಿದರೂ ಗೆಲುವಿಗೆ ಸಾಕಾಗಲಿಲ್ಲ. 9 ವಿಕೆಟ್‌ಗೆ 184 ರನ್ ಗಳಿಸಲಷ್ಟೇ ಶಕ್ತವಾಯಿತು.
35 ರನ್ ಗಳಿಸುವಷ್ಟರಲ್ಲಿ ಪ್ರಮುಖ ಐದು ಬ್ಯಾಟರ್‌ಗಳು ಪೆವಿಲಿಯನ್ ಸೇರಿದರು. ರಿಚಾ ಮತ್ತು ನದೀನ್ ಡಿ ಕ್ಲರ್ಕ್ (28) ಆರನೇ ವಿಕೆಟ್ ಜೊತೆಯಾಟದಲ್ಲಿ 42 ರನ್ ಸೇರಿಸಿ ಚೇತರಿಕೆ ನೀಡಿದರು. ಒಂದೆಡೆ ನಿಯಮಿತವಾಗಿ ವಿಕೆಟ್‌ಗಳು ಉರುಳು ತ್ತಿದ್ದರೂ ರಿಚಾ ಮಾತ್ರ ಕೊನೆಯವರೆಗೂ ಹೋರಾಟ ತೋರಿದರು. ಅಮನ್ಜೋತ್ ಕೌರ್ ಹಾಕಿದ 19ನೇ ಓವರ್‌ನಲ್ಲಿ ಸತತ ಮೂರು ಸಿಕ್ಸರ್ ಬಾರಿಸಿದರು. ಶ್ರೇಯಾಂಕಾ ಪಾಟೀಲ ಅವರೊಂದಿಗೆ 9ನೇ ವಿಕೆಟ್ ಜೊತೆಯಾಟದಲ್ಲಿ 55 (18ಎ) ರನ್ ಸೇರಿಸಿದರು. ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ಅಮೇಲಿಯಾ ಕೆರ್‌ಗೆ ವಿಕೆಟ್ ಒಪ್ಪಿಸಿದರು. ಹೇಯಲಿ ಮ್ಯಾಥ್ಯೂಸ್ 3 ವಿಕೆಟ್ ಗಳಿಸಿದರೆ, ಶಬ್ನಿಮ್ ಇಸ್ಮಾಯಿಲ್ ಮತ್ತು ಅಮೇಲಿಯಾ ತಲಾ 2 ವಿಕೆಟ್ ಕಬಳಿಸಿದರು.
ಟಾಸ್ ಗೆದ್ದ ಆರ್‌ಸಿಬಿ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಆರ್‌ಸಿಬಿ ಬೌಲರ್ ಲಾರೆನ್ ಬೆಲ್ ಬೀಸಿದ ಎಲ್‌ಬಿಡಬ್ಲ್ಯು ಬಲೆಗೆ ಸಜೀವನ್ ಸಜನಾ (7 ರನ್) ಬಿದ್ದರು. ಇನ್ನೊಂದು ಬದಿಯಲ್ಲಿದ್ದ ಹೇಯಲಿ (56;39ಎ, 4x9) ಅವರೊಂದಿಗೆ ಸೇರಿಕೊಂಡ ಬ್ರಂಟ್ ಎರಡನೇ ವಿಕೆಟ್ ಜೊತೆಯಾಟ ದಲ್ಲಿ 131 ರನ್ ಸೇರಿಸಿದರು.
ಲಾರೆನ್ ಬೆಲ್ ಅವರೇ ಈ ಜೊತೆಯಾಟವನ್ನು ಮುರಿಯುವಲ್ಲಿ ಯಶಸ್ವಿಯಾದರು. ಆದರೆ ಕ್ರೀಸ್‌ಗೆ ಬಂದ ನಾಯಕಿ ಹರ್ಮನ್‌ಪ್ರೀತ್ ಕೌರ್ 12 ಎಸೆತಗಳಲ್ಲಿ 20 ರನ್ ಗಳಿಸಿದರು. 19ನೇ ಓವರ್‌ನಲ್ಲಿ ನದೀನ್ ಡಿ ಕ್ಲರ್ಕ್ ಹಾಕಿದ ಎಸೆತದಲ್ಲಿ ಕೌರ್ ಕ್ಯಾಚ್ ಪಡೆದ ಜಾರ್ಜಿಯಾ ವೊಲ್ ಸಂಭ್ರಮಿಸಿದರು. ಅಮನ್ಜೋತ್ ಕೌರ್ ವಿಕೆಟ್ ಕಬಳಿಸುವಲ್ಲಿ ಶ್ರೇಯಾಂಕಾ ಯಶಸ್ವಿಯಾದರು. ಆದರೆ ಬ್ರಂಟ್ ಶತಕ ಗಳಿಸುವುದನ್ನು ತಡೆಯಲು ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ.
ಸಂಕ್ಷಿಪ್ತ ಸ್ಕೋರು:
ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 199 (ಹೇಯಲಿ ಮ್ಯಾಥ್ಯೂಸ್ 56, ನ್ಯಾಟ್ ಶಿವರ್ ಬ್ರಂಟ್ ಔಟಾಗದೇ 100, ಲಾರೆನ್ ಬೆಲ್ 21ಕ್ಕೆ2).
ರಾಯಲ್ ಚಾಲೆಂಜರ್ಸ್ ಬೆಂಗಳೂರು: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 184 (ರಿಚಾ ಘೋಷ್ 90, ನದೀನ್ ಡಿ ಕ್ಲರ್ಕ್ 28; ಶಬ್ನಿಮ್ ಇಸ್ಮಾಯಿಲ್ 25ಕ್ಕೆ 2, ಹೇಯಲಿ 10ಕ್ಕೆ 3, ಅಮೇಲಿಯಾ ಕೆರ್ 37ಕ್ಕೆ 2). ಪಂದ್ಯದ ಆಟಗಾರ್ತಿ: ನ್ಯಾಟ್ ಶಿವರ್ ಬ್ರಂಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.