ADVERTISEMENT

WPL ಆರಂಭಕ್ಕೂ ಮುನ್ನವೇ RCBಗೆ ಆಘಾತ: ಟೂರ್ನಿಯಿಂದ ಹೊರಬಿದ್ದ ಪ್ರಮುಖ ಆಲ್‌ರೌಂಡರ್

ಪಿಟಿಐ
Published 30 ಡಿಸೆಂಬರ್ 2025, 14:00 IST
Last Updated 30 ಡಿಸೆಂಬರ್ 2025, 14:00 IST
   

ಮುಂಬೈ: ಮಹಿಳಾ ಪ್ರೀಮಿಯರ್‌ ಲೀಗ್‌(ಡಬ್ಲ್ಯೂಪಿಎಲ್) ಟೂರ್ನಿಯ ಆರಂಭಕ್ಕೂ ಮುನ್ನವೇ ಮಾಜಿ ಚಾಂಪಿಯನ್ ರಾಯಲ್‌ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡದ ಸ್ಟಾರ್‌ ಆಲ್‌ರೌಂಡರ್ ಎಲಿಸ್ ಪೆರಿ ಅವರು ವೈಯಕ್ತಿಕ ಕಾರಣದಿಂದಾಗಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

ಆಸ್ಟ್ರೇಲಿಯಾದ ಎಲಿಸ್ ಪೆರಿ ಹಾಗೂ ಅನ್ನಾಬೆಲ್ ಸದರ್‌ಲ್ಯಾಂಡ್ ಅವರು ವೈಯಕ್ತಿಕ ಕಾರಣದಿಂದಾಗಿ ಈ ಬಾರಿಯ ಟೂರ್ನಿಯಿಂದ ಹೊರಗುಳಿದಿದ್ದಾರೆ ಎಂದು ಡಬ್ಲ್ಯೂಪಿಎಲ್ ತಿಳಿಸಿದೆ.

ಎಲಿಸ್ ಪೆರಿ ಅವರ ಬದಲಿಗೆ ಭಾರತೀಯ ಆಲ್‌ರೌಂಡರ್ ಸಯಾಲಿ ಸತ್ಘರೆ ಅವರು ಮೀಸಲು ಬೆಲೆ ₹30 ಲಕ್ಷಕ್ಕೆ ಆರ್‌ಸಿಬಿ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ADVERTISEMENT

ಅನ್ನಾಬೆಲ್ ಸದರ್‌ಲ್ಯಾಂಡ್ ಅವರು ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿದ್ದರು. ಅವರ ಜಾಗಕ್ಕೆ ಕಳೆದ ಸೀಸನ್‌ನಲ್ಲಿ ಯುಪಿ ವಾರಿಯರ್ಸ್‌ ಪರ ಆಡಿದ್ದ ಆಸೀಸ್ ಲೆಗ್‌ ಸ್ಪಿನ್ನರ್ ಅಲಾನ ಕಿಂಗ್ ಅವರನ್ನು ಮೀಸಲು ಬೆಲೆ ₹60 ಲಕ್ಷಕ್ಕೆ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ.

ಯುಪಿ ವಾರಿಯರ್ಸ್‌ ತಂಡದ ತಾರಾ ನೋರಿಸ್‌ ಅವರು ಮುಂದಿನ ವರ್ಷ ನೇಪಾಳದಲ್ಲಿ ನಡೆಯಲಿರುವ ಮಹಿಳಾ ಟಿ20 ವಿಶ್ವಕಪ್‌ ಕ್ವಾಲಿಫೈಯರ್‌ನಲ್ಲಿ ಭಾಗವಹಿಸಲಿರುವ ಯುಎಸ್‌ಎ ತಂಡದಲ್ಲಿ ಸ್ಥಾನಪಡೆದಿದ್ದು, ಡಬ್ಲ್ಯೂಪಿಎಲ್‌ನಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ, ಆಸೀಸ್ ಆಲ್‌ರೌಂಡರ್ ಚಾರ್ಲಿ ನಾಟ್ ಅವರು ಮೀಸಲು ಬೆಲೆ ₹10 ಲಕ್ಷಕ್ಕೆ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಡಬ್ಲ್ಯೂಪಿಎಲ್ 4ನೇ ಆವೃತ್ತಿಯು ಜನವರಿ 9ರಿಂದ ಆರಂಭವಾಗಲಿದೆ. ನವಿ ಮುಂಬೈ ಹಾಗೂ ವಡೋದರದಲ್ಲಿ ಪಂದ್ಯಗಳು ಜರುಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.