
ನವಿ ಮುಂಬೈ: ಯುಪಿ ವಾರಿಯರ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡವು ಮಹಿಳಾ ಪ್ರಿಮಿಯರ್ ಲೀಗ್ ಟಿ20 ಕ್ರಿಕೆಟ್ ಕ್ರಿಕೆಟ್ ಟೂರ್ನಿಯಲ್ಲಿ ಶನಿವಾರ ಮುಖಾಮುಖಿಯಾಗಲಿವೆ.
ಡಿವೈ ಪಾಟೀಲ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಯುಪಿ ತಂಡವು ಹೊಸ ನಾಯಕಿ ಮೆಗ್ ಲ್ಯಾನಿಂಗ್ ನೇತೃತ್ವದಲ್ಲಿ ಕಣಕ್ಕಿಳಿಯಲಿದೆ. ಆಸ್ಟ್ರೇಲಿಯಾದ ಲ್ಯಾನಿಂಗ್ ಅವರು ಈ ಹಿಂದಿನ ಮೂರು ಆವೃತ್ತಿಗಳಲ್ಲಿ ಡೆಲ್ಲಿ ಕ್ಯಾಪಿಟಲ್ ತಂಡದ ನಾಯಕಿಯಾಗಿದ್ದರು. ಎಲ್ಲ ಸಲವೂ ಡೆಲ್ಲಿ ಫೈನಲ್ ತಲುಪಿತ್ತು. ಇದರಿಂದಾಗಿ ಯುಪಿ ತಂಡದ ಅಭಿಮಾನಿಗಳ ಬಳಗದಲ್ಲಿ ಹೊಸ ನಿರೀಕ್ಷೆ ಗರಿಗೆದರಿದೆ. ಅಲಿಸಾ ಹೀಲಿ ಅವರ ಗೈರು ಹಾಜರಿಯಲ್ಲಿ ಲ್ಯಾನಿಂಗ್ ಹೊಣೆ ನಿಭಾಯಿಸುತ್ತಿದ್ದಾರೆ. ತಂಡದಲ್ಲಿ ಸೋಫಿ ಎಕ್ಲೆಸ್ಟೋನ್, ಆಲ್‌ರೌಂಡರ್ ದೀಪ್ತಿ ಶರ್ಮಾ, ಹರ್ಲೀನ್ ಡಿಯೊಲ್, ವೇಗದ ಬೌಲರ್ ಕ್ರಾಂತಿ ಗೌಡ, ದಿಯಾಂದ್ರ ಡಾಟಿನ್, ಶಿಖಾ ಪಾಂಡೆ ಮತ್ತು ಫೋಬಿ ಲಿಚ್‌ಫೀಲ್ಡ್ ಅವರಂತಹ ಉತ್ತಮ ಆಟಗಾರ್ತಿಯರೂ ಇದ್ದಾರೆ.
ಆಸ್ಟ್ರೇಲಿಯಾದವರೇ ಆದ ಆ್ಯಷ್ಲೆ ಗಾರ್ಡನರ್ ನಾಯಕತ್ವದ ಗುಜರಾತ್ ಜೈಂಟ್ಸ್ ತಂಡವು ಈ ಬಾರಿ ಎಲ್ಲ ವಿಭಾಗಗಳಲ್ಲಿಯೂ ಹೊಸಪ್ರತಿಭೆಗಳೊಂದಿಗೆ ಕಣಕ್ಕಿಳಿಯಲಿದೆ. ಆದರೆ ಈ ತಂಡದಲ್ಲಿ ಭಾರತ ತಂಡದ ಪ್ರಮುಖ ಬ್ಯಾಟರ್‌ಗಳು ಇಲ್ಲ. ಆದರೂ ಬೆತ್ ಮೂನಿ, ಸೋಫಿ ಡಿವೈನ್, ಜಾರ್ಜಿಯಾ ವೆರ್‌ಹ್ಯಾಮ್ ಹಾಗೂ ಕಿಮ್ ಗಾರ್ಥ್ ಅವರ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದೆ. ಅನುಭವಿ ಸ್ಪಿನ್ನರ್ ರಾಜೇಶ್ವರಿ ಗಾಯಕವಾಡ, ರೇಣುಕಾ ಸಿಂಗ್ ಠಾಕೂರ್ ಹಾಗೂ ತಿತಾಸ್ ಸಾಧು ಅವರು ಬೌಲಿಂಗ್ ವಿಭಾಗದ ಶಕ್ತಿಯಾಗಿದ್ದಾರೆ.
ಪಂದ್ಯ ಆರಂಭ: ಮಧ್ಯಾಹ್ನ 3.30.
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಜಿಯೊಹಾಟ್‌ಸ್ಟಾರ್ ಆ್ಯಪ್.
ಡೆಲ್ಲಿಗೆ ಶುಭಾರಂಭದ ನಿರೀಕ್ಷೆ ಮೂರು ಬಾರಿಯ ರನ್ನರ್ಸ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರು ಆಡಲಿದೆ. ಶನಿವಾರ ರಾತ್ರಿ ನಡೆಯುವ ಪಂದ್ಯದಲ್ಲಿ ಜಿಮಿಮಾ ರಾಡ್ರಿಗಸ್ ನಾಯಕತ್ವದ ಡೆಲ್ಲಿ ತಂಡವು ಹರ್ಮನ್‌ಪ್ರೀತ್ ಕೌರ್ ಬಳಗವನ್ನು ಎದುರಿಸಲಿದೆ.
ಹೋದ ವರ್ಷ ಭಾರತ ಮಹಿಳಾ ತಂಡವು ಏಕದಿನ ವಿಶ್ವಕಪ್ ಜಯಿಸುವಲ್ಲಿ ಜಿಮಿಮಾ ಪಾತ್ರವೂ ಮಹತ್ವದ್ದಾಗಿತ್ತು. ಈ ಸಲದ ಡಬ್ಲ್ಯುಪಿಎಲ್ ಆವೃತ್ತಿಯಲ್ಲಿ ಮೆಗ್ ಲ್ಯಾನಿಂಗ್ ಅವರು ಬೇರೆ ತಂಡಕ್ಕೆ ಹೋಗಿದ್ದರಿಂದ ಜಿಮಿಮಾಗೆ ನಾಯಕತ್ವ ಒಲಿದಿದೆ. ಅವರ ತಂಡ ಸಂಯೋಜನೆಯು ಉತ್ತಮವಾಗಿದೆ. ಶಫಾಲಿ ವರ್ಮಾ ಹಾಗೂ ದಕ್ಷಿಣ ಆಫ್ರಿಕಾದ ಲಾರಾ ವೋಲ್ವಾರ್ಟ್ ಅವರು ಮಹಿಳಾ ಕ್ರಿಕೆಟ್‌ನಲ್ಲಿ ಅಗ್ರಮಾನ್ಯ ಬ್ಯಾಟರ್‌ಗಳಾಗಿದ್ದಾರೆ. ಕರ್ನಾಟಕದ ನಿಕಿ ಪ್ರಸಾದ್ ಆಲ್‌ರೌಂಡರ್ ಸ್ನೇಹ ರಾಣಾ ಮರೈಜಾನ್ ಕಾಪ್ ಅಲನಾ ಕಿಂಗ್ ತಾನಿಯಾ ಭಾಟಿಯಾ ಅವರು ತಂಡದ ಬೆನ್ನೆಲುಬಾಗಿದ್ದಾರೆ. ಪಂದ್ಯ ಆರಂಭ: ರಾತ್ರಿ 7.30
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.