ADVERTISEMENT

WPL | ಶತಕ ವಂಚಿತ ಮಂದಾನ: ಆರ್‌ಸಿಬಿ ಗೆಲುವಿನ ಓಟಕ್ಕಿಲ್ಲ ತಡೆ

ಪಿಟಿಐ
Published 18 ಜನವರಿ 2026, 1:48 IST
Last Updated 18 ಜನವರಿ 2026, 1:48 IST
<div class="paragraphs"><p>ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕಿ ಸ್ಮೃತಿ ಮಂದಾನ ಬ್ಯಾಟಿಂಗ್‌ </p></div>

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕಿ ಸ್ಮೃತಿ ಮಂದಾನ ಬ್ಯಾಟಿಂಗ್‌

   

–ಪಿಟಿಐ ಚಿತ್ರ

ನವಿ ಮುಂಬೈ: ನಾಯಕಿ ಸ್ಮೃತಿ ಮಂದಾನ (96;61ಎ, 4x13, 6x3) ಅವರು ಕೇವಲ ನಾಲ್ಕು ರನ್‌ಗಳಿಂದ ಶತಕ ತಪ್ಪಿಸಿಕೊಂಡರು. ಆದರೆ, ಅವರ ಬ್ಯಾಟಿಂಗ್‌ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಹಾಲಿ ಆವೃತ್ತಿಯಲ್ಲಿ ಸತತ ನಾಲ್ಕನೇ ಜಯ ಸಾಧಿಸಿತು.

ADVERTISEMENT

ಡಿ.ವೈ. ಪಾಟೀಲ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ ತಂಡವು ಎಂಟು ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಸುಲಭವಾಗಿ ಮಣಿಸಿತು. ಜೊತೆಗೆ ಅಜೇಯ ಓಟದೊಂದಿಗೆ ಅಂಕಪ‍ಟ್ಟಿಯಲ್ಲಿ ಅಗ್ರಸ್ಥಾನವನ್ನು ಮತ್ತಷ್ಟು ಭದ್ರ ಮಾಡಿಕೊಂಡಿತು.

167 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡವು ಮಂದಾನ ಮತ್ತು ಜಾರ್ಜಿಯಾ ವಾಲ್‌ (ಔಟಾಗದೇ 54;42ಎ, 4x5, 6x2) ಅವರ ಶತಕದ ಜೊತೆಯಾಟದ ಬಲದಿಂದ 10 ಎಸೆತಗಳು ಬಾಕಿ ಇರುವಂತೆ 2 ವಿಕೆಟ್‌ಗೆ 169 ರನ್ ಗಳಿಸಿ ಸಂಭ್ರಮಿಸಿತು.

ಆರ್‌ಸಿಬಿ ತಂಡದ ಆರಂಭ ಉತ್ತಮವಾಗಿರಲಿಲ್ಲ. ಆರಂಭ ಆಟಗಾರ್ತಿ ಗ್ರೆಸ್‌ ಹ್ಯಾರಿಸ್‌ (1) ನಿರಾಸೆ ಮೂಡಿಸಿದರು. ಆದರೆ, ಮಂದಾನ ಮತ್ತು ಜಾರ್ಜಿಯಾ ಅವರು ಎರಡನೇ ವಿಕೆಟ್‌ ಜೊತೆಯಾಟದಲ್ಲಿ 142 (92ಎ) ಸೇರಿಸಿ ತಂಡವನ್ನು ಗೆಲುವಿನ ಸನಿಹ ತಂದರು. ಜಯಕ್ಕೆ 11 ರನ್‌ ಬೇಕಿದ್ದಾಗ ನಂದಿನಿ ಶರ್ಮಾ ಎಸೆತದಲ್ಲಿ ಮಂದಾನ ಡ್ರೈವ್‌ ಮಾಡಿದ ಚೆಂಡು ಲೂಸಿ ಹ್ಯಾಮಿಲ್ಟನ್ ಅವರ ಬೊಗಸೆಯೊಳಗೆ ಸೇರಿಕೊಂಡಿತು. ಇದರೊಂದಿಗೆ ಲೀಗ್‌ ಇತಿಹಾಸದಲ್ಲೇ ಮೊದಲ ಶತಕ ದಾಖಲಿಸಿಸುವ ಅವಕಾಶ ಕೈತಪ್ಪಿತು. 

ಇದಕ್ಕೂ ಮೊದಲು ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿದ ಕ್ಯಾಪಿಟಲ್ಸ್ ತಂಡಕ್ಕೆ ಆಕ್ರಮಣಕಾರಿ ಆಟಗಾರ್ತಿ ಶಫಾಲಿ ವರ್ಮಾ (62; 41ಎ, 5x4, 6x4) ಆಸರೆಯಾದರು. ಅವರ ಅರ್ಧಶತಕದ ನೆರವಿನಿಂದ ಡೆಲ್ಲಿ ತಂಡವು 166 ರನ್‌ಗಳ ಗೌರವಾರ್ಹ ಮೊತ್ತ ಗಳಿಸಿತು. 

ಲಾರೆನ್ ಬೆಲ್ (26ಕ್ಕೆ3) ಮತ್ತು ಸಯಾಲಿ ಸಾತ್ಗರೆ (27ಕ್ಕೆ3) ಅವರ ದಾಳಿಗೆ ತತ್ತರಿಸಿದ ಡೆಲ್ಲಿ ತಂಡ ಕೇವಲ ಹತ್ತು ರನ್‌ಗಳಾಗುವಷ್ಟರಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಬೆಲ್ ಅವರು ಹಾಕಿದ ಪಂದ್ಯದ ಮೊದಲ ಓವರಿನಲ್ಲೇ ಲಿಝೆಲ್ ಲೀ ಮತ್ತು ಲಾರಾ ವೋಲ್ವಾರ್ಟ್ ನಿರ್ಗಮಿಸಿದ್ದರು. ಸಯಾಲಿ ತಮ್ಮ ಮೊದಲ ಓವರಿನಲ್ಲೇ ನಾಯಕಿ ಜೆಮಿಮಾ ರಾಡ್ರಿಗಸ್ (4) ಮತ್ತು ಮರೈಝನ್ ಕಾಪ್ (0) ಅವರ ವಿಕೆಟ್‌ಗಳನ್ನು ಪಡೆದರು. ಈ ನಾಲ್ವರೂ ಬೌಲ್ಡ್‌ ಆಗಿದ್ದರು. 

ಆದರೆ ಶಫಾಲಿ ಪ್ರತ್ಯಾಕ್ರಮಣದ ಆಟವಾಡಿದರಲ್ಲದೇ, ಎರಡು ಜೊತೆಯಾಟಗಳ ಮೂಲಕ ತಂಡದ ಚೇತರಿಕೆಗೆ ಕಾರಣರಾದರು. ವೈವಿಧ್ಯಮಯ ಹೊಡೆತಗಳನ್ನು ಆಡಿದ ಅವರು ಐದನೇ ವಿಕೆಟ್‌ಗೆ ನಿಕಿ ಪ್ರಸಾದ್‌ (12) ಅವರೊಂದಿಗೆ 59 ರನ್ ಸೇರಿಸಿ ಕುಸಿತ ತಡೆಗಟ್ಟಿದರು. 

ಕೊನೆಯಲ್ಲಿ ಲ್ಯೂಸಿ ಹ್ಯಾಮಿಲ್ಟನ್‌ (36, 19ಎಸೆತ) ಅವರ ಆಟದಿಂದ ತಂಡದ ಮೊತ್ತ 160ರ ಗಡಿ ದಾಟಿತು. ಕೊನೆಯ ಎಸೆತದಲ್ಲಿ ಡೆಲ್ಲಿ ಆಲೌಟ್ ಆಯಿತು.

ಸಂಕ್ಷಿಪ್ತ ಸ್ಕೋರು:

ಡೆಲ್ಲಿ ಕ್ಯಾಪಿಟಲ್ಸ್: 20 ಓವರುಗಳಲ್ಲಿ 166 (ಶಫಾಲಿ ವರ್ಮಾ 62, ಸ್ನೇಹ ರಾಣಾ 22, ಲ್ಯೂಸಿ ಹ್ಯಾಮಿಲ್ಟನ್‌ 36; ಲಾರೆನ್ ಬೆಲ್‌ 26ಕ್ಕೆ2, ಸಯಾಲಿ ಸಾತ್ಗರೆ 27ಕ್ಕೆ3, ಪ್ರೇಮಾ ರಾವತ್ 16ಕ್ಕೆ2).

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: 18.2 ಓವರ್‌ಗಳಲ್ಲಿ 2 ವಿಕೆಟ್‌ಗೆ 169 (ಸ್ಮೃತಿ ಮಂದಾನ 96, ಜಾರ್ಜಿಯಾ ವಾಲ್‌ ಔಟಾಗದೇ 54; ಮರೈಝನ್ ಕಾಪ್ 21ಕ್ಕೆ 1). ಪಂದ್ಯದ ಆಟಗಾರ್ತಿ: ಸ್ಮೃತಿ ಮಂದಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.