ADVERTISEMENT

WTC Final: 48 ತಾಸು ಮೊದಲೇ ತಿಳಿದಿತ್ತು: ಕೊನೆಗೂ ಮೌನ ಮುರಿದ ಅಶ್ವಿನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜೂನ್ 2023, 10:35 IST
Last Updated 16 ಜೂನ್ 2023, 10:35 IST
   

ನವದೆಹಲಿ: ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಭಾರತವನ್ನು ಸೋಲಿಸಿದ ಆಸ್ಟ್ರೇಲಿಯಾ ಟ್ರೋಫಿ ಜಯಿಸಿದೆ.

ಭಾರತ ತಂಡದಲ್ಲಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಕೈಬಿಟ್ಟಿರುವುದು ಹೆಚ್ಚಿನ ಟೀಕೆಗೆ ಕಾರಣವಾಗಿತ್ತು.

ಲಂಡನ್‌ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡಕ್ಕೆ 209 ರನ್ ಅಂತರದ ಹೀನಾಯ ಸೋಲು ಎದುರಾಗಿತ್ತು.

ADVERTISEMENT

ಈಗ ತಂಡದ ಆಡುವ ಬಳಗದಲ್ಲಿ ಅವಕಾಶ ಸಿಗದಿರುವುದರ ಬಗ್ಗೆ ವಿಶ್ವದ ನಂ.1 ಟೆಸ್ಟ್ ಬೌಲರ್ ಅಶ್ವಿನ್ ಮೌನ ಮುರಿದಿದ್ದಾರೆ.

ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಅಶ್ವಿನ್, ನನಗೆ ಅವಕಾಶ ನಿರಾಕರಿಸಿರುವ ವಿಚಾರ 48 ತಾಸು ಮೊದಲೇ ನನಗೆ ತಿಳಿದಿತ್ತು ಎಂದು ಹೇಳಿದ್ದಾರೆ.

ನನ್ನನ್ನು ಯಾತಕ್ಕಾಗಿ ಕೈಬಿಟ್ಟಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸುವುದು ಕಷ್ಟ. ಪ್ರಶಸ್ತಿ ಹಂತದ ವರೆಗೆ ತಲುಪಲು ನಾನು ತಂಡದ ಭಾಗವಾಗಿದ್ದರಿಂದ ಫೈನಲ್‌ನಲ್ಲೂ ಆಡುವುದನ್ನು ಬಯಸಿದ್ದೆ ಎಂದು ಹೇಳಿದ್ದಾರೆ.

2018-19ರ ಬಳಿಕ ವಿದೇಶಿ ಪಿಚ್‌ಗಳಲ್ಲಿ ನನ್ನ ಬೌಲಿಂಗ್ ಅತ್ಯುತ್ತವಾಗಿದ್ದು, ತಂಡಕ್ಕಾಗಿ ಪಂದ್ಯ ಗೆಲ್ಲಿಸಿಕೊಡಲು ಸಾಧ್ಯವಾಗಿದೆ. ಆದರೆ ನಾಯಕ ಅಥವಾ ಕೋಚ್ ದೃಷ್ಟಿಕೋನದಿಂದ ನೋಡಿದಾಗ, ಕಳೆದ ಬಾರಿ ಇಂಗ್ಲೆಂಡ್ ವಿರುದ್ಧ ನಾವು ನಾಲ್ವರು ವೇಗಿಗಳು ಮತ್ತು ಓರ್ವ ಸ್ಪಿನ್ನರ್ ಸಂಯೋಜನೆಯಲ್ಲಿ 2-2ರ ಸಮಬಲ ಸಾಧಿಸಿದ್ದೆವು. ಬಹುಶಃ ಈ ಬಾರಿ ಫೈನಲ್‌ನಲ್ಲೂ ಅದೇ ಸಂಯೋಜನೆಯನ್ನು ಯೋಜಿಸಿರಬಹುದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.