ADVERTISEMENT

ಡಬ್ಲ್ಯುಟಿಸಿ ಫೈನಲ್‌: ವಿಜೇತ ತಂಡಕ್ಕೆ ₹ 11.71 ಕೋಟಿ ಬಹುಮಾನ

ಪಿಟಿಐ
Published 14 ಜೂನ್ 2021, 15:25 IST
Last Updated 14 ಜೂನ್ 2021, 15:25 IST
ಐಸಿಸಿ ಲೋಗೊ
ಐಸಿಸಿ ಲೋಗೊ   

ದುಬೈ: ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ ಪಂದ್ಯದ ವಿಜೇತರು ₹ 11.71 ಕೋಟಿ ಬಹುಮಾನ ಮೊತ್ತ ಜೇಬಿಗಿಳಿಸಲಿದ್ದಾರೆ. ಇದರೊಂದಿಗೆ ‘ಟೆಸ್ಟ್ ಚಾಂಪಿಯನ್‌ಷಿಪ್‌ನ ಗದೆ'ಯನ್ನು ಪಡೆಯಲಿದ್ದಾರೆ ಎಂದು ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಸೋಮವಾರ ತಿಳಿಸಿದೆ.

ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿ ಇದೇ 18ರಿಂದ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಸೆಣಸಲಿವೆ.

‘ಟೆಸ್ಟ್ ಚಾಂಪಿಯನ್‌ಷಿಪ್ ವಿಜೇತ ತಂಡ ₹ 11.71 ಕೋಟಿ ಬಹುಮಾನ ಗಳಿಸಿದರೆ, ರನ್ನರ್‌ ಅಪ್ ತಂಡವು ₹ 5.85 ಕೋಟಿ ತನ್ನದಾಗಿಸಿಕೊಳ್ಳಲಿದೆ‘ ಎಂದು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

‘ಒಂಬತ್ತು ತಂಡಗಳ ಚಾಂಪಿಯನ್‌ಷಿಪ್‌ ಸುಮಾರು ಎರಡು ವರ್ಷಗಳಿಗೂ ಹೆಚ್ಚು ಕಾಲ ನಡೆದಿದೆ. ಮೊಟ್ಟಮೊದಲ ಬಾರಿ ಈ ಚಾಂಪಿಯನ್‌ಷಿಪ್ ಆಯೋಜನೆಯಾಗಿದೆ. ಮೂರನೇ ಸ್ಥಾನ ಗಳಿಸಿದವರು ₹ 3.29 ಕೋಟಿ, ನಾಲ್ಕನೇ ಸ್ಥಾನಕ್ಕೆ ₹ 2.56 ಕೋಟಿ, ಐದನೇ ಸ್ಥಾನಕ್ಕೆ ₹ 1.46 ಕೋಟಿ ಹಾಗೂ ಇನ್ನುಳಿದ ನಾಲ್ಕು ತಂಡಗಳು ತಲಾ ₹ 73 ಲಕ್ಷ ಬಹುಮಾನ ಪಡೆಯಲಿವೆ‘ ಎಂದು ಐಸಿಸಿ ತಿಳಿಸಿದೆ.

ಚಾಂಪಿಯನ್‌ ತಂಡವು ‘ಟೆಸ್ಟ್ ಚಾಂಪಿಯನ್‌ಷಿಪ್ ಗದೆ‘ಯನ್ನೂ ಪಡೆಯಲಿದೆ. ಈ ಹಿಂದೆ ಅದನ್ನು ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ತಂಡಕ್ಕೆ ನೀಡಲಾಗುತ್ತಿತ್ತು.

‘ಫೈನಲ್ ಪಂದ್ಯ ಡ್ರಾ ಅಥವಾ ಟೈ ಆದರೆ ಎರಡೂ ತಂಡಗಳಿಗೆ ಬಹುಮಾನ ಮೊತ್ತವನ್ನು ಹಂಚಲಾಗುವುದು‘ ಎಂದು ಐಸಿಸಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.