ಲಂಡನ್: ಜೇಕಬ್ ಬೆಥೆಲ್ ಅವರು ಇಂಗ್ಲೆಂಡ್ ಕ್ರಿಕೆಟ್ ತಂಡದ ಅತಿ ಕಡಿಮೆ ವಯಸ್ಸಿನ ನಾಯಕನಾಗಿ ಕಣಕ್ಕಿಳಿಯಲಿದ್ದಾರೆ.
21 ವರ್ಷ ವಯಸ್ಸಿನ ಜೇಕಬ್ ಅವರು ಮುಂದಿನ ತಿಂಗಳು ಐರ್ಲೆಂಡ್ ಎದುರು ನಡೆಯಲಿರುವ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ. ಮೂರು ಪಂದ್ಯಗಳ ಈ ಸರಣಿಯು ಡಬ್ಲಿನ್‌ನಲ್ಲಿ ನಡೆಯಲಿದೆ. ಮುಂದಿನ ವರ್ಷ ಭಾರತ ಮತ್ತು ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಪೂರ್ವಸಿದ್ಧತೆಯ ದೃಷ್ಟಿಯಿಂದ ಈ ಸರಣಿಯು ಇಂಗ್ಲೆಂಡ್‌ಗೆ ಮುಖ್ಯವಾಗಿದೆ.
ವಾರ್ವಿಕ್‌ಶೈರ್ ಕ್ಲಬ್ ಆಲ್‌ರೌಂಡರ್ ಆಗಿರುವ ಇಂಗ್ಲೆಂಡ್‌ನ ಉದಯೋನ್ಮುಖ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಇದುವರೆಗೂ ಅವರು ಯಾವುದೇ ಮಾದರಿಯಲ್ಲಿಯೂ ಶತಕ ದಾಖಲಿಸಿಲ್ಲ.
ಯೋಜನೆಯಂತೆ ಜೇಕಬ್ ಅವರು ನಾಯಕರಾಗಿ ಆಡಿದರೆ, ಮಾಂಟಿ ಬೌಡೆನ್ ಅವರ ದಾಖಲೆಯನ್ನು ಮೀರುವರು. 1888–89ರಲ್ಲಿ ಕೇಪ್‌ಟೌನ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರು ಆಡಿದ್ದ ಇಂಗ್ಲೆಂಡ್ ತಂಡವನ್ನು ಮಾಂಟಿ ಮುನ್ನಡೆಸಿದ್ದರು. ಆಗ ಅವರಿಗೆ 23 ವರ್ಷ, 144 ದಿನಗಳ ವಯಸ್ಸಾಗಿತ್ತು.
ಜೇಕಬ್ ಅವರು ಇದುವರೆಗೆ ನಾಲ್ಕು ಟೆಸ್ಟ್, 13 ಟಿ20 ಮತ್ತು 12 ಏಕದಿನ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ್ದಾರೆ. ಈಚೆಗೆ ಲಂಡನ್‌ನ ಓವಲ್‌ನಲ್ಲಿ ನಡೆದಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಣ ಸರಣಿಯ ಐದನೇ ಟೆಸ್ಟ್‌ನಲ್ಲಿ ಜೇಕಬ್ ಆಡಿದ್ದರು. ಆದರೆ ಅದರಲ್ಲಿ ಎರಡೂ ಇನಿಂಗ್ಸ್‌ಗಳಲ್ಲಿ ಕ್ರಮವಾಗಿ ಆರು ಮತ್ತು ಐದು ರನ್ ಗಳಿಸಿದ್ದರು. ಎಡಗೈ ಸ್ಪಿನ್ನರ್ ಆಗಿರುವ ಅವರು ವಿಕೆಟ್ ಗಳಿಸಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.