ADVERTISEMENT

ಇನ್ನು ಏಷ್ಯಾದಲ್ಲೂ ಕಾಲ್ಚಳಕದ ಸಂಭ್ರಮ

ಫೆಬ್ರುವರಿಯಲ್ಲಿ ಮುಗಿದ ಪ್ರಾಥಮಿಕ, ಪ್ಲೇ ಆಫ್‌ ಹಂತದ ಪಂದ್ಯಗಳು l ಗುಂಪು ಹಂತದ ಹಣಾಹಣಿಗೆ ಸೆಪ್ಟೆಂಬರ್ 14ರಂದು ಮರುಚಾಲನೆ

ವಿಕ್ರಂ ಕಾಂತಿಕೆರೆ
Published 11 ಸೆಪ್ಟೆಂಬರ್ 2020, 19:30 IST
Last Updated 11 ಸೆಪ್ಟೆಂಬರ್ 2020, 19:30 IST
ಫೆಬ್ರುವರಿಯಲ್ಲಿ ನಡೆದ ’ಡಿ‘ ಗುಂಪಿನ ಪಂದ್ಯದಲ್ಲಿ ನಸಾರ್ (ಹಳದಿ ಪೋಷಾಕು) ಮತ್ತು ಅಲ್ ಸದ್ ತಂಡಗಳ ಆಟಗಾರರ ಪೈಪೋಟಿ–ಎಎಫ್‌ಪಿ ಚಿತ್ರ
ಫೆಬ್ರುವರಿಯಲ್ಲಿ ನಡೆದ ’ಡಿ‘ ಗುಂಪಿನ ಪಂದ್ಯದಲ್ಲಿ ನಸಾರ್ (ಹಳದಿ ಪೋಷಾಕು) ಮತ್ತು ಅಲ್ ಸದ್ ತಂಡಗಳ ಆಟಗಾರರ ಪೈಪೋಟಿ–ಎಎಫ್‌ಪಿ ಚಿತ್ರ   

ಬೆಂಗಳೂರು: ಕೊರೊನಾ ವೈರಾಣು ದಾಳಿಯ ನಂತರ ಸ್ಥಗಿತಗೊಂಡ ಫುಟ್‌ಬಾಲ್ ಚಟುವಟಿಕೆ ಯುರೋ ಪ್‌ನ ಕೆಲವು ರಾಷ್ಟ್ರಗಳಲ್ಲಿ ಪುನರಾರಂಭ ಗೊಂಡು ತಿಂಗಳುಗಳೇ ಕಳೆದಿವೆ. ಇಂಗ್ಲಿಷ್ ಪ್ರೀಮಿಯರ್ ಲೀಗ್, ಲಾಲಿಗಾ ಮುಂತಾದ ಟೂರ್ನಿಗಳು ಪ್ರೇಕ್ಷಕರಿಲ್ಲದ ಅಂಗಣ‘ಗಳಲ್ಲಿ ರೋಮಾಂಚನ ಸೃಷ್ಟಿಸಿವೆ.

ಇದೇ 14ರಿಂದ ಎಎಫ್‌ಸಿ ಚಾಂಪಿ ಯನ್ಸ್ ಲೀಗ್ ಮೂಲಕ ಏಷ್ಯಾ ಖಂಡ ದಲ್ಲೂ ಕಾಲ್ಚಳಕದ ಪುಳಕ ನೀಡಲು ಏಷ್ಯನ್ ಫುಟ್‌ಬಾಲ್ ಕಾನ್ಫೆಡರೇಷನ್ ಮುಂದಾಗಿದೆ. 23ರಿಂದ ಎಎಫ್‌ಸಿ ಕಪ್ ಟೂರ್ನಿಯೂ ನಡೆಯಲಿದೆ. ಮಾರ್ಚ್‌ ತಿಂಗಳಲ್ಲಿ ಈ ಎರಡೂ ಟೂರ್ನಿಗಳನ್ನು ಸ್ಥಗಿತಗೊಳಿಸಲಾಗಿತ್ತು.

ಜನವರಿ 14ರಂದು ಪ್ರಾಥಮಿಕ ಹಂತದ ಪಂದ್ಯಗಳೊಂದಿಗೆ ಎಎಫ್‌ಸಿ ಚಾಂಪಿಯನ್ಸ್‌ ಲೀಗ್‌ಗೆ ಚಾಲನೆ ಸಿಕ್ಕಿತ್ತು. ಜನವರಿ 28ರಂದು ಪ್ಲೇ ಆಫ್ ಪಂದ್ಯಗಳು ನಡೆದಿದ್ದವು. ಗುಂಪು ಹಂತದ ಪಂದ್ಯಗಳು ಆರಂಭಗೊಂಡದ್ದು ಫೆಬ್ರುವರಿ 10ರಂದು. ಮಾರ್ಚ್ ನಾಲ್ಕರಂದು ‘ಎಚ್‘ ಗುಂಪಿನ ಪಂದ್ಯ ಮುಗಿದ ನಂತರ ಟೂರ್ನಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಲಾಯಿತು.

ADVERTISEMENT

ಕಾನ್ಫೆಡರೇಷನ್‌ಗೆ ಒಳಪಡುವ ಬಹುತೇಕ ರಾಷ್ಟ್ರಗಳಲ್ಲಿ ಕೊರೊನಾ ಸೋಂಕು ಏರುಗತಿಯಲ್ಲಿ ಸಾಗಿದ್ದರಿಂದ ಟೂರ್ನಿಯ ಪುನರಾರಂಭ ಸಾಧ್ಯವಾಗಿರಲಿಲ್ಲ. ಇದೀಗ ದಿಟ್ಟತನ ಮೆರೆದಿರುವ ಕಾನ್ಫೆಡರೇಷನ್ ವರ್ಷಾಂತ್ಯದವ ರೆಗೂ ನಿರಂತರವಾಗಿ ಪಂದ್ಯಗಳನ್ನು ನಡೆಸುವುದಾಗಿ ಘೋಷಿಸಿದೆ.

ಪಶ್ಚಿಮ ಏಷ್ಯಾದ ತಂಡಗಳ ಗುಂಪು ಹಂತದ ಪಂದ್ಯಗಳು ಸೆಪ್ಟೆಂಬರ್ 14 ರಿಂದ ನಡೆಯಲಿವೆ. ಪೂರ್ವ ಏಷ್ಯಾದ ತಂಡಗಳ ಪಂದ್ಯಗಳು ಮಲೇಷ್ಯಾದಲ್ಲಿ ಅಕ್ಟೋಬರ್ 16ರಿಂದ ನಡೆಯಲಿವೆ. ‘ಎ’ ಗುಂಪಿನ ಪಂದ್ಯಗಳು ದೋಹಾದಲ್ಲಿ 14ರಿಂದ ನಡೆಯಲಿವೆ. 17ರಿಂದ ‘ಬಿ’ ಗುಂಪಿನ ಪಂದ್ಯಗಳಿಗೆ ದೋಹಾ ಮತ್ತು ದುಬೈ ಆತಿಥ್ಯ ವಹಿಸಲಿವೆ. ‘ಸಿ’ ಮತ್ತು ‘ಡಿ’ ಗುಂಪಿನ ಪಂದ್ಯಗಳು ಕ್ರಮವಾಗಿ 15 ಮತ್ತು 18ರಿಂದ ದೋಹಾದ ವಿವಿಧ ಕ್ರೀಡಾಂಗಣಗಳಲ್ಲಿ ನಡೆಯಲಿವೆ. ‘ಇ’ಯಿಂದ ‘ಎಚ್‌’ ಗುಂಪಿನ ವರೆಗಿನ ಪಂದ್ಯಗಳು ಅಕ್ಟೋಬರ್‌ನಲ್ಲಿ ನಡೆಯಲಿದ್ದರೂ ಸ್ಥಳ ಇನ್ನೂ ನಿಗದಿಯಾಗಿಲ್ಲ.

l ಏನಿದು ಎಎಫ್‌ಸಿ ಚಾಂಪಿಯನ್ಸ್ ಲೀಗ್?

ಏಷ್ಯಾ ಕ್ಲಬ್ ಚಾಂಪಿಯನ್‌ಷಿಪ್ ಎಂದು ಕರೆಯಲಾಗುತ್ತಿದ್ದ ಟೂರ್ನಿ ಯನ್ನು 2002ರಲ್ಲಿ ಎಎಫ್‌ಸಿ ಚಾಂಪಿಯನ್ಸ್ ಲೀಗ್ ಎಂದು ಮರುನಾ ಮಕರಣ ಮಾಡಲಾಗಿತ್ತು. ಪೂರ್ವ ಮತ್ತು ಪಶ್ಚಿಮ ವಲಯದ ತಂಡಗಳು ಗುಂಪು ಹಂತದಲ್ಲಿ ಸೆಣಸಿ ನಾಕೌಟ್ ಹಂತಕ್ಕೆ ತಲುಪುತ್ತವೆ. ಪ್ರಶಸ್ತಿ ಗೆಲ್ಲುವ ತಂಡ ಫಿಫಾ ಕ್ಲಬ್ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯುತ್ತದೆ. ಹಾಲಿ ಚಾಂಪಿಯನ್ ಅಲ್–ಹಿಲಾಲ್ ಕಳೆದ ಬಾರಿಯ ಕ್ಲಬ್ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿತ್ತು.

ಗೋವಾ ತಂಡಕ್ಕೆ ಅವಕಾಶ

ಕಳೆದ ಸಾಲಿನ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಟೂರ್ನಿಯ ಲೀಗ್ ಹಂತದ ಚಾಂಪಿಯನ್‌ ಆಗಿ ಹೊರಹೊಮ್ಮಿದ ಎಫ್‌ಸಿ ಗೋವಾ ತಂಡ 2021ರ ಎಎಫ್‌ಸಿ ಚಾಂಪಿಯನ್ಸ್ ಲೀಗ್ ಟೂರ್ನಿಯ ಗುಂಪು ಹಂತದಲ್ಲಿ ಆಡಲಿದೆ.ಚಾಂಪಿಯನ್ಸ್ ಲೀಗ್‌ಗೆ ನೇರ ಅರ್ಹತೆ ಗಳಿಸಿದ ಭಾರತದ ಮೊದಲ ತಂಡ ಇದು.

2017ರಲ್ಲಿ ಬೆಂಗಳೂರು ಎಫ್‌ಸಿ ಮತ್ತು 2019–20ನೇ ಸಾಲಿನಲ್ಲಿ ಚೆನ್ನೈಯಿನ್ ಎಫ್‌ಸಿ ತಂಡ ಅರ್ಹತಾ ಸುತ್ತಿನಲ್ಲಿ ಆಡಿತ್ತು. ಆದರೆ ಗುಂಪು ಹಂತ ಕ್ಕೇರಲು ಸಾಧ್ಯವಾಗಿರಲಿಲ್ಲ. ಬಿಎಫ್‌ಸಿ ತಂಡ ಅಲ್‌ ಬೆಹದತ್‌ಗೆ ಮಣಿದಿತ್ತು. ಚೆನ್ನೈಯಿನ್ ತಂಡ ಈ ವರ್ಷದ ಫೆಬ್ರುವರಿ 14ರಂದು ಅಹಮದಾಬಾದ್‌ನಲ್ಲಿ ಬಹರೇನ್‌ನ ರಿಫಾ ವಿರುದ್ಧ 0–1ರಿಂದ ಸೋತು ಹೊರಬಿದ್ದಿತ್ತು. ಈಗ 32 ತಂಡಗಳು ಗುಂಪು ಹಂತದಲ್ಲಿದ್ದು ಈ ಸಂಖ್ಯೆಯನ್ನು 40ಕ್ಕೆ ಏರಿಸಲು ಎಎಫ್‌ಸಿ ನಿರ್ಧರಿಸಿರುವುದರಿಂದ ಎಫ್‌ಸಿ ಗೋವಾ ತಂಡಕ್ಕೆ ನೇರ ಪ್ರವೇಶ ಸಿಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.