
ಫುಟ್‌ಬಾಲ್
ನವದೆಹಲಿ: ಭಾರತ ತಂಡವು, ಎಎಫ್‌ಸಿ 17 ವರ್ಷದೊಳಗಿನವರ ಏಷ್ಯನ್ ಕಪ್ ಟೂರ್ನಿಯಲ್ಲಿ ‘ಡಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಡ್ರಾ ಸಮಾರಂಭ ಕ್ವಾಲಾಲಂಪುರದಲ್ಲಿರುವ ಎಎಫ್‌ಸಿ ಹೌಸ್‌ನಲ್ಲಿ ಗುರುವಾರ ನಡೆಯಿತು.
ಭಾರತದ ಜೊತೆಗೆ ಉಜ್ಬೇಕಿಸ್ತಾನ, ಆಸ್ಟ್ರೇಲಿಯಾ ಮತ್ತು ಉತ್ತರ ಕೊರಿಯಾ ತಂಡಗಳೂ ಡಿ ಗುಂಪಿನಲ್ಲಿವೆ. ಟೂರ್ನಿಯು ಮೇ 5 ರಿಂದ 22ರವರೆಗೆ ಸೌದಿ ಅರೇಬಿಯಾದಲ್ಲಿ ನಡೆಯಲಿದೆ.
ಅರ್ಹತಾ ಸುತ್ತಿನಲ್ಲಿ ಇರಾನ್, ಲೆಬನಾನ್, ಪ್ಯಾಲಸ್ತೀನ್ ಮತ್ತು ತೈವಾನ್ ತಂಡಗಳಿಗಿಂತ ಮೇಲಿನ ಸ್ಥಾನ ಪಡೆದ ಆಧಾರದಲ್ಲಿ ಭಾರತ ತಂಡವು ಈ ಟೂರ್ನಿಯ ಇತಿಹಾಸದಲ್ಲಿ 10ನೇ ಬಾರಿ ಆಡುವ ಅವಕಾಶ ಪಡೆಯಿತು.
‘ಬ್ಲೂ ಕೋಲ್ಟ್ಸ್’ ತಂಡ ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಇದರ ನಂತರ ಉಜ್ಬೇಕಿಸ್ತಾನ ಮತ್ತು ಕೊರಿಯಾ ವಿರುದ್ಧ ಆಡಲಿದೆ. ಕಳೆದ ಸಲದ ವಿಜೇತರಾದ ಆಧಾರದಲ್ಲಿ ಉಜ್ಬೇಕಿಸ್ತಾನ ಟೂರ್ನಿಗೆ ನೇರ ಪ್ರವೇಶ ಪಡೆದಿದೆ.
ಎ ಗುಂಪಿನಲ್ಲಿ ಆತಿಥೇಯ ಸೌದಿ ಅರೇಬಿಯಾ, ತಾಜಿಕಿಸ್ತಾನ, ಥಾಯ್ಲೆಂಡ್ ಮತ್ತು ಮ್ಯಾನ್ಮಾರ್ ತಂಡಗಳಿವೆ. ಬಿ ಗುಂಪಿನಲ್ಲಿ ಜಪಾನ್, ಇಂಡೊನೇಷ್ಯಾ, ಚೀನಾ ಮತ್ತು ಕತಾರ್ ತಂಡಗಳಿದ್ದರೆ, ಸಿ ಗುಂಪಿನಲ್ಲಿ ದಕ್ಷಿಣ ಕೊರಿಯಾ, ಯೆಮೆನ್, ವಿಯೆಟ್ನಾಂ ಮತ್ತು ಯುಎಇ ತಂಡಗಳಿವೆ.
ಪ್ರತಿಯೊಂದು ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಎರಡು ತಂಡಗಳು ಕ್ವಾರ್ಟರ್‌ಫೈನಲ್ ತಲುಪಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.