ADVERTISEMENT

ಎಐಎಫ್ಎಫ್: ನಾಮಪತ್ರಗಳು ಕ್ರಮಬದ್ಧ

ಪಿಟಿಐ
Published 28 ಆಗಸ್ಟ್ 2022, 21:19 IST
Last Updated 28 ಆಗಸ್ಟ್ 2022, 21:19 IST

ನವದೆಹಲಿ: ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ಚುನಾವಣೆಯಲ್ಲಿ ವಿವಿಧ ಸ್ಥಾನಗಳಿಗೆ ಸಲ್ಲಿಕೆಯಾಗಿರುವ ಎಲ್ಲ 20 ನಾಮಪತ್ರಗಳು ಕ್ರಮಬದ್ಧವಾಗಿರುವುದಾಗಿ ಚುನಾವಣಾಧಿಕಾರಿ ಉಮೇಶ್‌ ಸಿನ್ಹಾ ಹೇಳಿದ್ದಾರೆ.

‘ಅಧ್ಯಕ್ಷ, ಉಪಾಧ್ಯಕ್ಷ, ಖಜಾಂಚಿ ಸ್ಥಾನ ಮತ್ತು ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ಸಲ್ಲಿಕೆಯಾಗಿರುವ 20 ನಾಮಪತ್ರಗಳೂ ಕ್ರಮಬದ್ಧವಾಗಿವೆ’ ಎಂದು ಭಾನುವಾರ ಪ್ರಕಟಿಸಿದ್ದಾರೆ. ನಾಮಪತ್ರ ವಾಪಸ್‌ ಪಡೆಯಲು ಆ.30 ಮಧ್ಯಾಹ್ನ 1ರ ವರೆಗೆ ಅವಕಾಶವಿದೆ.

ತಲಾ ಒಂದು ಅಧ್ಯಕ್ಷ, ಉಪಾಧ್ಯಕ್ಷ, ಖಜಾಂಚಿ ಹಾಗೂ 14 ಕಾರ್ಯ ಕಾರಿ ಸಮಿತಿ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಅಧ್ಯಕ್ಷ ಸ್ಥಾನಕ್ಕೆ ಮಾಜಿ ಆಟಗಾರರಾದ ಬೈಚುಂಗ್‌ ಭುಟಿಯಾ ಮತ್ತು ಕಲ್ಯಾಣ್‌ ಚೌಬೆ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಉಪಾಧ್ಯಕ್ಷ ಸ್ಥಾನಕ್ಕೆ ರಾಜಸ್ತಾನ ಫುಟ್‌ಬಾಲ್‌ ಸಂಸ್ಥೆ ಅಧ್ಯಕ್ಷ ಮಾನವೇಂದ್ರ ಸಿಂಗ್ ಮತ್ತು ಕರ್ನಾಟಕ ಫುಟ್‌ಬಾಲ್‌ ಸಂಸ್ಥೆ ಅಧ್ಯಕ್ಷ ಎನ್‌.ಎ.ಹ್ಯಾರಿಸ್‌ ನಡುವೆ ಸ್ಪರ್ಧೆ ನಡೆಯಲಿದೆ.

ADVERTISEMENT

14 ಕಾರ್ಯಕಾರಿ ಸಮಿತಿ ಸ್ಥಾನಗಳಿಗೆ 14 ಮಂದಿ ನಾಮಪತ್ರ ಸಲ್ಲಿಸಿರುವುದರಿಂದ ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.