ADVERTISEMENT

ಇನ್ನು ಎಐಎಫ್‌ಎಫ್‌ ಸ್ಪರ್ಧೆಗೆ ಇಲ್ಲ: ಪಟೇಲ್

ಪಿಟಿಐ
Published 22 ಡಿಸೆಂಬರ್ 2020, 4:23 IST
Last Updated 22 ಡಿಸೆಂಬರ್ 2020, 4:23 IST
ಫುಟ್‌ಬಾಲ್‌
ಫುಟ್‌ಬಾಲ್‌   

ನವದೆಹಲಿ: ಚುನಾವಣೆ ಯಾವಾಗಲಾದರೂ ನಡೆಯಲಿ, ತಾವಂತೂ ಇನ್ನು ಮುಂದೆ ಸ್ಪರ್ಧಿಸುವುದಿಲ್ಲ ಎಂದು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್) ಅಧ್ಯಕ್ಷ ಪ್ರಫುಲ್ ಪಟೇಲ್ ಸೋಮವಾರ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ತನ್ನ ತೀರ್ಪು ಪ್ರಕಟಿಸುವ ವರೆಗೂ ಈಗಿನ ಕಾರ್ಯಕಾರಿ ಸಮಿತಿಯನ್ನು ಮುಂದುವರಿಸಲು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಗಿದೆ.

ವರ್ಚುವಲ್ ಆಗಿ ನಡೆದ ಸಭೆಯಲ್ಲಿ ಫಿಫಾ ಮತ್ತು ಏಷ್ಯನ್ ಫುಟ್‌ಬಾಲ್ ಕಾನ್ಫೆಡರೇಷನ್ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಭಾರತ ಒಲಿಂಪಿಕ್ ಸಂಸ್ಥೆಯನ್ನು ಪ್ರತಿನಿಧಿಸಿದ ಖಜಾಂಚಿ ಆನಂದೇಶ್ವರ ಪಾಂಡೆ ಸಭೆಯ ವೀಕ್ಷಕರಾಗಿಯೂ ಕಾರ್ಯನಿರ್ವಹಿಸಿದರು.

ಪದಾಧಿಕಾರಿಗಳ ನಾಲ್ಕು ವರ್ಷಗಳ ಅವಧಿ ಸೋಮವಾರ ಮುಕ್ತಾಯಗೊಂಡಿದೆ. ಸಾಮಾನ್ಯವಾಗಿ ಅವಧಿ ಮುಗಿದ ದಿನವೇ ಚುನಾವಣೆ ನಡೆಯುತ್ತದೆ. ಆದರೆ ಕಳೆದ ತಿಂಗಳು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದ ಎಐಎಫ್‌ಎಫ್‌, ಈಗಿನ ಕಾರ್ಯಕಾರಿ ಸಮಿತಿಯನ್ನು ಮುಂದುವರಿಸಲು ಅವಕಾಶ ನೀಡುವಂತೆ ಕೋರಿತ್ತು. ಆಡಳಿತಾಧಿಕಾರಿಗೆ ಇನ್ನೂ ಚುಣಾವಣೆಯ ರೂಪುರೇಷೆ ಸಿದ್ಧಗೊಳಿಸಲು ಆಗಲಿಲ್ಲ ಎಂದು ಅದು ಹೇಳಿತ್ತು.

ADVERTISEMENT

ಸುಪ್ರೀಂ ಕೋರ್ಟ್‌ 2017ರಲ್ಲಿ ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ.ಖುರೇಷಿ ಮತ್ತು ಭಾಸ್ಕರ್ ಗಂಗೂಲಿ ಅವರನ್ನು ಒಳಗೊಂಡ ಆಡಳಿತ ಸಮಿತಿಯನ್ನು ನೇಮಕ ಮಾಡಿತ್ತು. ಆದರೆ ಚುನಾವಣೆಗೆ ಸಂಬಂಧಿಸಿದ ಕಾಗದಪತ್ರಗಳನ್ನು ಸಿದ್ಧಪಡಿಸಲಾಗಿದೆ ಎಂದೂ ಚುನಾವಣೆ ಮುಂದೂಡಲು ಮನವಿ ಮಾಡಿಕೊಂಡಿಲ್ಲವೆಂದೂ ಖುರೇಷಿ ಹೇಳಿದ್ದಾರೆ. ಈ ನಡುವೆ ಭಾರತ ತಂಡದ ಮಾಜಿ ಗೋಲ್‌ ಕೀಪರ್ ಕಲ್ಯಾಣ್ ಚೌಬೆ ಆದಷ್ಟು ಬೇಗ ಚುನಾವಣೆ ನಡೆಸಲು ಆದೇಶ ನೀಡಬೇಕು ಎಂದು ಕೋರಿ ಸುಪ್ರೀಂ ಕೊರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಕ್ರೀಡಾನೀತಿಯ ಪ್ರಕಾರ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ನ ಅಧ್ಯಕ್ಷರು ಗರಿಷ್ಠ ಮೂರು ಅವಧಿಯ 12 ವರ್ಷ ಸ್ಥಾನದಲ್ಲಿ ಮುಂದುವರಿಯಬಹುದು. ದೀರ್ಘಕಾಲ ಅಧ್ಯಕ್ಷರಾಗಿದ್ದ ಪ್ರಿಯರಂಜನ್ ದಾಸ್ ಮುನ್ಶಿ ಅವರಿಗೆ ಹೃದಯಸ್ತಂಭನವಾದ ನಂತರ 2008ರಲ್ಲಿ ಮಾಜಿ ಸಚಿವ ಪ್ರಫುಲ್ ಪಟೇಲ್ ಎಐಎಫ್‌ಎಫ್‌ ಹಂಗಾಮಿ ಅಧ್ಯಕ್ಷರಾಗಿದ್ದರು. 2009ರ ಅಕ್ಟೋಬರ್‌ನಲ್ಲಿ ಪೂರ್ಣಾವಧಿಯ ಅಧ್ಯಕ್ಷರಾದರು. 2012 ಮತ್ತು 2016ರಲ್ಲಿ ಪುನಾರಾಯ್ಕೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.