ADVERTISEMENT

ಈಸ್ಟ್ ಬೆಂಗಾಲ್ ಮನವಿ ನಿರಾಕರಿಸಿದ ಎಐಎಫ್‌ಎಫ್‌

ಪಿಟಿಐ
Published 4 ಫೆಬ್ರುವರಿ 2021, 16:23 IST
Last Updated 4 ಫೆಬ್ರುವರಿ 2021, 16:23 IST
ರಾಬಿ ಫಾವ್ಲರ್ –ಐಎಸ್‌ಎಲ್ ಮೀಡಿಯಾ ಚಿತ್ರ
ರಾಬಿ ಫಾವ್ಲರ್ –ಐಎಸ್‌ಎಲ್ ಮೀಡಿಯಾ ಚಿತ್ರ   

ಕೋಲ್ಕತ್ತ: ಕೋಚ್‌ ರಾಬಿ ಫಾವ್ಲರ್ ಮೇಲೆ ಹೇರಿದ ನಾಲ್ಕು ಪಂದ್ಯಗಳ ನಿಷೇಧದಲ್ಲಿ ರಿಯಾಯಿತಿ ನೀಡಬೇಕು ಎಂದು ಕೋರಿ ಎಸ್‌ಸಿ ಈಸ್ಟ್ ಬೆಂಗಾಲ್ ತಂಡ ಸಲ್ಲಿಸಿದ್ದ ಮನವಿಯನ್ನು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್‌) ನಿರಾಕರಿಸಿದೆ. ಆದರೆ ಭಾರತದ ರೆಫರಿ ಬಗ್ಗೆ ಕೋಚ್ ನೀಡಿರುವ ಹೇಳಿಕೆ ಜನಾಂಗೀಯ ನಿಂದನೆ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಹೇಳಿದೆ.

ಜನವರಿ 29ರಂದು ಎಫ್‌ಸಿ ಗೋವಾ ಎದುರು ನಡೆದ ಎಸ್‌ಸಿ ಈಸ್ಟ್ ಬೆಂಗಾಲ್ ತಂಡದ ಪಂದ್ಯ 1–1ರಲ್ಲಿ ಡ್ರಾ ಆಗಿತ್ತು. ಆ ಪಂದ್ಯದ ಬಗ್ಗೆ ನೀಡಿದ ಹೇಳಿಕೆಯಲ್ಲಿ ಭಾರತದ ರೆಫರಿಗಳ ಬಗ್ಗೆ ಫಾವ್ಲರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು. ಎಐಎಫ್‌ಎಫ್‌ ನೀತಿಯ ನಿಯಮ 59.1ರಡಿ ಇದನ್ನು ಶಿಸ್ತು ಉಲ್ಲಂಘನೆ ಎಂದು ಪರಿಗಣಿಸಲಾಗಿದ್ದು ನಾಲ್ಕು ಪಂದ್ಯಗಳ ನಿಷೇಧ ಮತ್ತು ₹ ಐದು ಲಕ್ಷ ದಂಡ ವಿಧಿಸಲಾಗಿತ್ತು.

ಈ ಆದೇಶ ಹೊರಬಿದ್ದ ಒಂದು ದಿನದ ನಂತರ ಈಸ್ಟ್ ಬೆಂಗಾಲ್‌ನ ಹಿರಿಯ ಅಧಿಕಾರಿ ದೇಬಬ್ರತ ಸರ್ಕಾರ್ ಅವರು ಎಐಎಫ್‌ಎಫ್‌ ಶಿಸ್ತು ಸಮಿತಿಯ ಅಧ್ಯಕ್ಷ ಉಷಾನಾಥ್ ಬ್ಯಾನರ್ಜಿ ಅವರಿಗೆ ಮನವಿ ಸಲ್ಲಿಸಿ ತೀರ್ಪು ಮರುಪರಿಶೀಲನೆ ಮಾಡುವಂತೆ ಆಗ್ರಹಿಸಿದ್ದರು. ಅದನ್ನು ನಿರಾಕರಿಸಿದ ಬ್ಯಾನರ್ಜಿ ‘ಸಮಿತಿಯ ಸದಸ್ಯರೆಲ್ಲರೂ ಅವಿರೋಧವಾಗಿ ನೀಡಿರುವ ತೀರ್ಪು ಇದು. ಮಾತ್ರವಲ್ಲ, ಫಾವ್ಲರ್ ತೀಕ್ಷ್ಣ ಮಾತುಗಳನ್ನು ಬಳಸಿ ಹೇಳಿಕೆ ನೀಡಿದ್ದಾರೆ. ಆದ್ದರಿಂದ ಮರುಪರಿಶೀಲನೆ ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

ADVERTISEMENT

ಇದೇ 19ರಂದು ನಡೆಯಲಿರುವ ಎಟಿಕೆ ಮೋಹನ್ ಬಾಗನ್ ವಿರುದ್ಧದ ಮಹತ್ವದ ಪಂದ್ಯಕ್ಕೆ ನಿಷೇಧದಿಂದಾಗಿ ಫಾವ್ಲರ್ ಲಭ್ಯ ಇರುವುದಿಲ್ಲ. 27ರಂದು ಒಡಿಶಾ ಎಫ್‌ಸಿ ಎದುರಿನ ಪಂದ್ಯದ ವೇಳೆಯಷ್ಟೇ ಅವರು ಮತ್ತೆ ತಂಡದೊಂದಿಗೆ ಇರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.