ADVERTISEMENT

ಮರಡೋನಾಗೆ ಕಣ್ಣೀರ ಧಾರೆಯ ವಿದಾಯ

ಏಜೆನ್ಸೀಸ್
Published 27 ನವೆಂಬರ್ 2020, 14:41 IST
Last Updated 27 ನವೆಂಬರ್ 2020, 14:41 IST
ಬ್ಯೂನಸ್ ಐರಿಸ್‌ನ ಕಾಸ ರೊಸಾಡ ಪ್ರೆಸಿಡೆನ್ಶಿಯಲ್ ಪ್ಯಾಲೇಸ್‌ನ ಹೊರಗೆ ಜಮಾಯಿಸಿದ್ದ ಮರಡೋನಾ ಅಭಿಮಾನಿಗಳು –ಎಎಫ್‌ಪಿ ಚಿತ್ರ
ಬ್ಯೂನಸ್ ಐರಿಸ್‌ನ ಕಾಸ ರೊಸಾಡ ಪ್ರೆಸಿಡೆನ್ಶಿಯಲ್ ಪ್ಯಾಲೇಸ್‌ನ ಹೊರಗೆ ಜಮಾಯಿಸಿದ್ದ ಮರಡೋನಾ ಅಭಿಮಾನಿಗಳು –ಎಎಫ್‌ಪಿ ಚಿತ್ರ   

ಬ್ಯೂನಸ್ ಐರಿಸ್‌: ಕಾಲ್ಚೆಂಡಿನಾಟದ ಮೂಲಕ ಮೋಡಿ ಮಾಡಿ ದೇಶದ ಹೆಸರನ್ನು ಉತ್ತುಂಗಕ್ಕೇರಿಸಿದ ಡಿಯೆಗೊ ಮರಡೋನಾ ಅವರಿಗೆ ಅರ್ಜೆಂಟೀನಾ ಜನತೆ ಕಣ್ಣೀರ ಧಾರೆಯೊಂದಿಗೆ ವಿದಾಯ ಹೇಳಿದರು. ಹೃದಯಾಘಾತದಿಂದ ಬುಧವಾರ ನಿಧನರಾದ ಮರಡೋನಾ ಅವರ ಅಂತ್ಯಕ್ರಿಯೆ ಗುರುವಾರ ಸಂಜೆಗತ್ತಲಲ್ಲಿ (ಸ್ಥಳೀಯ ಕಾಲಮಾನ) ನಡೆಯಿತು.

ನಗರದ ಹೊರವಲಯದಲ್ಲಿರುವ ಬೆಲ್ಲಾ ವಿಸ್ತಾ ಸ್ಮಶಾನದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಕುಟಂಬದವರು ಮತ್ತು ಸಮೀಪದ ಗೆಳೆಯರಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಕಾಸ ರೊಸಾಡ ಪ್ರಸಿಡೆನ್ಶಿಯಲ್ ಪ್ಯಾಲೇಸ್‌ನಲ್ಲಿ ಇರಿಸಲಾಗಿದ್ದ ಪಾರ್ಥಿವ ಶರೀರದ ಅಂತಿಮ ಯಾತ್ರೆ ಆರಂಭಗೊಳ್ಳುತ್ತಿದ್ದಂತೆ ಸಾವಿರಾರು ಅಭಿಮಾನಿಗಳು ದಿಕ್ಕುತೋಚದಂತಾಗಿ ಕೂಗಾಡಿದರು. ಮುನ್ನುಗ್ಗಲು ಪ್ರಯತ್ನಿಸಿದ ಅವರನ್ನು ಪೊಲೀಸರು ತಡೆದರು. ಆದರೆ ಪರಿಸ್ಥಿತಿ ನಿಯಂತ್ರಣಾತೀತವಾದಾಗ ಅಶ್ರುವಾಯು ಪ್ರಯೋಗಿಸಲಾಯಿತು. ರಬ್ಬರ್‌ ಗುಂಡುಗಳನ್ನೂ ಅವರತ್ತ ತೂರಿಬಿಡಲಾಯಿತು.

ಅರ್ಜೇಂಟೀನಾದ ಧ್ವಜ ಹೊದಿಸಿ ಇರಿಸಲಾಗಿದ್ದ ಮೃತಶರೀರದ ದರ್ಶನ ಪಡೆಯಲು ಬೆಳಿಗ್ಗೆಯಿಂದಲೇ ಅಭಿಮಾನಿಗಳು ಸಾಲುಗಟ್ಟಿದ್ದರು. ಜಯಘೋಷ ಹಾಕುತ್ತ ನಿಂತಿದ್ದ ಅವರನ್ನು ತಡೆಯಲು ಪೊಲೀಸರು ಹರಸಾಹಸಪಟ್ಟಿದ್ದರು. ಮಧ್ಯಾಹ್ನದ ನಂತರ ಭದ್ರತೆಯ ದೃಷ್ಟಿಯಿಂದ ಮೃತಶರೀರವನ್ನು ಮತ್ತೊಂದು ಕೊಠಡಿಗೆ ಸ್ಥಳಾಂತರಿಸಬೇಕಾಗಿ ಬಂತು. ಸಂಜೆ ಹೊರತಂದ ಮೃತದೇಹದ ಅಂತಿಮ ಯಾತ್ರೆಯ ಸಂದರ್ಭದಲ್ಲಿ ನಗರದ ರಸ್ತೆಬದಿಯಲ್ಲೂ ಹೊರವಲಯದ ಹೈವೇಯಲ್ಲೂ ಸೇತುವೆಗಳ ಮೇಲೆಯೂ ನಿಂತು ವೀಕ್ಷಿಸಿದ ಲಕ್ಷಾಂತರ ಮಂದಿ ನೆಚ್ಚಿನ ಆಟಗಾರನಿಗೆ ನಮನ ಸಲ್ಲಿಸಿದರು.

ADVERTISEMENT

ಇದೇ ಸಂದರ್ಭದಲ್ಲಿ ನೇಪಲ್ಸ್‌ನಲ್ಲಿ ನೆಪೊಲಿ ತಂಡದ ಆಟಗಾರರು 10ನೇ ಸಂಖ್ಯೆಯ ಜೆರ್ಸಿ (ಮರಡೋನಾ ಅವರ ಪೋಷಾಕಿನ ಸಂಖ್ಯೆ) ಧರಿಸಿ ಗೌರವಾರ್ಥ ಪಂದ್ಯ ಆಡಿದರು. ನೆ‍ಪೊಲಿ ತಂಡಕ್ಕಾಗಿ ಅತಿ ಹೆಚ್ಚು ಕ್ಲಬ್ ಪಂದ್ಯಗಳನ್ನು ಆಡಿರುವ ಮರಡೋನಾ ಎರಡು ಇಟಾಲಿಯನ್ ಚಾಂಪಿಯನ್‌ಷಿಪ್‌ಗಳನ್ನು ಗೆದ್ದುಕೊಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.