ADVERTISEMENT

ಆಫ್ರಿಕಾ: ಫುಟ್‌ಬಾಲ್ ಪಂದ್ಯ ವೀಕ್ಷಿಸಲು ನೂಕು ನುಗ್ಗಲು- ಕಾಲ್ತುಳಿತದಲ್ಲಿ 6 ಸಾವು

ಪಿಟಿಐ
Published 25 ಜನವರಿ 2022, 3:27 IST
Last Updated 25 ಜನವರಿ 2022, 3:27 IST
ಪುಟ್‌ಬಾಲ್ ಪಂದ್ಯ ವೀಕ್ಷಿಸಲು ಬಂಧಿದ್ದ ಅಭಿಮಾನಿ: ಎಪಿ ಚಿತ್ರ
ಪುಟ್‌ಬಾಲ್ ಪಂದ್ಯ ವೀಕ್ಷಿಸಲು ಬಂಧಿದ್ದ ಅಭಿಮಾನಿ: ಎಪಿ ಚಿತ್ರ   

ಯೌಂಡೆ(ಆಫ್ರಿಕಾ): ಆಫ್ರಿಕಾ ಖಂಡದ ಅಗ್ರ ಫುಟ್‌ಬಾಲ್ ಪಂದ್ಯಾವಳಿಯ ಪಂದ್ಯವನ್ನು ಆಯೋಜಿಸಿದ್ದ ಕೆಮರೂನ್ ದೇಶದರಾಜಧಾನಿ ಯೌಂಡೆಯ ಕ್ರೀಡಾಂಗಣದ ಹೊರಗೆ ಸಂಭವಿಸಿದ ನೂಕು ನುಗ್ಗಲಿನಿಂದ ಆದ ಕಾಲ್ತುಳಿತದಲ್ಲಿ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಕೆಮರೂನ್‌ನ ಗವರ್ನರ್ ನಾಸೆರಿ ಪಾಲ್ ಬಿಯಾ ಹೇಳಿದ್ದಾರೆ.

‘ಸದ್ಯ ನಾವು ಒಟ್ಟು ಸಾವು ನೋವುಗಳ ಸಂಖ್ಯೆಯನ್ನು ನೀಡುವ ಸ್ಥಿತಿಯಲ್ಲಿಲ್ಲ’ಎಂದು ಅವರು ಹೇಳಿದ್ದಾರೆ.

ADVERTISEMENT

ಆಫ್ರಿಕನ್ ಕಪ್ ಆಫ್ ನೇಷನ್ಸ್‌ನ ಪಂದ್ಯಾವಳಿಯ ಕೊನೆಯ ನಾಕೌಟ್ ಪಂದ್ಯದಲ್ಲಿ ಆತಿಥೇಯ ಕೊಮೊರೊಸ್ ತಂಡವು ಆಡುವುದನ್ನು ಕಣ್ತುಂಬಿಸಿಕೊಳ್ಳಲು ಅಧಿಕ ಪ್ರಮಾಣದ ಜನ ಸಮೂಹವು ರಾಜಧಾನಿ ಯೌಂಡೆಯಲ್ಲಿರುವ ಒಲೆಂಬೆ ಸ್ಟೇಡಿಯಂಗೆ ಪ್ರವೇಶ ಪಡೆಯಲು ಮುಂದಾಗಿತ್ತು. ಈ ಸಂದರ್ಭ ಸಂಭವಿಸಿದ ನೂಕು ನುಗ್ಗಲಿನಲ್ಲಿ ಹಲವರು ಸಾವಿಗೀಡಾಗಿದ್ದಾರೆ.

ಕನಿಷ್ಠ 40 ಮಂದಿ ಗಾಯಗೊಂಡವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಸಮೀಪದ ಮೆಸ್ಸಾಸ್ಸಿ ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ, ಅವರನ್ನು ಪೊಲೀಸರು ಮತ್ತು ನಾಗರಿಕರು ಆಸ್ಪತ್ರೆಗೆ ಸಾಗಿಸಿದರು. ಅವರೆಲ್ಲರಿಗೂ ಚಿಕಿತ್ಸೆ ನೀಡಲು ಆಸ್ಪತ್ರೆಯು ಸಮರ್ಥವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ನಾವು ಅವರನ್ನು ವಿಶೇಷ ಆಸ್ಪತ್ರೆಗೆ ಸ್ಥಳಾಂತರಿಸಬೇಕಾಗುತ್ತದೆ ಎಂದು ನರ್ಸ್ ಒಲಿಂಗ ಪ್ರುಡೆನ್ಸ್ ಹೇಳಿದ್ದಾರೆ.

ಕಾಲ್ತುಳಿತಕ್ಕೆ ಸಿಲುಕಿದವರಲ್ಲಿ ಮಕ್ಕಳೂ ಸೇರಿದ್ದಾರೆ ಎಂದು ಕ್ರೀಡಾಂಗಣದಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕ್ರೀಡಾಂಗಣದ ಮೇಲ್ವಿಚಾರಕರು ಗೇಟ್‌ಗಳನ್ನು ಮುಚ್ಚಿ ಜನರನ್ನು ಒಳಗೆ ಬಿಡುವುದನ್ನು ನಿಲ್ಲಿಸಿದಾಗ ಕಾಲ್ತುಳಿತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಸುಮಾರು 50,000 ಜನರು ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಪ್ರವೇಶಿಸಲು ಪ್ರಯತ್ನಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕ್ರೀಡಾಂಗಣವು 60,000 ಆಸನಗಳ ಸಾಮರ್ಥ್ಯವನ್ನು ಹೊಂದಿದೆ. ಆದರೆ, ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಶೇಕಡ 80ಕ್ಕಿಂತ ಹೆಚ್ಚು ಆಸನಗಳ ಭರ್ತಿಗೆ ಅವಕಾಶ ನೀಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.