ADVERTISEMENT

ಬ್ರೆಜಿಲ್‌ನ ಸಿಲ್ವಾ ಜೊತೆ ಬಿಎಫ್‌ಸಿ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 20 ಜೂನ್ 2020, 10:44 IST
Last Updated 20 ಜೂನ್ 2020, 10:44 IST
ಕ್ಲೀಟನ್‌ ಸಿಲ್ವಾ (ಎಡ) 
ಕ್ಲೀಟನ್‌ ಸಿಲ್ವಾ (ಎಡ)    

ಬೆಂಗಳೂರು: ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ಆಡುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡವು ಬ್ರೆಜಿಲ್‌ನ ಸ್ಟ್ರೈಕರ್‌ ಕ್ಲೀಟನ್‌ ಸಿಲ್ವಾ ಜೊತೆ ಒಪ್ಪಂದ ಮಾಡಿಕೊಂಡಿದೆ.

ಈ ವಿಷಯವನ್ನು ಬಿಎಫ್‌ಸಿ ಫ್ರಾಂಚೈಸ್‌, ಶನಿವಾರ ಬಹಿರಂಗಪಡಿಸಿದೆ. ಸಿಲ್ವಾ ಅವರು ಒಂದು ವರ್ಷ ಬೆಂಗಳೂರಿನ ತಂಡದಲ್ಲಿ ಆಡಲಿದ್ದಾರೆ.

ಬ್ರೆಜಿಲ್‌ನ ಮ್ಯಾಡುರೀರಾ ಕ್ಲಬ್‌ ಪರ ಆಡುವ ಮೂಲಕ ಫುಟ್‌ಬಾಲ್‌ ಬದುಕು ಆರಂಭಿಸಿದ 33 ವರ್ಷ ವಯಸ್ಸಿನ ಸಿಲ್ವಾ, ಥಾಯ್ಲೆಂಡ್‌ನ ಮೌಂಗ್‌ಥೊಂಗ್‌‌ ಯುನೈಟೆಡ್‌, ಸುಪಾಂಬುರಿ, ಶಾಂಘೈ ಶೆನ್‌ಕ್ಸಿನ್‌, ಪೊಲೀಸ್‌ ಟೆರೊ ಸೇರಿದಂತೆ ಹಲವು ಕ್ಲಬ್‌ಗಳನ್ನು ಪ್ರತಿನಿಧಿಸಿದ ಅನುಭವ ಹೊಂದಿದ್ದಾರೆ. 2014ರಿಂದ 2017ರ ಅವಧಿಯಲ್ಲಿ ಮೌಂಗೊಥೊಂಗ್‌ ಪರ 79 ಪಂದ್ಯಗಳನ್ನು ಆಡಿದ್ದ ಅವರು 57 ಗೋಲುಗಳನ್ನು ದಾಖಲಿಸಿದ್ದರು.

ADVERTISEMENT

ಥಾಯ್ಲೆಂಡ್‌ನ ಲೀಗ್‌ಗಳಲ್ಲಿ 100ಕ್ಕೂ ಹೆಚ್ಚು ಗೋಲುಗಳನ್ನು ದಾಖಲಿಸಿದ ಮೊದಲ ವಿದೇಶಿ ಆಟಗಾರ ಎಂಬ ಹಿರಿಮೆಗೂ ಭಾಜನರಾಗಿದ್ದರು.

‘ನಾನು ಪ್ರತಿನಿಧಿಸುವ ತಂಡವು ಎಲ್ಲಾ ಟೂರ್ನಿಗಳಲ್ಲೂ ಚಾಂಪಿಯನ್‌ ಆಗಬೇಕೆಂದು ಬಯಸುತ್ತೇನೆ. ಬಿಎಫ್‌ಸಿ, ಭಾರತದ ಅತ್ಯಂತ ಯಶಸ್ವಿ ಕ್ಲಬ್‌ ಆಗಿದೆ. ಆ ತಂಡವು ಇನ್ನಷ್ಟು ಮೈಲುಗಲ್ಲುಗಳನ್ನು ಸ್ಥಾಪಿಸಲು ನೆರವಾಗಬೇಕು, ಬೆಂಗಳೂರಿನ ಅಭಿಮಾನಿಗಳನ್ನು ರಂಜಿಸಬೇಕೆಂಬುದು ನನ್ನ ಆಸೆ’ ಎಂದು ಸಿಲ್ವಾ ತಿಳಿಸಿದ್ದಾರೆ.

‘ಸುದೀರ್ಘ ಮಾತುಕತೆಯ ಬಳಿಕ ಈ ಒಪ್ಪಂದಕ್ಕೆ ಸಹಿ ಹಾಕಿದ್ದೇನೆ. ಬಿಎಫ್‌ಸಿ ಬಗ್ಗೆ ಸಾಕಷ್ಟು ವಿಷಯಗಳನ್ನು ಕೇಳಿದ್ದೇನೆ. ಆ ತಂಡದ ಸಾಧನೆಯನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಬಿಎಫ್‌ಸಿ ಪೋಷಾಕು ಧರಿಸುವ ಹಾಗೂ ಆ ತಂಡದ ಆಟಗಾರರನ್ನು ಭೇಟಿಯಾಗುವ ಕ್ಷಣವನ್ನು ಎದುರು ನೋಡುತ್ತಿದ್ದೇನೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.