ADVERTISEMENT

ISL: ಸೆಮಿಫೈನಲ್‌ಗೆ ಲಗ್ಗೆ ಹಾಕಿದ ಬಿಎಫ್‌ಸಿ

ಹಾಲಿ ಚಾಂಪಿಯನ್‌ ಮುಂಬೈ ತಂಡಕ್ಕೆ ಆಘಾತ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2025, 0:25 IST
Last Updated 30 ಮಾರ್ಚ್ 2025, 0:25 IST
ಗೋಲು ದಾಖಲಿಸಿದ ಸುರೇಶ್ ಸಿಂಗ್ ವಾಂಗ್ಜಮ್ ಅವರನ್ನು ಅಭಿನಂದಿಸಿದ ಬೆಂಗಳೂರು ಎಫ್‌ಸಿ ತಂಡದ ಸಹ ಆಟಗಾರರು –ಪ್ರಜಾವಾಣಿ ಚಿತ್ರ: ಎಸ್‌.ಕೆ.ದಿನೇಶ್‌
ಗೋಲು ದಾಖಲಿಸಿದ ಸುರೇಶ್ ಸಿಂಗ್ ವಾಂಗ್ಜಮ್ ಅವರನ್ನು ಅಭಿನಂದಿಸಿದ ಬೆಂಗಳೂರು ಎಫ್‌ಸಿ ತಂಡದ ಸಹ ಆಟಗಾರರು –ಪ್ರಜಾವಾಣಿ ಚಿತ್ರ: ಎಸ್‌.ಕೆ.ದಿನೇಶ್‌   

ಬೆಂಗಳೂರು: ತವರಿನ ಪ್ರೇಕ್ಷಕರ ಮುಂದೆ ಗೋಲುಗಳ ಮಳೆಗರೆದ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ ಆಟಗಾರರು ಇಂಡಿಯನ್‌ ಸೂಪರ್‌ ಲೀಗ್‌ನ ಪ್ಲೇ ಆಫ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಸಿಟಿ ಎಫ್‌ಸಿ ತಂಡವನ್ನು 5–0ಯಿಂದ ಮಣಿಸಿ ಸೆಮಿಫೈನಲ್‌ಗೆ ಲಗ್ಗೆಹಾಕಿದರು.

ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸುನಿಲ್‌ ಚೆಟ್ರಿ ಬಳಗವು ಸಾಂಘಿಕ ಆಟವನ್ನು ಪ್ರದರ್ಶಿಸಿ ಅಧಿಕಾರಯುತ ಗೆಲುವು ಸಾಧಿಸಿತು. ಎರಡು ಬಾರಿಯ ಚಾಂಪಿಯನ್‌ ಮುಂಬೈ ತಂಡವು ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ 2–0ಯಿಂದ ಇದೇ ಕ್ರೀಡಾಂಗಣದಲ್ಲಿ ಬೆಂಗಳೂರು ಎಫ್‌ಸಿ ತಂಡವನ್ನು ಮಣಿಸಿ ಪ್ಲೇ ಆಫ್‌ಗೆ ಅರ್ಹತೆ ಗಿಟ್ಟಿಸಿತ್ತು. ಆ ಸೋಲಿಗೆ ಬಿಎಫ್‌ಸಿ ತಂಡವು ಮುಯ್ಯಿ ತೀರಿಸಿಕೊಂಡಂತಾಗಿದೆ.

ಆರಂಭದಿಂದಲೇ ಚುರುಕಿನ ಆಟವಾಡಿದ ಆತಿಥೇಯ ತಂಡಕ್ಕೆ 9ನೇ ನಿಮಿಷದಲ್ಲಿ ಸುರೇಶ್ ಸಿಂಗ್ ವಾಂಗ್ಜಮ್ ಮುನ್ನಡೆ ಒದಗಿಸಿದರು. 42ನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಎಡ್ಗರ್ ಮೆಂಡೇಜ್, ಬಿಎಫ್‌ಸಿ ತಂಡದ ಮುನ್ನಡೆಯನ್ನು 2–0ಗೆ ಹಿಗ್ಗಿಸಿದರು.

ADVERTISEMENT

ಉತ್ತರಾರ್ಧದಲ್ಲೂ ಪಾರಮ್ಯ ಮೆರೆದ ಬೆಂಗಳೂರು ಆಟಗಾರರು ಎದುರಾಳಿ ತಂಡದ ರಕ್ಷಣಾ ಗೋಡೆಯನ್ನು ಭೇದಿಸಿ ಪಂದ್ಯದ ಮೇಲೆ ಮತ್ತಷ್ಟು ಹಿಡಿತ ಸಾಧಿಸಿದರು. 62ನೇ ನಿಮಿಷದಲ್ಲಿ ರೆಯಾನ್ ವಿಲಿಯಮ್ಸ್, 76ನೇ ನಿಮಿಷದಲ್ಲಿ ನಾಯಕ ಸುನಿಲ್‌ ಚೆಟ್ರಿ ಮತ್ತು 83ನೇ ನಿಮಿಷದಲ್ಲಿ ಜಾರ್ಜ್ ಪೆರೇರಾ ಡಯಾಜ್ ಅವರು ಚೆಂಡನ್ನು ಗುರಿ ಸೇರಿಸಿ ತಂಡದ ಗೆಲುವಿನ ಅಂತರವನ್ನು ಮತ್ತಷ್ಟು ಹೆಚ್ಚಿಸಿದರು. ಮುಂಬೈ ತಂಡಕ್ಕೆ ಯಾವುದೇ ಹಂತದಲ್ಲಿ ಚೇತರಿಸಿಕೊಳ್ಳಲು ಆತಿಥೇಯ ತಂಡ ಅವಕಾಶ ನೀಡಲಿಲ್ಲ. ಮುಂಬೈನ ಮೂವರಿಗೆ ಮತ್ತು ಬಿಎಫ್‌ಸಿಯ ಇಬ್ಬರಿಗೆ ಹಳದಿ ಕಾರ್ಡ್‌ನ ದರ್ಶನವಾಯಿತು.

2018–19ರ ಚಾಂಪಿಯನ್‌ ಬಿಎಫ್‌ಸಿ ತಂಡವು ಸೆಮಿಫೈನಲ್‌ ಲೆಗ್‌ನ ಎರಡು ಪಂದ್ಯಗಳಲ್ಲಿ (ಏ.2 ಮತ್ತು ಏ.6ರಂದು) ಗೋವಾ ಎಫ್‌ಸಿ ತಂಡದೊಂದಿಗೆ ಸೆಣಸಲಿದೆ. ಉಭಯ ತಂಡಗಳ ತವರಿನಲ್ಲಿ ತಲಾ ಒಂದೊಂದು ಪಂದ್ಯಗಳು ನಿಗದಿಯಾಗಿವೆ.

ಮೋಹನ್‌ ಬಾಗನ್‌ ಸೂಪರ್‌ ಜೈಂಟ್ಸ್‌ ಮತ್ತು ಗೋವಾ ಎಫ್‌ಸಿ ತಂಡಗಳು ಲೀಗ್‌ ಹಂತದಲ್ಲಿ ಮೊದಲೆರಡು ಸ್ಥಾನ ಪಡೆದು ಸೆಮಿಫೈನಲ್‌ಗೆ ನೇರಪ್ರವೇಶ ಪಡೆದಿವೆ. ಮತ್ತೊಂದು ಪ್ಲೇ ಆಫ್‌ ಪಂದ್ಯದಲ್ಲಿ ನಾರ್ತ್‌ಈಸ್ಟ್‌ ಯುನೈಟೆಡ್‌ ಮತ್ತು ಜೆಮ್‌ಶೆಡ್‌ಪುರ ತಂಡಗಳು ಭಾನುವಾರ ಮುಖಾಮುಖಿಯಾಗಲಿವೆ. ಗೆದ್ದ ತಂಡವು ಸೆಮಿಫೈನಲ್‌ ಲೆಗ್‌ನಲ್ಲಿ ಮೋಹನ್‌ ಬಾಗನ್‌ ತಂಡವನ್ನು ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.