ADVERTISEMENT

ಗೆಲುವಿನ ಹಂಬಲದಲ್ಲಿ ಬಿಎಫ್‌ಸಿ–ಸಿಎಫ್‌ಸಿ

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ‘ದಕ್ಷಿಣ ಡರ್ಬಿ’ಯಲ್ಲಿ ರೋಚಕ ಹೋರಾಟ ನಿರೀಕ್ಷೆ

ವಿಕ್ರಂ ಕಾಂತಿಕೆರೆ
Published 9 ನವೆಂಬರ್ 2019, 19:32 IST
Last Updated 9 ನವೆಂಬರ್ 2019, 19:32 IST
ಸುನಿಲ್ ಚೆಟ್ರಿ
ಸುನಿಲ್ ಚೆಟ್ರಿ   

ಬೆಂಗಳೂರು: ಮೂರು ಪಂದ್ಯಗಳಲ್ಲಿ ಗೆಲುವು ಕಾಣದೆ ನಿರಾಸೆಗೊಂಡಿರುವ ಹಾಲಿ ಚಾಂಪಿಯನ್ನರು ಮತ್ತು ಮೂರು ಪಂದ್ಯಗಳಲ್ಲಿ ಗೋಲಿನ ಖಾತೆ ತೆರೆಯಲಾಗದ ಎರಡು ಬಾರಿಯ ಚಾಂಪಿಯನ್ನರ ನಡುವಿನ ಹಣಾಹಣಿಗೆ ಕಂಠೀರವ ಕ್ರೀಡಾಂಗಣ ಸಜ್ಜಾಗಿದೆ.

ಚೆನ್ನೈಯಿನ್ ಎಫ್‌ಸಿ (ಸಿಎಫ್‌ಸಿ) ಮತ್ತು ಆತಿಥೇಯ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ತಂಡಗಳ ‘ದಕ್ಷಿಣ ಡರ್ಬಿ’ಯಲ್ಲಿ ಎರಡೂ ತಂಡಗಳು ‘ಖಾತೆ ತೆರೆಯುವ’ ಹುಮ್ಮಸ್ಸಿನೊಂದಿಗೆ ಭಾನುವಾರ ಕಣಕ್ಕೆ ಇಳಿಯಲಿವೆ. ಎರಡೂ ತಂಡಗಳು ಮೊದಲ 3 ಪಂದ್ಯಗಳಲ್ಲಿ ಉತ್ತಮ ಆಟವಾಡಿದ್ದರೂ ಜಯದ ಕನಸು ನನಸಾಗಲಿಲ್ಲ. ಬಿಎಫ್‌ಸಿಗೆ ಸೋಲು ಎದುರಾಗಲಿಲ್ಲ ಎಂಬ ಸಮಾಧಾನ. ಆದರೆ ಚೆನ್ನೈಯಿನ್‌ ಏಕೈಕ ಗೋಲು ಗಳಿಸಲಾಗದೆ ನಿರಾಸೆ ಅನುಭವಿಸಿದೆ. ಉಭಯ ತಂಡಗಳು 3 ಪಾಯಿಂಟ್ ಗಳಿಸಿದ್ದರೂ ಪಟ್ಟಿಯಲ್ಲಿ ಬಿಎಫ್‌ಸಿ 8ನೇ ಸ್ಥಾನದಲ್ಲಿದ್ದು ಚೆನ್ನೈಯಿನ್ ಕೊನೆಯಲ್ಲಿದೆ.

ಕಳೆದ ಬಾರಿ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದ ಬಿಎಫ್‌ಸಿ ಈ ಬಾರಿ ಇಲ್ಲಿಯ ವರೆಗೆ ನಿರಾಸೆ ಕಂಡಿದೆ. ಮೂರೂ ಪಂದ್ಯಗಳಲ್ಲಿ ಸಾಕಷ್ಟು ಅವಕಾಶಗಳನ್ನು ಸೃಷ್ಟಿಸಿದ್ದರೂ ಗೋಲು ಗಳಿಸಲು ಸಾಧ್ಯವಾಗದೇ ಇರುವುದು ತಂಡದಲ್ಲಿ ಆತಂಕ ಮೂಡಿಸಿದೆ. ತಂಡದ ಆಟಗಾರರು ಒಟ್ಟು 12 ಬಾರಿ ಚೆಂಡನ್ನು ಗುರಿಯತ್ತ ಒದ್ದಿದ್ದಾರೆ. ಆದರೆ ಯಶಸ್ಸು ಕಂಡದ್ದು ಒಮ್ಮೆ ಮಾತ್ರ.

ADVERTISEMENT

ಮಿಕು ಅನುಪಸ್ಥಿತಿ ಕಾಡಿತೆ?: ಕಳೆದ 2 ಆವೃತ್ತಿಗಳಲ್ಲಿ ನಾಯಕ ಸುನಿಲ್ ಚೆಟ್ರಿ ಮತ್ತು ವೆನೆಜುವೆಲಾದ ಮಿಕು ಅವರ ಹೊಂದಾಣಿಕೆಯ ಆಟ ಬಿಎಫ್‌ಸಿಗೆ ಉಪಯುಕ್ತವಾಗಿತ್ತು. ಈ ಬಾರಿ ಮಿಕು ತಂಡದಲ್ಲಿಲ್ಲ. ರಾಫೆಲ್ ಆಗಸ್ಟೊ ಮತ್ತು ಆಶಿಕ್ ಕುರುಣಿಯನ್ ಅವರನ್ನು ತಂಡಕರೆಸಿಕೊಂಡಿದೆ. ಆದರೆ ಇದು ಪರಿಣಾಮ ಬೀರಲಿಲ್ಲ. ಮಿಕು ಸ್ಥಾನ ತುಂಬಲು ಬಂದಿರುವ ಮ್ಯಾನ್ಯುವಲ್ ಒನ್ವು ಅವರಿಗೂ ನಿರೀಕ್ಷಿತ ಆಟವಾಡಲು ಸಾಧ್ಯವಾಗಲಿಲ್ಲ.

ಕಂಠೀರವದಲ್ಲಿ ನಡೆದ 4ನೇ ಆವೃತ್ತಿಯ ಫೈನಲ್‌ನಲ್ಲಿ ಚೆನ್ನೈಯಿನ್‌ಗೆ ಮಣಿದ ಬಿಎಫ್‌ಸಿ ಕಳೆದ ಬಾರಿ ಈ ತಂಡದ ವಿರುದ್ಧ ತವರಿನಲ್ಲಿ ಗೆದ್ದಿದ್ದು ಚೆನ್ನೈಯಲ್ಲಿ ಸೋತಿತ್ತು. ಈ ಬಾರಿ ಚೆನ್ನೈಯಿನ್‌ ತಂಡದಲ್ಲಿ ಭಾರಿ ಬದಲಾವಣೆಗಳಾಗಿವೆ. 6 ಮಂದಿ ವಿದೇಶಿ ಆಟಗಾರರನ್ನು ಕರೆಸಿಕೊಂಡಿರುವ ತಂಡ ವಿಶ್ವಾಸದಲ್ಲಿದೆ. ಆದರೆ ಸುನಿಲ್ ಚೆಟ್ರಿ ಪಡೆಯನ್ನು ಮಣಿಸುವುದು ಸುಲಭವಲ್ಲ. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಚೆನ್ನೈಯಿನ್ ಕೋಚ್ ಜಾನ್ ಗ್ರೆಗರಿ ಕೂಡ ಇದನ್ನು ಒಪ್ಪಿಕೊಂಡರು. ‘ಬಿಎಫ್‌ಸಿ ಬಲಿಷ್ಠ ತಂಡ. ಆದರೆ ನಮ್ಮ ತಂಡ 3 ಪಂದ್ಯಗಳಲ್ಲಿ ಕಳಪೆ ಆಟ ಆಡಲಿಲ್ಲ. ಆದ್ದರಿಂದ ಭಾನುವಾರದ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸವಿದೆ’ ಎಂದು ಅವರು ಹಳಿದರು.

ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ಮತ್ತು ರಕ್ಷಣಾ ವಿಭಾಗದ ನಿಶು ಕುಮಾರ್, ರಾಹುಲ್ ಭೆಕೆ, ಹರ್ಮನ್‌ಜ್ಯೋತ್ ಖಾಬ್ರಾ, ಜುವಾನನ್ ಮುಂತಾದವರನ್ನು ಹಿಂದಿಕ್ಕಿ ಮುನ್ನುಗ್ಗುವುದು ಚೆನ್ನೈಯಿನ್ ತಂಡಕ್ಕೆ ಸವಾಲೇ ಸರಿ. ಚೆಟ್ರಿ ಮುಂದಾಳುತ್ವದ ಫಾರ್ವರ್ಡ್ ವಿಭಾಗವನ್ನು ತಡೆಯುವುದೂ ಚೆನ್ನೈಯಿನ್‌ಗೆ ಸುಲಭವಲ್ಲ. ಮಿಡ್‌ಫೀಲ್ಡ್‌ನಲ್ಲಿ ದಿಮಾಸ್ ಡೆಲ್ಗಾಡೊ, ಎರಿಕ್ ಪಾರ್ಟಲು, ಉದಾಂತ ಸಿಂಗ್ ಮುಂತಾದವರು ಬಿಎಫ್‌ಸಿಯ ಭರವಸೆಯಾಗಿದ್ದಾರೆ.

ಜೆಜೆ ಇಲ್ಲ; ಮಿಡ್‌ಫೀಲ್ಡ್‌ನಲ್ಲಿ ರಾಫೆಲ್ ದ್ವಯರು
ಮೊಣಕಾಲು ನೋವಿನಿಂದ ಬಳಲುತ್ತಿರುವ ಚೆನ್ನೈಯಿನ್ ಎಫ್‌ಸಿಯ ಜೆಜೆ ಲಾಲ್‌ಫೆಕ್ಲುವಾ ನಾಲ್ಕನೇ ಪಂದ್ಯದಲ್ಲಿ ಆಡುವ ಭರವಸೆ ಮೂಡಿತ್ತು. ಆದರೆ ಭಾನುವಾರವೂ ಅವರು ಆಡುವುದಿಲ್ಲ ಎಂದು ಕೋಚ್ ಜಾನ್ ಗ್ರೆಗರಿ ತಿಳಿಸಿದರು.‘ಜೆಜೆ ಚೇತರಿಕೆ ಕಾಣುತ್ತಿದ್ದಾರೆ. ಆದರೆ ಅವರ ಆರೋಗ್ಯ ಸ್ಥಿತಿಯ ಬಗ್ಗೆ ವೈದ್ಯಕೀಯ ವಿಭಾಗದಿಂದ ಪೂರಕ ಮಾಹಿತಿ ಬಂದಿಲ್ಲ. ಆದ್ದರಿಂದ ಇನ್ನೂ ಕೆಲವು ದಿನ ವಿಶ್ರಾಂತಿ ಬೇಕಾದೀತು’ ಎಂದು ಜಾನ್ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ರಾಫೆಲ್‌ದ್ವಯರ ಮೇಲೆ ಕಣ್ಣು: ಕಳೆದ 4 ಆವೃತ್ತಿಗಳಲ್ಲಿ ಚೆನ್ನೈಯಿನ್ ತಂಡದಲ್ಲಿ ಆಡಿದ್ದ ರಾಫೆಲ್ ಆಗಸ್ಟೊ ಮತ್ತು ಇದೇ ಮೊದಲ ಬಾರಿ ಐಎಸ್‌ಎಲ್‌ನಲ್ಲಿ ಆಡುತ್ತಿರುವ ಚೆನ್ನೈಯಿನ್ ಎಫ್‌ಸಿಯ ರಾಫೆಲ್ ಕ್ರಿವೆಲಾರೊ ಭಾನುವಾರ ಗಮನ ಸೆಳೆಯಲಿದ್ದಾರೆ. ಇಬ್ಬರೂ ಮಿಡ್‌ಫೀಲ್ಡರ್‌ಗಳು. ಬ್ರೆಜಿಲ್‌ನ ಆಗಸ್ಟೊ 3 ಪಂದ್ಯಗಳಲ್ಲಿ 6 ಕ್ರಾಸ್‌ಗಳು, 4 ಶಾಟ್ಸ್‌ ಮತ್ತು 13 ಟ್ಯಾಕಲ್‌ಗಳ ಮೂಲಕ ಮಿಂಚಿದ್ದಾರೆ. ಇಟಲಿಯ ಕ್ರಿವೆಲಾರೊ 5 ಕ್ರಾಸ್‌, 10 ಶಾಟ್ಸ್‌ ಮತ್ತು 1 ಟ್ಯಾಕಲ್‌ ಮಾಡಿದ್ದಾರೆ. ಸ್ನಾಯು ಸೆಳೆತಕ್ಕೆ ಒಳಗಾಗಿರುವ ಆಲ್ಬರ್ಟ್ ಸೆರಾನ್ ಭಾನುವಾರದ ಪಂದ್ಯದಲ್ಲಿ ಬಿಎಫ್‌ಸಿಗೆ ಲಭ್ಯ ಇರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.