ADVERTISEMENT

ಬಿಎಫ್‌ಸಿಗೆ ಜಯದ ವಿಶ್ವಾಸ

ಐಎಸ್‌ಎಲ್‌: ಇಂದು ಹೈದರಾಬಾದ್‌ ಎದುರು ಪಂದ್ಯ

ಪಿಟಿಐ
Published 28 ನವೆಂಬರ್ 2019, 19:20 IST
Last Updated 28 ನವೆಂಬರ್ 2019, 19:20 IST
ಜಯದ ವಿಶ್ವಾಸದಲ್ಲಿರುವ ಬಿಎಫ್‌ಸಿ ಆಟಗಾರರು
ಜಯದ ವಿಶ್ವಾಸದಲ್ಲಿರುವ ಬಿಎಫ್‌ಸಿ ಆಟಗಾರರು   

ಹೈದರಾಬಾದ್‌ : ಸತತ ಡ್ರಾಗಳ ನಂತರ ಜಯದ ಲಯ ಕಂಡುಕೊಂಡಿರುವ ಬೆಂಗಳೂರು ಎಫ್‌ಸಿ ಅದನ್ನು ಮುಂದುವರಿಸುವ ಉಮೇದಿನಲ್ಲಿದೆ. ಹಾಲಿ ಚಾಂಪಿಯನ್‌ ತಂಡ, ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿಯ ಲೀಗ್‌ನಲ್ಲಿ ಶುಕ್ರವಾರ ಹೈದರಾಬಾದ್‌ ಎಫ್‌ಸಿ ವಿರುದ್ಧ ಅದರ ತವರಿನಲ್ಲಿ ಶುಕ್ರವಾರ ಆಡಲಿದೆ.

ಚಾರ್ಲ್ಸ್‌ ಕ್ವದ್ರತ್‌ ತರಬೇತಿಯ ತಂಡ ಈ ಬಾರಿಯ ಲೀಗ್‌ನಲ್ಲಿ ಮೂರು ‘ಡ್ರಾ’ಗಳ ನಂತರ 3–0 ಯಿಂದ ಚೆನ್ನೈಯಿನ್‌ ಎಫ್‌ಸಿ ತಂಡವನ್ನು ಸೋಲಿಸಿ ಗೆಲುವಿನ ಹಳಿಗೆ ಮರಳಿತ್ತು. ನಂತರ ಕೇರಳ ಬ್ಲಾಸ್ಟರ್ಸ್‌ ವಿರುದ್ಧ ತವರಿನಲ್ಲೂ ಯಶಸ್ಸಿನ ಓಟ ಮುಂದುವರಿಸಿದೆ.

ಐಎಸ್‌ಎಲ್‌ನ ಹೊಸ ತಂಡವಾದ ಹೈದರಾಬಾದ್‌ ಈವರೆಗೆ ಅಂಥ ಯಶಸ್ಸೇನೂ ಕಂಡಿಲ್ಲ. ಆದರೆ ಅದರ ತವರಿನಲ್ಲೇ ಆಡುವುದು ಸುಲಭವಲ್ಲ ಎಂಬುದು ಕ್ವದ್ರತ್‌ ನಂಬಿಕೆ. ಫಿಲ್‌ ಬ್ರೌನ್‌ ಗರಡಿಯ ತಂಡ, ಐದು ಪಂದ್ಯಗಳಿಂದ ಮೂರು ಪಾಯಿಂಟ್‌ (1 ಗೆಲುವು, 4 ಸೋಲು) ಗಳಿಸಿದ್ದು, ಲೀಗ್‌ ಟೇಬಲ್‌ನಲ್ಲಿ ತಳದಲ್ಲಿದೆ.

ADVERTISEMENT

‘ಹೈದರಾಬಾದ್‌ಗೆ ಪಾಯಿಂಟ್‌ಗಳ ಅಗತ್ಯವಿದೆ. ಆದ್ದರಿಂದ ಪಂದ್ಯ ಸುಲಭವಾಗಲಾರದು. ಸತತ ಸೋಲುಗಳ ನಂತರ ಪುಟಿದೇಳಲು ಪ್ರಯತ್ನಿಸುವುದು ಖಚಿತ’ ಎನ್ನುತ್ತಾರೆ ಕ್ವದ್ರತ್‌. ‘ಹೈದರಾಬಾದ್‌ ಒತ್ತಡದಲ್ಲಿದೆ. ಆದರೆ ತಂಡ ಉತ್ತಮ ಪ್ರದರ್ಶನ ನೀಡಲಿದೆ’ ಎಂಬ ವಿಶ್ವಾಸ ಬ್ರೌನ್‌ ಅವರದ್ದು.

ಬೆಂಗಳೂರು ತಂಡ, ಆರನೇ ಆವೃತ್ತಿಯಲ್ಲಿ ಇದುವರೆಗೆ ಎದುರಾಳಿಗಳಿಗೆ ಕೇವಲ ಒಂದು ಗೋಲು ಬಿಟ್ಟುಕೊಟ್ಟಿದೆ. ಅದೂ ಫೀಲ್ಡ್‌ ಗೋಲಲ್ಲ. ಇನ್ನೊಂದು ಕಡೆ ಹೈದರಾಬಾದ್‌ ವಿರುದ್ಧ ಎದುರಾಳಿಗಳು 12 ಗೋಲುಗಳನ್ನು ಗಳಿಸಿದ್ದಾರೆ. ಬಿಎಫ್‌ಸಿಯ ದಿಮಾಸ್‌ ಡೆಲ್ಗಾಡೊ, ಆರಂಭದ ಪರದಾಟದ ನಂತರ ಲಯಕ್ಕೆ ಮರಳಿದ್ದಾರೆ. ಎರಡು ಗೋಲುಗಳಿಗೆ ಬುನಾದಿ ಹಾಕಿಕೊಟ್ಟಿದ್ದಾರೆ. ನಾಯಕ ಸುನಿಲ್ ಚೆಟ್ರಿ, ಎರಡು ಪಂದ್ಯಗಳಲ್ಲಿ ಎರಡು ಗೋಲು ಗಳಿಸಿರುವೂದೂ ತಂಡದ ಉತ್ಸಾಹ ವೃದ್ಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.