ADVERTISEMENT

ಹೈದರಾಬಾದ್ ಎಫ್‌ಸಿಗೆ ಭರ್ಜರಿ ಗೆಲುವು

ಪಿಟಿಐ
Published 8 ಜನವರಿ 2021, 17:23 IST
Last Updated 8 ಜನವರಿ 2021, 17:23 IST
ಜಯದ ಸಂಭ್ರಮದಲ್ಲಿ ಹೈದರಾಬಾದ್ ಎಫ್‌ಸಿ ತಂಡದ ಆಟಗಾರರು –ಐಎಸ್‌ಎಲ್ ಮೀಡಿಯಾ ಚಿತ್ರ
ಜಯದ ಸಂಭ್ರಮದಲ್ಲಿ ಹೈದರಾಬಾದ್ ಎಫ್‌ಸಿ ತಂಡದ ಆಟಗಾರರು –ಐಎಸ್‌ಎಲ್ ಮೀಡಿಯಾ ಚಿತ್ರ   

ವಾಸ್ಕೊ, ಗೋವಾ: ಅಮೋಘ ಆಟವಾಡಿದ ಹೈದರಾಬಾದ್ ಎಫ್‌ಸಿ ತಂಡ ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಶುಕ್ರವಾರ ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧ 4–2 ಗೋಲುಗಳ ಗೆಲುವು ಸಾಧಿಸಿತು. ತಿಲಕ್ ಮೈದಾನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅರಿದಾನೆ ಸಂಟಾನ (3ನೇ ನಿಮಿಷ), ಚಿಯಾನಿಸ್ (36ನೇ ನಿ) ಮತ್ತು ಲಿಸ್ಟನ್ (85, 90ನೇ ನಿ) ಹೈದರಾಬಾದ್‌ಗೆ ಗೋಲುಗಳನ್ನು ಗಳಿಸಿಕೊಟ್ಟರು. ನಾರ್ತ್ ಈಸ್ಟ್ ಪರ ಫೆಡೆರಿಕ್ ಗಾಲೆಗೊ (45ನೇ ನಿಮಿಷ; ಪೆನಾಲ್ಟಿ) ಮತ್ತು ಲ್ಯಾಂಬಟ್ (45ನೇ ನಿ) ಚೆಂಡನ್ನು ಗುರಿ ಮುಟ್ಟಿಸಿದರು.

ಈ ಪಂದ್ಯದಲ್ಲಿ ಜಯ ಗಳಿಸುವ ತಂಡಕ್ಕೆ ಪಾಯಿಂಟ್ ಪಟ್ಟಿಯ ಅಗ್ರ ನಾಲ್ಕರಲ್ಲಿ ಸ್ಥಾನ ಗಳಿಸುವ ಅವಕಾಶವಿತ್ತು. ಹೀಗಾಗಿ ಕುತೂಹಲ ಕೆರಳಿಸಿತ್ತು. ಎರಡೂ ತಂಡಗಳು ಆರಂಭದಿಂದಲೇ ಜಿದ್ದಾಜಿದ್ದಿಯಿಂದ ಕಾದಾಡಿದವು. ಹೀಗಾಗಿ ಒಟ್ಟು ಆರು ಗೋಲುಗಳು ಮೂಡಿಬಂದವು. ಜಯವನ್ನು ಒಲಿಸಿಕೊಂಡ ಹೈದರಾಬಾದ್‌ ಎಫ್‌ಸಿ ಪಾಯಿಂಟ್‌ ಪಟ್ಟಿಯ ನಾಲ್ಕನೇ ಸ್ಥಾನಕ್ಕೆ ಜಿಗಿಯಿತು. ನಾರ್ತ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ಏಳನೇ ಸ್ಥಾನದಲ್ಲೇ ಉಳಿಯಿತು. ಆಕ್ರಮಣಕ್ಕೆ ಒತ್ತು ನೀಡಿದ ನಾರ್ತ್ ಈಸ್ಟ್‌ ಒಟ್ಟು ಎಂಟು ಬಾರಿ ಚೆಂಡನ್ನು ಗುರಿಯತ್ತ ತಳ್ಳಿತ್ತು. ಆದರೆ ಎರಡು ಬಾರಿ ಮಾತ್ರ ಯಶಸ್ಸು ಕಂಡಿತು. ಹೈದರಾಬಾದ್‌ ಉತ್ತಮ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಐದು ಬಾರಿ ಚೆಂಡನ್ನು ಗುರಿಯತ್ತ ಕಳುಹಿಸಿದ ತಂಡ ನಾಲ್ಕರಲ್ಲಿ ಯಶಸ್ಸು ಕಂಡಿತು.

ಸತತ ಮೂರು ಪಂದ್ಯಗಳಲ್ಲಿ ಸೋತಿದ್ದ ಹೈದರಾಬಾದ್ ಎಫ್‌ಸಿ ಗೆಲುವಿನೊಂದಿಗೆ ಸತತ ಎರಡು ಜಯ ಸಾಧಿಸಿತು. 10 ಪಂದ್ಯಗಳಲ್ಲಿ ನಾಲ್ಕು ಜಯದೊಂದಿಗೆ ತಂಡದ ಖಾತೆಯಲ್ಲಿ ಈಗ 15 ಪಾಯಿಂಟ್‌ಗಳಿವೆ. ನಾರ್ತ್ ಈಸ್ಟ್ ಯುನೈಟೆಡ್ 10 ಪಂದ್ಯಗಳಲ್ಲಿ ಎರಡು ಜಯ ಗಳಿಸಿದ್ದು 11 ಪಾಯಿಂಟ್ ಕಲೆ ಹಾಕಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.