
ಫುಟ್‌ಬಾಲ್
ಬೆಂಗಳೂರು: ಸೋಚನ್ ಷಟ್ಸಂಗ್ ಅವರ ಐದು ಗೋಲುಗಳ ನೆರವಿನಿಂದ ಬಿಟಿಎಂ ಫುಟ್‌ಬಾಲ್ ಕ್ಲಬ್ (ಎಫ್‌ಸಿ) ತಂಡವು ಬಿಡಿಎಫ್‌ಎ ಎ ಡಿವಿಷನ್ ಲೀಗ್ ಚಾಂಪಿಯನ್‌ಷಿಪ್ ಪಂದ್ಯದಲ್ಲಿ ಗುರುವಾರ 9–0ಯಿಂದ ಡಿವೈಇಎಸ್ ಎಫ್‌ಸಿ ತಂಡವನ್ನು ನಿರಾಯಾಸವಾಗಿ ಮಣಿಸಿತು.
ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಿಟಿಎಂ ತಂಡದ ಆಟಗಾರರು ಗೋಲುಗಳ ಸುರಿಮಳೆಗೈದರು. ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕಿಳಿದ ಸೋಚನ್ (8ನೇ, 10ನೇ, 11ನೇ, 15ನೇ ಹಾಗೂ 65ನೇ ನಿಮಿಷ) ಎದುರಾಳಿ ತಂಡದ ರಕ್ಷಣಾ ವ್ಯವಸ್ಥೆಯನ್ನು ಪುಡಿಗಟ್ಟಿದರು. ಸುಭಾಷ್ ಕೆ. (42), ದೇವರಾಜ್ ಜೆ. (44ನೇ ನಿ.), ಧಾನೇಶ್ ವಸಂತ್ (71ನೇ ನಿ.) ಹಾಗೂ ಮೊಹಮ್ಮದ್ ಗುರ್ಫಾನ್ (90ನೇ ನಿ.) ತಲಾ ಒಂದು ಗೋಲು ಗಳಿಸಿದರು. ಡಿವೈಇಎಸ್ ತಂಡವು ಗೋಲಿನ ಖಾತೆ ತೆರೆಯುವಲ್ಲಿ ವಿಫಲವಾಯಿತು.
ಟೂರ್ನಿಯಲ್ಲಿ ನಿರ್ಲಕ್ಷ್ಯ ಧೋರಣೆಯನ್ನು ಮುಂದುವರಿಸಿರುವ ಡಿವೈಇಎಸ್ (ಯುವಜನ ಸಮಬಲೀಕರಣ ಮತ್ತು ಕ್ರೀಡಾ ಇಲಾಖೆ) ತಂಡವು ಗುರುವಾರದ ಪಂದ್ಯದಲ್ಲಿಯೂ 10 ಮಂದಿ ಆಟಗಾರರನ್ನು ಮಾತ್ರ ಕಣಕ್ಕಿಳಿಸಿತ್ತು. ಮುಖ್ಯ ಕೋಚ್ ಎಸ್. ಶಾಂತಿ ಅವರಾಗಲೀ, ಸಹಾಯಕ ಸಿಬ್ಬಂದಿಯಾಗಲಿ ಮೈದಾನದತ್ತ ಸುಳಿಯಲೇ ಇಲ್ಲ. ದ್ವಿತೀಯ ಪಿಯು ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವುದಕ್ಕಾಗಿ ತಂಡದ ಕೆಲವು ಆಟಗಾರರು ಗೈರಾಗಿದ್ದರೆ, ಇನ್ನೂ ಕೆಲವರು ಕೋಚ್ ಸಿಬ್ಬಂದಿಯ ಬೇಜವಾಬ್ದಾರಿ ನಡೆಯಿಂದಾಗಿ ಗೈರಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಇಲಾಖೆಯ ಆಯುಕ್ತ ಚೇತನ್ ಆರ್. ಅವರು ‘ಮುಖ್ಯ ಕೋಚ್ ವಿರುದ್ಧ ಕ್ರಮ ಜರುಗಿಸಲಾಗುವುದು. ಮುಂದಿನ ಪಂದ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ತಂಡವನ್ನು ಕಣಕ್ಕಿಳಿಸಲಾಗುವುದು’ ಎಂದು ಹೇಳಿದರು.
ಡಿವೈಇಎಸ್ ತಂಡವು 13 ಪಂದ್ಯಗಳಿಂದ ಕೇವಲ 7 ಅಂಕ ಸಂಪಾದಿಸಿದ್ದು ಬಿ ಡಿವಿಷನ್‌ಗೆ ಹಿಂಬಡ್ತಿ ಪಡೆಯುವ ಭೀತಿಯಲ್ಲಿದೆ. ಇದೇ 24ರಂದು ರೂಟ್ಸ್ ಎಫ್‌ಸಿ ವಿರುದ್ಧ ನಡೆಯಲಿರುವ ಪಂದ್ಯವು ನಿರ್ಣಾಯಕವಾಗಲಿದೆ.
ಎ ಡಿವಿಷನ್ ಲೀಗ್‌ನ ಇನ್ನೊಂದು ಪಂದ್ಯದಲ್ಲಿ ಬೆಂಗಳೂರು ಈಗಲ್ಸ್ ಎಫ್‌ಸಿ ಹಾಗೂ ಎಜಿಒಆರ್‌ಸಿ ಎಫ್‌ಸಿ ತಂಡಗಳು 1–1 ಡ್ರಾ ಸಾಧಿಸಿದವು.
ಬಿ ಡಿವಿಷನ್ ಲೀಗ್ ಪಂದ್ಯದಲ್ಲಿ ಪಿಳ್ಳಣ್ಣ ಗಾರ್ಡನ್ ಎಫ್‌ಸಿ ತಂಡವು 1–0ಯಿಂದ ವೆಹಿಕಲ್ಸ್ ಎಫ್‌ಸಿ ತಂಡವನ್ನು ಮಣಿಸಿತು. ಪಿಳ್ಳಣ್ಣ ತಂಡದ ಪರ ಗ್ಯಾಸ್ಪರ್ ಅಂಥೋನಿ (8ನೇ ನಿ.) ಗೋಲು ದಾಖಲಿಸಿದರು. ಮತ್ತೊಂದು ಪಂದ್ಯದಲ್ಲಿ ಸಾಂಘಿಕ ಪ್ರದರ್ಶನ ತೋರಿದ ಎಂಪೈರ್ ಎಫ್‌ಸಿ ತಂಡವು 3–0ಯಿಂದ ಅಲ್ ಫತೇ ಎಫ್‌ಸಿ ತಂಡವನ್ನು ಮಣಿಸಿತು. ಎಂಪೈರ್ ತಂಡದ ಮುಹಮ್ಮದ್ ಇಜಾಸ್ (39ನೇ ನಿ.), ಎಂ.ಹವೊಕಿಪ್ (52ನೇ ನಿ.) ಹಾಗೂ ಸಂಜೀವ್ ಡಿ. ನೊರೊನ್ಹಾ (55ನೇ ನಿ.) ತಲಾ ಒಂದು ಗೋಲು ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.