ADVERTISEMENT

ಏಷ್ಯನ್ ಗೇಮ್ಸ್‌: ಫುಟ್‌ಬಾಲ್‌ ತಂಡದಲ್ಲಿ ಹೊಸಬರೇ ಹೆಚ್ಚು, ಚೆಟ್ರಿ ಮಾತ್ರ ಅನುಭವಿ

ಪಿಟಿಐ
Published 13 ಸೆಪ್ಟೆಂಬರ್ 2023, 23:30 IST
Last Updated 13 ಸೆಪ್ಟೆಂಬರ್ 2023, 23:30 IST
ಸುನೀಲ್ ಚೇಟ್ರಿ
ಸುನೀಲ್ ಚೇಟ್ರಿ   

ನವದೆಹಲಿ: ಚೀನಾದಲ್ಲಿ ನಡೆಯುವ ಏಷ್ಯನ್‌ ಕ್ರೀಡಾಕೂಟಕ್ಕೆ ಕೊನೆಗೂ ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್ ತಂಡವನ್ನು ಪ್ರಕಟಿಸಿದ್ದು ಅನನುಭವಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.  ಹಿರಿಯ ಫಾರ್ವರ್ಡ್‌ ಆಟಗಾರ ಸುನೀಲ್ ಚೇಟ್ರಿ ಅವರಷ್ಟೇ ಈ ತಂಡದಲ್ಲಿರುವ ಅನುಭವಿ ಆಟಗಾರರಾಗಿದ್ದಾರೆ. 

ರಾಷ್ಟ್ರೀಯ ತಂಡದ ಮುಖ್ಯ ಕೋಚ್‌ ಇಗರ್ ಸ್ಟಿಮಾಚ್ ಅವರು 22 ಆಟಗಾರರ ತಂಡದೊಡನೆ ತೆರಳುವರೇ ಎಂಬುದು ಇನ್ನೂ ಖಚಿತವಾಗಿಲ್ಲ.

ರಾಷ್ಟ್ರೀಯ ತಂಡದ ಆಯ್ಕೆ ಪ್ರಕ್ರಿಯೆ ವೇಳೆ ಹೆಚ್ಚಿನ ಕ್ಲಬ್‌ಗಳು ತಮ್ಮ ತಂಡದ ಆಟಗಾರರನ್ನು ಬಿಡುಗಡೆ ಮಾಡಲು ಹಿಂದೇಟುಹಾಕಿದ್ದವು. ಇಂಡಿಯನ್‌ ಫುಟ್‌ಬಾಲ್‌ ಲೀಗ್‌ (ಐಎಸ್‌ಎಲ್‌) ಇದೇ 21ರಂದು ಆರಂಭವಾಗಲಿದೆ. ಇದೇ ಸಮಯದಲ್ಲಿ ಏಷ್ಯನ್ ಗೇಮ್ಸ್‌ ಕೂಡ ನಡೆಯುತ್ತಿದೆ.

ADVERTISEMENT

ಇದರಿಂದ ಎಐಎಫ್‌ಎಫ್‌ ಅಧ್ಯಕ್ಷ ಹಾಗೂ ಬಿಜೆಪಿ ನಾಯಕ ಕಲ್ಯಾಣ್ ಚೌಬೆ ಅವರಿಗೆ ಮುಜುಗರವಾಗಿದೆ. ಏಷ್ಯನ್ ಗೇಮ್ಸ್‌ಗೆ ತಂಡವನ್ನು ಕಳುಹಿಸುವಂತೆ ಅವರು ಕ್ರೀಡಾ ಸಚಿವಾಲಯದ ಮನವೊಲಿಸಿದ್ದರು. ಇದಕ್ಕೆ ಮೊದಲು ಮಾನದಂಡದ ಪ್ರಕಾರ ಏಷ್ಯಾಡ್‌ಗೆ ತಂಡವನ್ನು ಕಳುಹಿಸಲು ಆಗುವುದಿಲ್ಲ ಎಂದು ಕ್ರೀಡಾ ಸಚಿವಾಲಯ ತಿಳಿಸಿತ್ತು. ಮೂಲ 22 ಆಟಗಾರರ ಪಟ್ಟಿಯಲ್ಲಿ ಚೆಟ್ರಿ ಸೇರಿದಂತೆ 9 ಮಂದಿಯಷ್ಟೇ ಉಳಿದುಕೊಂಡಿದ್ದಾರೆ. ಉಳಿದ ಆಟಗಾರರು ವಿವಿಧ ಕ್ಲಬ್‌ಗಳಲ್ಲಿರುವ ಅನನುಭವಿ ಆಟಗಾರರು.

ಏಷ್ಯನ್‌ ಗೇಮ್ಸ್‌ಗೆ ತೆರಳಲು ಮೂರು ದಿನಗಳಿರುವಂತೆ ತಂಡ ರೂಪಿಸುವ ಕಸರತ್ತು ಮುಗಿದಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಸೆ. 19ರಂದು ಚೀನಾ ವಿರುದ್ಧ 21ರಂದು ಬಾಂಗ್ಲಾದೇಶ ವಿರುದ್ಧ ಮತ್ತು 24ರಂದು ಮ್ಯಾನ್ಮಾರ್ ವಿರುದ್ಧ ಆಡಲಿದೆ.

ಆರು ಗುಂಪುಗಳಲ್ಲಿ ಮೊದಲ ಎರಡು ಸ್ಥಾನ ಪಡೆದ ತಂಡಗಳ ಜೊತೆ, ಮೂರನೇ ಸ್ಥಾನ ಪಡೆದ ನಾಲ್ಕು ಉತ್ತಮ ತಂಡಗಳೂ ಪ್ರಿಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಪಡೆಯುತ್ತವೆ.

ಬೆಂಗಳೂರು ಎಫ್‌ಸಿ, ಚೆಟ್ರಿ ಅವರನ್ನು ಮಾತ್ರ ಬಿಟ್ಟುಕೊಟ್ಟಿದೆ. ಬೆಂಗಳೂರು ತಂಡದ ಗೋಲ್‌ಕೀಪರ್‌ ಗುರುಪ್ರೀತ್ ಅಲಭ್ಯರಾಗಿದ್ದಾರೆ. ಈಸ್ಟ್‌ ಬೆಂಗಾಲ್ ತಂಡದ ಇಬ್ಬರು ಮೂಲಪಟ್ಟಿಯಲ್ಲಿದ್ದರೂ, ಈಗ ಒಬ್ಬರೂ ತಂಡದಲ್ಲಿಲ್ಲ.

ಭಾರತ ತಂಡ: ಗುರ್ಮೀತ್‌ ಸಿಂಗ್‌, ಧೀರಜ್ ಸಿಂಗ್ ಮೊಯ್ರಂಗ್‌ತೆಮ್, ಸುಮಿತ್‌ ರಥಿ, ನರೇಂದರ್‌ ಗೆಹಲೋತ್, ಅಮರ್‌ಜಿತ್‌ ಸಿಂಗ್ ಕಿಯಾಮ್, ಸಾಮ್ಯುಯೆಲ್ ಜೇಮ್ಸ್‌, ರಾಹುಲ್ ಕೆ.ಪಿ., ಅಬ್ದುಲ್‌ ರಬೀ ಅಂಜುಕಂಡನ್, ಆಯುಷ್ ದೇವ್ ಚೆಟ್ರಿ, ಬ್ರೈಸ್‌ ಮಿರಾಂಡಾ, ಅಫ್ಸರ್‌ ನೂರಾನಿ, ರಹೀಮ್ ಅಲಿ, ವಿನ್ಸಿ ಬರೆಟೊ, ಸುನಿಲ್ ಚೆಟ್ರಿ, ರೋಹಿತ್ ದನು, ಗುರುಕೀರತ್ ಸಿಂಗ್‌, ಅಂಕಿತ್‌ ಜಾಧವ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.