ADVERTISEMENT

ವಿಶ್ವಕಪ್ ಅರ್ಹತಾ ಪಂದ್ಯ | ಕೋವಿಡ್‌ನಿಂದ ಚೇತರಿಕೆ: ತಂಡಕ್ಕೆ ಮರಳಿದ ಚೆಟ್ರಿ

ವಿಶ್ವಕಪ್ ಅರ್ಹತಾ ಪಂದ್ಯ ಆಡಲು ದೋಹಾಕ್ಕೆ ಭಾರತ ತಂಡ

ಪಿಟಿಐ
Published 19 ಮೇ 2021, 11:56 IST
Last Updated 19 ಮೇ 2021, 11:56 IST
ಭಾರತ ಫುಟ್‌ಬಾಲ್ ತಂಡದ ಆಟಗಾರರು–ಪಿಟಿಐ ಸಂಗ್ರಹ ಚಿತ್ರ
ಭಾರತ ಫುಟ್‌ಬಾಲ್ ತಂಡದ ಆಟಗಾರರು–ಪಿಟಿಐ ಸಂಗ್ರಹ ಚಿತ್ರ   

ನವದೆಹಲಿ: ಕೋವಿಡ್‌ನಿಂದ ಸಂಪೂರ್ಣ ಚೇತರಿಸಿಕೊಂಡಿರುವ ಭಾರತ ಫುಟ್‌ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಅವರು ತಂಡಕ್ಕೆ ಮರಳಲಿದ್ದಾರೆ. ಪಿಡುಗಿನ ಹಿನ್ನೆಲೆಯಲ್ಲಿ ಅವರು ಎರಡು ಅಂತರರಾಷ್ಟ್ರೀಯ ಸ್ನೇಹಪರ ಪಂದ್ಯಗಳಲ್ಲಿ ಕಣಕ್ಕಿಳಿದಿರಲಿಲ್ಲ. ಮುಂದಿನ ತಿಂಗಳು ಕತಾರ್‌ನಲ್ಲಿ ನಡೆಯಲಿರುವ 2022ರ ಫಿಫಾ ವಿಶ್ವಕಪ್ ಮತ್ತು ಏಷ್ಯನ್ ಕಪ್ ಜಂಟಿ ಅರ್ಹತಾ ಪಂದ್ಯಗಳಲ್ಲಿ ಆಡಲು ಚೆಟ್ರಿ ನೇತೃತ್ವದ ಬಳಗ ಬುಧವಾರ ದೋಹಾಕ್ಕೆ ತೆರಳಿತು.

ಅಂತರರಾಷ್ಟ್ರೀಯ ಮಟ್ಟದ ಸಕ್ರಿಯ ಆಟಗಾರರಲ್ಲಿ ಅತಿ ಹೆಚ್ಚು ಗೋಲು(72) ಗಳಿಸಿದ ಎರಡನೇ ಆಟಗಾರ ಎಂಬ ಶ್ರೇಯ ಹೊಂದಿರುವ ಚೆಟ್ರಿ ರಾಷ್ಟ್ರೀಯ ತಂಡವನ್ನು ಕುಟುಂಬಕ್ಕೆ ಹೋಲಿಸಿದ್ದಾರೆ.

‘ರಾಷ್ಟ್ರೀಯ ತಂಡಕ್ಕೆ ಮರಳುತ್ತಿರುವುದು ಸಮಾಧಾನ ತಂದಿದೆ. ಒಟ್ಟಾರೆ ನನ್ನ ಕುಟುಂಬ ಇದ್ದೆಡೆಗೆ ಮನಸ್ಸು ಇರುತ್ತದೆ‘ ಎಂದು ಚೆಟ್ರಿ ಹೇಳಿದ್ದನ್ನು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್‌) ಉಲ್ಲೇಖಿಸಿದೆ.

ADVERTISEMENT

ಒಮನ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ಎದುರು ಕ್ರಮವಾಗಿ ಮಾರ್ಚ್‌ 25 ಮತ್ತು 29ರಂದು ನಡೆದ ಸ್ನೇಹಪರ ಪಂದ್ಯಗಳಲ್ಲಿ ಚೆಟ್ರಿ ಆಡಿರಲಿಲ್ಲ. ಆಗಷ್ಟೇ ಅವರು ಕೋವಿಡ್‌ನಿಂದ ಚೇತರಿಸಿಕೊಳ್ಳುತ್ತಿದ್ದರು.

ಭಾರತ ತಂಡವು ಜೂನ್ 3ರಂದು ಏಷ್ಯನ್ ಚಾಂಪಿಯನ್ ಕತಾರ್‌, ಜೂನ್ 7ರಂದು ಬಾಂಗ್ಲಾದೇಶ ಹಾಗೂ 15ರಂದು ಅಫ್ಗಾನಿಸ್ತಾನ ತಂಡದ ಎದುರು ಕಣಕ್ಕಿಳಿಯಲಿದ್ದು, ಈ ಎಲ್ಲ ಪಂದ್ಯಗಳು ದೋಹಾದ ಜಸ್ಸಿಮ್‌ ಬಿನ್ ಹಮದ್ ಕ್ರೀಡಾಂಗಣದಲ್ಲಿ ನಿಗದಿಯಾಗಿವೆ.

‘ದೋಹಾದಲ್ಲಿ ಆಡಲು ಉತ್ಸುಕನಾಗಿರುವೆ. ಕಳೆದ ಬಾರಿ ದೋಹಾದಲ್ಲಿದ್ದರೂ,ಅನಾರೋಗ್ಯದ ಕಾರಣ ಕತಾರ್‌ ವಿರುದ್ಧದ ಪಂದ್ಯದಲ್ಲಿ ಆಡಿರಲಿಲ್ಲ‘ ಎಂದು ಚೆಟ್ರಿ ಹೇಳಿದ್ದಾರೆ.

ಮೊದಲ ಪಂದ್ಯಕ್ಕೂ ಮೊದಲು ಭಾರತ ತಂಡವು ಬಯೋಬಬಲ್‌ನಲ್ಲಿ ಪೂರ್ವಸಿದ್ಧತಾ ಶಿಬಿರದಲ್ಲಿ ಪಾಲ್ಗೊಳ್ಳಲಿದೆ.

ತಂಡ ಇಂತಿದೆ: ಗೋಲ್‌ಕೀಪರ್ಸ್‌: ಗುರುಪ್ರೀತ್ ಸಿಂಗ್ ಸಂಧು, ಅಮರಿಂದರ್ ಸಿಂಗ್‌, ಧೀರಜ ಸಿಂಗ್‌.

ಡಿಫೆಂಡರ್ಸ್‌: ಪ್ರೀತಮ್ ಕೊಟಲ್‌, ರಾಹುಲ್ ಭೆಕೆ, ನರೇಂದ್ರ ಗೆಹ್ಲೋಟ್‌, ಚೆಂಗ್ಲೆನ್ಸನಾ ಸಿಂಗ್‌, ಸಂದೇಶ್ ಜಿಂಗಾನ್, ಆದಿಲ್ ಖಾನ್‌, ಆಕಾಶ್ ಮಿಶ್ರಾ, ಸುಭಾಶಿಷ್‌ ಬೋಸ್‌.

ಮಿಡ್‌ಫೀಲ್ಡರ್ಸ್‌: ಉದಾಂತ್ ಸಿಂಗ್‌, ಬ್ರೆಂಡನ್‌ ಫರ್ನಾಂಡೀಸ್‌, ಲಿಸ್ಟನ್ ಕೊಲಾಸೊ, ರೌಲಿನ್ ಬೊರ್ಗೆಸ್‌, ಗ್ಲ್ಯಾನ್ ಮಾರ್ಟಿನ್ಸ್, ಅನಿರುದ್ಧ ಥಾಪಾ, ಪ್ರಣಯ್ ಹಲ್ದಾರ್‌, ಸುರೇಶ್ ಸಿಂಗ್‌, ಲಲೆಂಗ್‌ಮಾವಿಯಾ ರಾಲ್ಟೆ, ಅಬ್ದುಲ್ ಸಹಲ್‌, ಯಾಸಿರ್‌ ಮೊಹಮ್ಮದ್, ಲಲ್ಲಿನ್ಜುವಾಲ ಚಾಂಗ್ಟೆ, ಬಿಪಿನ್ ಸಿಂಗ್‌, ಆಶಿಕ್ ಕುರುಣಿಯನ್‌.

ಫಾವರ್ಡ್ಸ್: ಇಶಾನ್ ಪಂಡಿತ, ಸುನಿಲ್ ಚೆಟ್ರಿ, ಮನ್ವೀರ್ ಸಿಂಗ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.