ಮಾರ್ಗಾವೊ: ಸೌದಿ ಅರೇಬಿಯಾದ ಪ್ರಸಿದ್ಧ ಫುಟ್‌ಬಾಲ್ ಕ್ಲಬ್ ಅಲ್ ನಸ್ರ್ ತಂಡವು ಎಎಫ್‌ಸಿ ಚಾಂಪಿಯನ್ಸ್ ಲೀಗ್ 2ರ ಗುಂಪು ಹಂತದ ಎಫ್‌ಸಿ ಗೋವಾ ವಿರುದ್ಧದ ಪಂದ್ಯಕ್ಕಾಗಿ ಸೋಮವಾರ ರಾತ್ರಿ ಭಾರತಕ್ಕೆ ಪ್ರಯಾಣ ಬೆಳೆಸಲಿದೆ. ಆದರೆ, ತಾರಾ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ತಂಡದೊಂದಿಗೆ ಬರುವುದು ಅನುಮಾನವಾಗಿದೆ.
ಇದರಿಂದಾಗಿ ಪೋರ್ಚುಗಲ್‌ನ ಫುಟ್‌ಬಾಲ್ ದಂತಕಥೆ ರೊನಾಲ್ಡೊ ಅವರ ಆಟವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದ ಭಾರತದ ಅಭಿಮಾನಿಗಳಿಗೆ ನಿರಾಸೆಯಾಗಲಿದೆ. ನಸ್ರ್ ಮತ್ತು ಗೋವಾ ತಂಡಗಳ ನಡುವಿನ ಪಂದ್ಯ ಇದೇ 22ರಂದು ಫಟೋರ್ಡಾದ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಿಗದಿಯಾಗಿದೆ.
ಎಫ್‌ಸಿ ಗೋವಾ ಆಡಳಿತ ಮಂಡಳಿಯ ವಿನಂತಿಗಳ ಹೊರತಾಗಿಯೂ 40 ವರ್ಷದ ರೊನಾಲ್ಡೊ ಪ್ರಯಾಣ ತಂಡದ ಭಾಗವಾಗುತ್ತಿಲ್ಲ ಎಂದು ಸೌದಿ ಅರೇಬಿಯಾದ ಕ್ರೀಡಾ ಪತ್ರಿಕೆ ‘ಅಲ್ ರಿಯಾಧಿಯಾ’ ವರದಿ ಮಾಡಿದೆ.
ಎಫ್‌ಸಿ ಗೋವಾ ತಂಡವು ಈ ಋತುವಿನಲ್ಲಿ ಮಾಜಿ ಚಾಂಪಿಯನ್ ಅಲ್ ಸೀಬ್ ತಂಡದ ವಿರುದ್ಧ ಜಯಗಳಿಸಿ ಎಎಫ್‌ಸಿ ಚಾಂಪಿಯನ್ಸ್ ಲೀಗ್ 2ಕ್ಕೆ ಅರ್ಹತೆ ಪಡೆದಿತ್ತು. ಟೂರ್ನಿಯ ಡಿ ಗುಂಪಿನಲ್ಲಿ ನಸ್ರ್ ತಂಡದೊಂದಿಗೆ ಗೋವಾ ತಂಡ ಇದೆ. ಹೀಗಾಗಿ, ಆ ತಂಡದ ಆಟಗಾರ ರೊನಾಲ್ಡೊ ಭಾರತಕ್ಕೆ ಬರಬಹುದು ಎಂದು ನಿರೀಕ್ಷಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.