ADVERTISEMENT

ಫುಟ್‌ಬಾಲ್‌: ಹಾಲಿ ಚಾಂಪಿಯನ್‌ ಸ್ಪೇನ್‌ ಕಣಕ್ಕೆ

ಫಿಫಾ 17 ವರ್ಷದೊಳಗಿನವರ ಮಹಿಳಾ ವಿಶ್ವಕಪ್‌

ಪಿಟಿಐ
Published 14 ಆಗಸ್ಟ್ 2020, 12:52 IST
Last Updated 14 ಆಗಸ್ಟ್ 2020, 12:52 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಮುಂದಿನ ವರ್ಷ ಭಾರತದಲ್ಲಿ ನಿಗದಿಯಾಗಿರುವ ಫಿಫಾ 17 ವರ್ಷದೊಳಗಿನ ಮಹಿಳಾ ವಿಶ್ವಕಪ್‌ ಟೂರ್ನಿಯಲ್ಲಿ ಹಾಲಿ ಚಾಂಪಿಯನ್‌ ಸ್ಪೇನ್‌, ಇಂಗ್ಲೆಂಡ್‌ ಹಾಗೂ ಜರ್ಮನಿ ತಂಡಗಳು ಕಣಕ್ಕಿಳಿಯಲಿವೆ. ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಯೂರೋಪಿಯನ್‌ ಅರ್ಹತಾ ಟೂರ್ನಿಯು ರದ್ದಾದ ಕಾರಣ ಈ ಮೂರೂ ತಂಡಗಳು ರ‍್ಯಾಂಕಿಂಗ್ ಆಧಾರದ ಮೇಲೆ ವಿಶ್ವಕಪ್‌ಗೆ ಅರ್ಹತೆ ಗಳಿಸಿವೆ.

‘ಮುಂಬರುವ ಫಿಫಾ 17 ವರ್ಷದೊಳಗಿನ ಮಹಿಳಾ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌, ಜರ್ಮನಿ ಹಾಗೂ ಸ್ಪೇನ್ ತಂಡಗಳು ಯೂರೋಪ್‌ಅನ್ನು ಪ್ರತಿನಿಧಿಸುವುದಾಗಿ ಯೂರೋಪಿಯನ್‌ ಫುಟ್‌ಬಾಲ್‌ ಆಡಳಿತ ಮಂಡಳಿ (ಯುಇಎಫ್‌ಎ) ಖಚಿತಪಡಿಸಿದೆ‘ ಎಂದು ಟೂರ್ನಿಯ ಸ್ಥಳೀಯ ಸಂಘಟನಾ ಸಮಿತಿ (ಎಲ್‌ಒಸಿ) ಹೇಳಿದೆ.

ಅರ್ಹತಾ ಟೂರ್ನಿಯಾದ, ಯುಎಎಫ್‌ಎ 17 ವರ್ಷದೊಳಗಿನ ಮಹಿಳೆಯರ ಚಾಂಪಿಯನ್‌ಷಿಪ್‌ ರದ್ದಾದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ADVERTISEMENT

ಆತಿಥೇಯ ಭಾರತ, ಉತ್ತರ ಕೊರಿಯಾ, ಜಪಾನ್‌ ಹಾಗೂ ನ್ಯೂಜಿಲೆಂಡ್ ತಂಡಗಳುಟೂರ್ನಿಗೆ ಈಗಾಗಲೇ ಅರ್ಹತೆ ಗಳಿಸಿವೆ.

ಉರುಗ್ವೆಯಲ್ಲಿ ನಡೆದ 2018ರ ವಿಶ್ವಕಪ್‌ನಲ್ಲಿ ಸ್ಪೇನ್‌ ತಂಡವು 2–1ರಿಂದ ಮೆಕ್ಸಿಕೊಗೆ ಸೋಲುಣಿಸಿ ಪ್ರಶಸ್ತಿಗೆ ಮುತ್ತಿಕ್ಕಿತ್ತು.

ಈ ವರ್ಷದ ಅಕ್ಟೋಬರ್‌–ನವೆಂಬರ್‌ನಲ್ಲಿ ನಿಗದಿಯಾಗಿದ್ದ ಈ ಬಾರಿಯ ವಿಶ್ವಕಪ್‌ ಟೂರ್ನಿಯನ್ನು ಕೋವಿಡ್‌ ಸೋಂಕಿನ ಹಿನ್ನೆಲೆಯಲ್ಲಿ 2021ಕ್ಕೆ (ಫೆಬ್ರುವರಿ 17ರಿಂದ ಮಾರ್ಚ್ 7) ಮುಂದೂಡಲಾಗಿದೆ. ನವೀ ಮುಂಬೈನ ಡಿ.ವೈ.ಪಾಟೀಲ್‌ ಕ್ರೀಡಾಂಗಣದಲ್ಲಿ ಫೈನಲ್‌ ಪಂದ್ಯ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.