ಫುಟ್‌ಬಾಲ್
ನಾರಾಯಣಪುರ (ಛತ್ತೀಸಗಢ): ಡೆಲ್ಲಿ ತಂಡ ಫೈನಲ್‌ನಲ್ಲಿ ಕರ್ನಾಟಕ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 4–3 ಗೋಲುಗಳಿಂದ ಸೋಲಿಸಿ ಮೊದಲ ಸ್ವಾಮಿ ವಿವೇಕಾನಂದ 20 ವರ್ಷದೊಳಗಿನವರ ರಾಷ್ಟ್ರೀಯ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿತು.
ರಾಮಕೃಷ್ಣ ಮಿಷನ್ ಆಶ್ರಮ ಮೈದಾನದಲ್ಲಿ ಬುಧವಾರ ನಡೆದ ಈ ಪಂದ್ಯ ರೋಚಕವಾಗಿದ್ದು ನಿಗದಿ ಅವಧಿಯ ಆಟದ ನಂತರ ಸ್ಕೋರ್ 3–3 ಗೋಲುಗಳಿಂದ ಸಮನಾಗಿತ್ತು.
40 ದಿನ ನಡೆದ ಈ ಚಾಂಪಿಯನ್‌ಷಿಪ್‌ನಲ್ಲಿ 32 ತಂಡಗಳು ಭಾಗವಹಿಸಿದ್ದವು. ದೆಹಲಿ ತಂಡವು ಮೂರು ಸಲ ಹಿನ್ನಡೆಯಿಂದ ಚೇತರಿಸಿ ಪಂದ್ಯವನ್ನು ‘ಪೆನಾಲ್ಟಿ’ಗೆ ಬೆಳೆಸುವಲ್ಲಿ ಯಶಸ್ವಿ ಆಯಿತು.
ಕರ್ನಾಟಕ 12ನೇ ನಿಮಿಷ ಇಶಾನ್ ರಘುನಂದ ಮೂಲಕ ಮುನ್ನಡೆಯಿತು. 18ನೇ ನಿಮಿಷ ದೆಹಲಿ ತಂಡದ ರಮೇಶ್ ಚೆಟ್ರಿ ಅವರ ಗೋಲು ಯತ್ನವನ್ನು ಉತ್ತಮವಾಗಿ ತಡೆದಿದ್ದ ಕರ್ನಾಟಕ ಗೋಲ್ ಕೀಪರ್ ಸ್ಯಾಮ್ ಜಾರ್ಜ್, 43ನೇ ನಿಮಿಷ ಎದುರಾಳಿ ತಂಡ ಸಮ ಮಾಡುವುದನ್ನು ತಪ್ಪಿಸಲು ಆಗಲಿಲ್ಲ. ನಾಯಕ ಲಾಮ್ಲಲಿಯಾನ್ ದೆಹಲಿ ಪರ ಮೊದಲ ಗೋಲು ಗಳಿಸಿದರು.
ಉತ್ತರಾರ್ಧದಲ್ಲಿ ಉತ್ತಮ ಹೋರಾಟ ಕಂಡುಬಂತು. ಆದರೆ ಮತ್ತೊಮ್ಮೆ ಕರ್ನಾಟಕ ಮುನ್ನಡೆಯಿತು. ನಿಹಾರ್ ಅವರ ಪಾಸ್‌ನಲ್ಲಿ 30 ಯಾರ್ಡ್ ದೂರದಿಂದ ನಿತಿನ್ ಪಾಲ್ ಎಡಗಾಲಿನಿಂದ ಒದ್ದ ಚೆಂಡು ಗೋಲಿನೊಳಕ್ಕೆ ಹೋಯಿತು. ಕರ್ನಾಟಕಕ್ಕೆ ಮತ್ತೆರಡು ಅವಕಾಶಗಳು ದೊರೆತರೂ (ಕ್ರಮವಾಗಿ ನಿತಿನ್ ಪಾಲ್, ಸೈಖೋಮ್ ಬೋರಿಸ್ ಸಿಂಗ್ ಅವರಿಗೆ) ದೆಹಲಿ ಗೋಲ್‌ಕೀಪರ್ ಮಕ್ಕರ್ ಅವರ ಉತ್ತಮ ತಡೆಗಳಿಂದ ಗೋಲು ತಪ್ಪಿದವು.
71ನೇ ನಿಮಿಷ ದೆಹಲಿ ತಂಡದ ಸಬ್‌ಸ್ಟಿಟ್ಯೂಟ್ ಆಟಗಾರ ಸಂಖಿಲ್ ದರ್ಪೊಲ್ ತುಯಿಶಾಂಗ್ ಸ್ಕೋರ್ 2–2 ಸಮ ಮಾಡಿದರು. ಹೆಚ್ಚುವರಿ ಅವಧಿಯ ಮೊದಲ ನಿಮಿಷದಲ್ಲೇ ಕರ್ನಾಟಕ ರಘುನಂದ ಮೂಲಕ ಮತ್ತೆ ಮುನ್ನಡೆ ಪಡೆಯಿತು. ಆದರೆ ತುಯಿಶಾಂಗ್ ಮತ್ತೊಮ್ಮೆ ದೆಹಲಿ ಪರ (90+8) ಸ್ಕೋರ್ ಸಮಬಲಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.