ADVERTISEMENT

ಡುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿ: ಕ್ವಾರ್ಟರ್‌ಗೆ ನೌಕಾಪಡೆ

ಪಿಟಿಐ
Published 13 ಆಗಸ್ಟ್ 2025, 0:59 IST
Last Updated 13 ಆಗಸ್ಟ್ 2025, 0:59 IST
ನೌಕಾಪಡೆ ತಂಡದ ಪರ ನಿರ್ಣಾಯಕ ಗೋಲು ಹೊಡೆದ ಶ್ರೇಯಸ್‌ ವಿ.ಜಿ.
ನೌಕಾಪಡೆ ತಂಡದ ಪರ ನಿರ್ಣಾಯಕ ಗೋಲು ಹೊಡೆದ ಶ್ರೇಯಸ್‌ ವಿ.ಜಿ.   

ಇಂಫಾಲ್‌: ಕೊನೆಯ ಕ್ಷಣದಲ್ಲಿ ಶ್ರೇಯಸ್‌ ವಿ.ಜಿ. ಅವರು ಗಳಿಸಿದ ಗೋಲಿನ ನೆರವಿನಿಂದ ಭಾರತೀಯ ನೌಕಾಪಡೆಯು ಮಂಗಳವಾರ ನಡೆದ 134ನೇ ಆವೃತ್ತಿಯ ಡುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ 2–1ರಿಂದ ಟ್ರಾವು ಎಫ್‌ಸಿ ತಂಡವನ್ನು ಮಣಿಸಿತು. ಈ ಗೆಲುವಿನಿಂದಾಗಿ ಗುಂಪಿನಲ್ಲಿ ಅಗ್ರಸ್ಥಾನದೊಂದಿಗೆ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟಿತು.

ಇಲ್ಲಿನ ಖುಮಾನ್‌ ಲಂಪಕ್‌ ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ 29ನೇ ನಿಮಿಷದಲ್ಲಿ ಟ್ರಾವು ತಂಡದ ಮೊಯಿರಂಗಥೆಮ್‌ ನೆಲ್ಸನ್‌ ಸಿಂಗ್‌ ಗೋಲು ಗಳಿಸಿ, ತಮ್ಮ ತಂಡಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು. ಪಿಂಟು ಮಹತಾ ಅವರು 87ನೇ ನಿಮಿಷದಲ್ಲಿ ಹೊಡೆದ ಗೋಲಿನ ನೆರವಿನಿಂದ ನೌಕಾಪಡೆ 1–1ರಿಂದ ಸಮಬಲ ಸಾಧಿಸಿತು. ಇಂಜುರಿ ಸಮಯದ ಮೂರನೇ ನಿಮಿಷದಲ್ಲಿ ನೌಕಾಪಡೆಯ ಶ್ರೇಯಸ್‌ ನಿರ್ಣಾಯಕ ಗೋಲು ಹೊಡೆದು ಗೆಲುವಿನ ರೂವಾರಿ ಎನಿಸಿದರು.

ಈ ಗೆಲುವಿನಿಂದಾಗಿ ನೌಕಾಪಡೆಯು 7 ಅಂಕಗಳೊಂದಿಗೆ ‘ಎಫ್‌’ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿತು. ರಿಯಲ್‌ ಕಾಶ್ಮೀರ ತಂಡವು (6 ಅಂಕ) ಎರಡನೇ ಸ್ಥಾನಕ್ಕೆ ಕುಸಿಯಿತು.

ADVERTISEMENT

ಬೋಡೊಲ್ಯಾಂಡ್‌ ಎಫ್‌ಸಿ ತಂಡವು ಅಸ್ಸಾಂನ ಕೋಕರಾಝಾರ್‌ನಲ್ಲಿ ನಡೆದ ‘ಡಿ’ ಗುಂಪಿನ ಪಂದ್ಯದಲ್ಲಿ ಐಟಿಬಿಪಿ ಎಫ್‌ಸಿ ಜೊತೆ ಗೋಲು ರಹಿತ ಡ್ರಾ ಮಾಡಿಕೊಂಡು, ಡುರಾಂಡ್‌ ಕಪ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಎಂಟರ ಘಟ್ಟಕ್ಕೆ ಪ್ರವೇಶಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.