ADVERTISEMENT

FIFA World Cup | ಕ್ಯಾಸೆಮಿರೊ ಕಾಲ್ಚಳಕ: ನಾಕೌಟ್‌ಗೆ ಬ್ರೆಜಿಲ್

ಸ್ವಿಟ್ಜರ್ಲೆಂಡ್‌ ಎದುರು 1–0 ಜಯ

ರಾಯಿಟರ್ಸ್
Published 29 ನವೆಂಬರ್ 2022, 4:53 IST
Last Updated 29 ನವೆಂಬರ್ 2022, 4:53 IST
ಗೋಲು ಗಳಿಸಿದಾಗ ಸಂಭ್ರಮಿಸಿದ ಕ್ಯಾಸೆಮಿರೊ– ಎಎಫ್‌ಪಿ ಚಿತ್ರ
ಗೋಲು ಗಳಿಸಿದಾಗ ಸಂಭ್ರಮಿಸಿದ ಕ್ಯಾಸೆಮಿರೊ– ಎಎಫ್‌ಪಿ ಚಿತ್ರ   

ದೋಹಾ: ಮಿಡ್‌ಫೀಲ್ಡರ್ ಕ್ಯಾಸೆಮಿರೊ ಅವರ ಕಾಲ್ಚಳಕದ ಬಲದಿಂದ ಬ್ರೆಜಿಲ್ ತಂಡವು ವಿಶ್ವಕಪ್ ಟೂರ್ನಿಯ 16ರ ಘಟ್ಟ ಪ್ರವೇಶಿಸಿತು.

ಸೋಮವಾರ ಇಲ್ಲಿಯ ಸ್ಟೇಡಿಯಂ 974ನಲ್ಲಿ ನಡೆದ ಪಂದ್ಯದಲ್ಲಿ ಬ್ರೆಜಿಲ್‌ 1–0ಯಿಂದ ಸ್ವಿಟ್ಜರ್ಲೆಂಡ್‌ ತಂಡ ವನ್ನು ಸೋಲಿಸಿತು. ಇದರೊಂದಿಗೆ ಗುಂಪು ಹಂತದಲ್ಲಿ ಒಂದು ಪಂದ್ಯ ಬಾಕಿಯಿ ರುವಂತೆಯೇ ನಾಕೌಟ್‌ಗೆ ಲಗ್ಗೆಯಿಟ್ಟಿತು.

ತೀವ್ರ ಪೈಪೋಟಿ ಕಂಡುಬಂದ ‘ಜಿ’ ಗುಂಪಿನ ಈ ಹಣಾಹಣಿಯು ಗೋಲು ರಹಿತ ಡ್ರಾದತ್ತ ಸಾಗಿತ್ತು. ಆದರೆ 83ನೇ ನಿಮಿಷದಲ್ಲಿ ಬ್ರೂನೊ ಗಿಮಾರೆಸ್‌ ನೆರವಿನಲ್ಲಿ ಗೋಲು ದಾಖಲಿಸಿದ ಕ್ಯಾಸೆಮಿರೊ ಗೆಲುವಿನ ಸರದಾರ ಎನಿಸಿದರು. ಈ ಗುಂಪಿನಲ್ಲಿ ಬ್ರೆಜಿಲ್ ಬಳಿ ಸದ್ಯ ಆರು ಪಾಯಿಂಟ್‌ಗಳಿವೆ.

ADVERTISEMENT

ಗುಂಪಿನಲ್ಲಿ 2ನೇ ಸ್ಥಾನದಲ್ಲಿರುವ ಸ್ವಿಟ್ಜರ್ಲೆಂಡ್‌ ಬಳಿ 3 ಪಾಯಿಂಟ್ಸ್ ಇವೆ.

ಪ್ರಮುಖ ಆಟಗಾರ ನೇಮರ್ ಅವರ ಅನುಪಸ್ಥಿತಿಯ ನೆರಳು ಬ್ರೆಜಿಲ್ ತಂಡದ ಮೇಲಿತ್ತು. ಆದರೂ ತಂಡ ಉತ್ತಮ ಸಾಮರ್ಥ್ಯ ತೋರುವಲ್ಲಿ ಹಿಂದೆ ಬೀಳಲಿಲ್ಲ. 64ನೇ ನಿಮಿಷದಲ್ಲಿ ವಿನಿಸಿಯಸ್‌ ಜೂನಿಯರ್ ಅವರು ಚೆಂಡನ್ನು ಗೋಲ್‌ಪೋಸ್ಟ್ ಸೇರಿಸಿದರು. ಆದರೆ ಮರುಪರಿಶೀಲಿಸಿದ ಬಳಿಕ ರೆಫರಿಗಳು ಇದನ್ನು ಆಫ್‌ಸೈಡ್ ಎಂದು ತೀರ್ಮಾನಿಸಿದ್ದರು.

ಈ ಪಂದ್ಯದ ಜಯದೊಂದಿಗೆ ವಿಶ್ವಕಪ್‌ನ ಗುಂಪು ಹಂತದಲ್ಲಿ ಬ್ರೆಜಿಲ್‌ನ ಅಜೇಯ ಓಟ 17ಕ್ಕೆ ತಲುಪಿತು.

ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಬ್ರೆಜಿಲ್‌ ತಂಡವು ಕ್ಯಾಮರೂನ್ ಎದುರು ಆಡಲಿದೆ.

ಸರ್ಬಿಯಾ ಎದುರು ಗುಂಪಿನ ಕಡೆಯ ಪಂದ್ಯ ಆಡಲಿರುವ ಸ್ವಿಟ್ಜರ್ಲೆಂಡ್‌ ತಂಡಕ್ಕೆ ಗೆಲುವು ಅನಿವಾರ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.