
ನವದೆಹಲಿ: ಫಿಫಾ ವಿಶ್ವಕಪ್ ಟೂರ್ನಿಗೆ ಮೊದಲು ವಿಶ್ವ ಪ್ರವಾಸದ ಭಾಗವಾಗಿ ಮೂಲ ಟ್ರೋಫಿಯು ಶನಿವಾರ ದೆಹಲಿಗೆ ತಲುಪಿತು. ಬ್ರೆಜಿಲ್‌ನ ದಿಗ್ಗಜ ಆಟಗಾರ ಗಿಲ್ಬರ್ಟೊ ಡಿ’ಸಿಲ್ವ ಮತ್ತು ಕೇಂದ್ರ ಕ್ರೀಡಾ ಮತ್ತು ಯುವಜನ ವ್ಯವಹಾರಗಳ ಸಚಿವ ಮನ್ಸುಖ್ ಮಾಂಡವೀಯ ಅವರು
ಜೂನ್ 11ರಂದು ಅಮೆರಿಕ– ಕೆನಡಾ–ಮೆಕ್ಸಿಕೊ ಜಂಟಿ ಆತಿಥ್ಯದಲ್ಲಿ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ.
‘ಕ್ರಿಕೆಟ್ ಆಡುವ ರೀತಿಯಲ್ಲಿ ಫುಟ್‌ಬಾಲ್ ಆಟವನ್ನು ಆಡಲು ಈ ಟ್ರೋಫಿಯು ಭಾರತದ ಯುವ ಜನತೆಯನ್ನು ಪ್ರೇರೇಪಿಸಲಿದೆ’ ಎಂದು ಡಿ’ಸಿಲ್ವ ಆವರು ಆಶಿಸಿದರು.
ಸುಮಾರು 12 ವರ್ಷಗಳ ಬಳಿಕ ಭಾರತಕ್ಕೆ ವಿಶ್ವಕಪ್ ಟ್ರೋಫಿ ಆಗಮಿಸಿದೆ. ವಿಶ್ವಕಪ್‌ನ ಪ್ರಾಯೋಜಕತ್ವ ಹೊಂದಿರುವ ಕೋಕಾ ಕೋಲಾ, ಈ ಟ್ರೋಫಿಯ ಪ್ರವಾಸವನ್ನು ಆಯೋಜಿಸಿದೆ.
ಭಾರತದಲ್ಲಿ ಮೂರು ದಿನ ಟ್ರೋಫಿಯ ಪ್ರವಾಸ ನಿಗದಿಯಾಗಿದೆ. ಮೊದಲ ಎರಡು ದಿನ ದೆಹಲಿಯಲ್ಲಿ ಮತ್ತು ಒಂದು ದಿನ ಅಸ್ಸಾಮಿನ ಗುವಾಹಟಿಯಲ್ಲಿ ಟ್ರೋಫಿಯನ್ನು ಪ್ರದರ್ಶಿಸಲಾಗುವುದು. ಈ ಪ್ರವಾಸವು ಯುವಜನತೆಯನ್ನು ಫುಟ್‌ಬಾಲ್ ಆಟದ ಕಡೆ ಸೆಳೆಯಲಿದೆ ಎಂದು ಮಾಂಡವೀಯ ಅವರೂ ವಿಶ್ವಾಸ ವ್ಯಕ್ತಪಡಿಸಿದರು.
ವಿಶ್ವ ಪ್ರವಾಸದಲ್ಲಿ ಫಿಫಾದ 30 ಸದಸ್ಯ ರಾಷ್ಟ್ರಗಳಲ್ಲಿ ಟ್ರೋಫಿಯನ್ನು ಒಯ್ಯಲಾಗುವುದು. 150 ದಿನಗಳ ಅವಧಿಯಲ್ಲಿ 75 ಕಡೆ ಪ್ರದರ್ಶನದಲ್ಲಿಡಲಾಗುವುದು. 18 ಕ್ಯಾರೆಟ್ ಚಿನ್ನದಿಂದ ತಯಾರಿಸಲಾಗಿರುವ ಈ ಟ್ರೋಫಿಯು 6.176 ಕೆ.ಜಿ. ತೂಕ ಹೊಂದಿದೆ. 1974ರಲ್ಲಿ ಟ್ರೋಫಿಯನ್ನು ವಿನ್ಯಾಸಗೊಳಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.