ADVERTISEMENT

ಮೆಸ್ಸಿ ಅಭಿಮಾನಿಗಳ ಪುಳಕ: ರಾಜಧಾನಿಯಲ್ಲಿ ‘ಗೋಟ್‌’ ಪ್ರವಾಸ ಸುಖಾಂತ್ಯ

ಪಿಟಿಐ
Published 15 ಡಿಸೆಂಬರ್ 2025, 15:46 IST
Last Updated 15 ಡಿಸೆಂಬರ್ 2025, 15:46 IST
<div class="paragraphs"><p>ಭಾರತ ತಂಡದ ಆಟಗಾರರ ಸಹಿಗಳಿರುವ ಬ್ಯಾಟ್‌ಅನ್ನು ಜಯ್‌ ಶಾ ಅವರು ಮೆಸ್ಸಿ ಅವರಿಗೆ ಸ್ಮರಣಿಕೆಯಾಗಿ ನೀಡಿ ಗೌರವಿಸಿದರು.</p></div>

ಭಾರತ ತಂಡದ ಆಟಗಾರರ ಸಹಿಗಳಿರುವ ಬ್ಯಾಟ್‌ಅನ್ನು ಜಯ್‌ ಶಾ ಅವರು ಮೆಸ್ಸಿ ಅವರಿಗೆ ಸ್ಮರಣಿಕೆಯಾಗಿ ನೀಡಿ ಗೌರವಿಸಿದರು.

   

ನವದೆಹಲಿ: ಕೋಲ್ಕತ್ತದಲ್ಲಿ ಗೊಂದಲ, ಅರಾಜಕತೆಯ ಸ್ಥಿತಿಯಲ್ಲಿ ಶುರುವಾದ ಫುಟ್‌ಬಾಲ್‌ ಮಾಂತ್ರಿಕ  ಲಯೊನೆಲ್ ಮೆಸ್ಸಿ ಅವರ ಭಾರತದ ‘ಗೋಟ್‌’ ಪ್ರವಾಸವು ರಾಷ್ಟ್ರ ರಾಜಧಾನಿಯಲ್ಲಿ ಸಂಭ್ರಮದ ಅಂತ್ಯ ಕಂಡಿತು. ಫುಟ್‌ಬಾಲ್ ಅಂಗಳದಲ್ಲಿ ಮೋಡಿ ಮಾಡುವ ಆಟಗಾರನನ್ನು ಸೋಮವಾರ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸಹಸ್ರಾರು ಅಭಿಮಾನಿಗಳು ಕಣ್ತುಂಬಿಕೊಂಡರು.

ಬಹುನಿರೀಕ್ಷಿತ ‘ಗೋಟ್‌’ (greatest of all time) ಪ್ರವಾಸವು ಶನಿವಾರ ಸಾಲ್ಟ್‌ಲೇಕ್‌ ಕ್ರೀಡಾಂಗಣದಲ್ಲಿ ಆರಂಭ ಪಡೆದಿತ್ತು.

ADVERTISEMENT

ಕೋಟ್ಲಾದ ಜೇಟ್ಲಿ ಕ್ರೀಡಾಂಗಣದಲ್ಲಿ ಕುತೂಹಲಭರಿತರಾಗಿ ಕಾಯುತ್ತಿದ್ದ ಅಭಿಮಾನಿಗಳು, ವಿಶ್ವ ಪ್ರಸಿದ್ಧ ಆಟಗಾರ ಆಗಮಿಸುತ್ತಿದ್ದಂತೆ ಪುಳಕಗೊಂಡರು. ಎರಡು ದಶಕಗಳಿಂದ ಫುಟ್‌ಬಾಲ್‌ ಅಂಗಣದಲ್ಲಿ ಮಿಂಚುಹರಿಸಿರುವ ಅರ್ಜೆಂಟೀನಾದ ಸ್ಟಾರ್ ಆಟಗಾರನ ಜೊತೆ ಸೆಲೆಬ್ರಿಟಿಗಳು, ಗಣ್ಯರೂ ಕ್ರೀಡಾಂಗಣದ ಒಳಗೆ ಬಂದರು.

ಕ್ರೀಡಾಂಗಣದೊಳಗೆ ಬಂದ ತಕ್ಷಣ ಅವರು ಮುಗುಳ್ನಗುತ್ತಾ ಒಂದು ಪ್ರದಕ್ಷಿಣೆ ಹಾಕಿದರು. ಈ ಸಂದರ್ಭದಲ್ಲಿ ನಂ. 10 ಸಂಖ್ಯೆಯ ಅರ್ಟೆಂಟೀನಾದ ನೀಲಿ, ಬಿಳಿ ಪೋಷಾಕನ್ನು ಧರಿಸಿದ್ದ ಬಹುಸಂಖ್ಯೆಯ ಪ್ರೇಕ್ಷಕರು ನಿರಂತರವಾಗಿ ಅವರ ಹೆಸರನ್ನು ಜಪಿಸಿದರು. ಮೆಸ್ಸಿ ಒಂದೆಡೆ ನಿಂತು ಪ್ರೇಕ್ಷಕರತ್ತ ಕೈಬೀಸಿದಾಗ ಹರ್ಷೋದ್ಗಾರಗಳು ಮೊಳಗಿದವು.

ಶನಿವಾರ ಕೋಲ್ಕತ್ತದ ಸಾಲ್ಟ್‌ಲೇಕ್ ಕ್ರೀಡಾಂಗಣದೊಳಗೆ ಬರುವಾಗ ರಾಜಕಾರಣಿಗಳು, ಅವರ ಹಿಂಬಾಲಕರು ಸುತ್ತುವರಿದ ಪರಿಣಾಮ ಮೆಸ್ಸಿ ಅವರ ದರ್ಶನವಾಗದೇ ಅಭಿಮಾನಿಗಳು  ಆಕ್ರೋಶಗೊಂಡಿದ್ದರು. ಆದರೆ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಪರಿಸ್ಥಿತಿ ಭಿನ್ನವಾಗಿತ್ತು.

ಮೆಸ್ಸಿ ಅವರು ಇಂಟರ್‌ ಮಯಾಮಿ ಸಹ ಆಟಗಾರರಾದ ಲೂಯಿಸ್‌ ಸೊರೇಝ್ ಮತ್ತು ರಾಡ್ರಿಗೊ ಡಿ ಪಾಲ್‌ ಅವರೊಂದಿಗೆ ಆಡುವ ವೇಳೆ ಚೆಂಡನ್ನು ಕೆಲವು ಬಾರಿ ಸ್ಟ್ಯಾಂಡ್‌ನತ್ತ ಒದ್ದರು. ಸುಮಾರು 25,000 ಪ್ರೇಕ್ಷಕರು ಈ ವೇಳೆ ರೋಮಾಂಚನಗೊಂಡರು.

ಅರ್ಧ ಗಂಟೆಯ ಕಾರ್ಯಕ್ರಮದ ನಂತರ, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಐಸಿಸಿ ಅಧ್ಯಕ್ಷ ಜಯ್‌ ಶಾ, ದೆಹಲಿ ಜಿಲ್ಲಾ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷ ರೋಹನ್ ಜೇಟ್ಲಿ, ಭಾರತ ಫುಟ್‌ಬಾಲ್ ದಿಗ್ಗಜ ಬೈಚುಂಗ್‌ ಭುಟಿಯಾ ಅವರಿಗೆ ಮೆಸ್ಸಿ ಅವರೊಂದಿಗೆ ಒಡನಾಡುವ ಅವಕಾಶ ದೊರೆಯಿತು.

ವಿಳಂಬವಾದ ಆಗಮನ:

ಮೆಸ್ಸಿ ಅವರು ಬೆಳಿಗ್ಗೆ 10.45ಕ್ಕೆ ರಾಜಧಾನಿಗೆ ತಲುಪಬೇಕಾಗಿತ್ತು. ಆದರೆ ಪ್ರತಿಕೂಲ ಹವಾಮಾನದ ಕಾರಣ ಅವರು 2.30ಕ್ಕೆ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಅಲ್ಲಿಂದ ನೇರವಾಗಿ ಲೀಲಾ ಪ್ಯಾಲೇಸ್‌ ಹೋಟೆಲ್‌ಗೆ ತೆರಳಿದರು. ಅಲ್ಲಿ ಆಯ್ದ ಗಣ್ಯರೊಂದಿಗೆ ‘ಮೀಟ್‌ ಆ್ಯಂಡ್‌ ಗ್ರೀಟ್‌’ ಕಾರ್ಯಕ್ರಮದಲ್ಲಿ ಭಾಗಿಯಾದರು.

ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಪುಟ್ಟ ಅಭಿಮಾನಿಗಳೊಂದಿಗೆ ಆಡಿದ ಅರ್ಜೆಂಟೀನಾದ ಫುಟ್‌ಬಾಲ್‌ ದಿಗ್ಗಜ ಲಯೊನೆಲ್‌ ಮೆಸ್ಸಿ ಪಿಟಿಐ ಚಿತ್ರ

ಮೆಸ್ಸಿ ಭೇಟಿ: ಚೆಟ್ರಿ ಪುಳಕ

ನವದೆಹಲಿ: ಗೋಟ್‌ ಪ್ರವಾಸದ ವೇಳೆ ಫುಟ್‌ಬಾಲ್ ಸೂಪರ್‌ಸ್ಟಾರ್ ಲಯೊನೆಲ್‌ ಮೆಸ್ಸಿ ಅವರೊಂದಿಗೆ ಒಡನಾಡುವ ಅವಕಾಶ ದೊರಕಿದ್ದು ‘ಕನಸು’ ಎಂದು ಭಾರತ ತಂಡದ ದಿಗ್ಗಜ ಆಟಗಾರ ಸುನಿಲ್ ಚೆಟ್ರಿ ಬಣ್ಣಿಸಿದ್ದಾರೆ.

ಫುಟ್‌ಬಾಲ್ ಇತಿಹಾಸದಲ್ಲಿ 95 ಗೋಲುಗಳೊಡನೆ ನಾಲ್ಕನೇ ಅತ್ಯಧಿಕ ಸ್ಕೋರರ್ ಎನಿಸಿರುವ ಚೆಟ್ರಿ ಅವರು ಭಾನುವಾರ ಮುಂಬೈನಲ್ಲಿ ಚೆಟ್ರಿ ಅವರನ್ನು ಭೇಟಿಯಾಗಿದ್ದರು. 38 ವರ್ಷ ವಯಸ್ಸಿನ ಮೆಸ್ಸಿ ಇದುವರೆಗೆ 115 ಗೋಲು ಗಳಿಸಿದ್ದು ಎರಡನೇ ಸ್ಥಾನದಲ್ಲಿದ್ದಾರೆ.

ಮೆಸ್ಸಿ ಅವರ ‘ಕಲೆಗಾರಿಕೆ’ ತಾವು ಬೇಸರದಲ್ಲಿರುವ ವೇಳೆ ದಿವ್ಯೌಷಧದ ರೀತಿ ಕೆಲಸ ಮಾಡುತ್ತದೆ ಎಂದು ಅವರು ಬಣ್ಣಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.