ADVERTISEMENT

ತಂಡವನ್ನು ಒಗ್ಗೂಡಿಸಿದ ಒಂದೇ ಫೋನ್‌!

ಕಾಶ್ಮೀರದಲ್ಲಿ ಫುಟ್‌ಬಾಲ್‌ ಆಟಗಾರರ ಕತೆ

ಪಿಟಿಐ
Published 12 ನವೆಂಬರ್ 2019, 19:48 IST
Last Updated 12 ನವೆಂಬರ್ 2019, 19:48 IST
ರಿಯಲ್ ಕಾಶ್ಮೀರ್ ತಂಡದ ಆಟ  –ಸಾಂದರ್ಭಿಕ ಚಿತ್ರ
ರಿಯಲ್ ಕಾಶ್ಮೀರ್ ತಂಡದ ಆಟ  –ಸಾಂದರ್ಭಿಕ ಚಿತ್ರ   

ನವದೆಹಲಿ: ಐ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಆಡುತ್ತಿರುವ ರಿಯಲ್ ಕಾಶ್ಮೀರ್ ಫುಟ್‌ಬಾಲ್ ಕ್ಲಬ್‌ ತಂಡದ ಕಥೆ ಇದು. ಮಧ್ಯರಾತ್ರಿಯಾಗಲಿ, ಮುಂಜಾನೆಯಾಗಲಿ ಈ ತಂಡದ ಹತ್ತಾರು ಜನರ ನಡುವೆ ಒಂದೇ ಫೋನ್‌ ಕೈ ಬದಲಾಗುತ್ತಿರುತ್ತದೆ.

ಕಣಿವೆ ರಾಜ್ಯ ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಂಡ ಬಳಿಕ ದೂರವಾಣಿ ಸಂಪರ್ಕ ಸ್ಥಗಿತಗೊಳಿಸಲಾಗಿದೆ. ಈ ತಂಡದ ಸಹಮಾಲೀಕ ಸಂದೀಪ್‌ ಚಟ್ಟೂ ಅವರು ಹೊಂದಿರುವ ಫೋನ್‌ನಿಂದಲೇ ಆಟಗಾರರು ದೇಶ ಹಾಗೂ ವಿದೇಶಗಳಲ್ಲಿರುವ ತಮ್ಮ ಕುಟುಂಬಗಳೊಂದಿಗೆ ಸಂಪರ್ಕ ಸಾಧಿಸುವಂತಾಗಿದೆ.

ಸಂದೀಪ್‌ ಅವರು ಶಮಿಮ್‌ ಮೆರಾಜ್‌ ಅವರೊಂದಿಗೆ ರಿಯಲ್‌ ಕಾಶ್ಮೀರ ಎಫ್‌ಸಿ ತಂಡದ ಸಹಮಾಲೀಕತ್ವ ಹೊಂದಿದ್ದಾರೆ. ‘ವಿಶೇಷ ಅನುಮತಿ’ಯೊಂದಿಗೆ ಕಾಶ್ಮೀರದಲ್ಲಿ ಅವರು ತಮ್ಮ ಫೋನ್‌ ಸಕ್ರಿಯಗೊಳಿಸಿಕೊಂಡಿದ್ದಾರೆ.

ADVERTISEMENT

‘ಒಂದೊಂದು ಸಲ ನಸುಕಿನ ಮೂರು ಗಂಟೆಗೆ ಫೋನ್‌ ರಿಂಗಣಿಸುತ್ತದೆ. ಜಿಂಬಾಬ್ವೆ, ಇಂಗ್ಲೆಂಡ್‌ ಹಾಗೂ ನೈಜಿರೀಯಾದಿಂದಲೂ ಕರೆಗಳು ಬರುತ್ತವೆ’ ಎಂದು ಸಂದೀಪ್‌ ಹೇಳಿದರು.

ಕಾಶ್ಮೀರದಲ್ಲಿ ಪಂದ್ಯಗಳ ಆಯೋಜನೆ: ರಿಯಲ್‌ ಕಾಶ್ಮೀರ ಎಫ್‌ಸಿ ತವರಿನಲ್ಲಿ ಆಡಬೇಕಿರುವ ಐಲೀಗ್‌ ಟೂರ್ನಿಯ ಪಂದ್ಯಗಳನ್ನು ಶ್ರೀನಗರದಲ್ಲೇ ಆಯೋಜಿಸುವ ವಿಶ್ವಾಸವಿದೆ ಎಂದುಮಂಗಳವಾರ ಸಂದೀಪ್‌ ಚಟ್ಟೂ ಹೇಳಿದ್ದಾರೆ.

‘ನಾವು ಆಡುವ ಪಂದ್ಯಗಳ ಮಾಹಿತಿಯಿದೆ. ಡಿಸೆಂಬರ್‌ 12ರಂದು ತವರಿನಲ್ಲಿ ನಮ್ಮ ಮೊದಲ ಪಂದ್ಯ ನಡೆಯಲಿದೆ. ಎಲ್ಲರಿಗೂ ಸ್ವಾಗತ’ ಎಂದು ತಂಡದ ಹೊಸ ಪೋಷಾಕು ಅನಾವರಣ ಮಾಡಿದ ಬಳಿಕ ಅವರು ಮಾತನಾಡಿದರು.

ಪುಲ್ವಾಮಾ ಭಯೋತ್ಪಾದಕ ದಾಳಿಯ ಬಳಿಕ ಶ್ರೀನಗರದಲ್ಲಿ ಐ ಲೀಗ್ ಟೂರ್ನಿಯ ಪಂದ್ಯಗಳನ್ನು ಆಡಲು ಮಿನರ್ವಾ ಪಂಜಾಬ್‌ ಎಫ್‌ಸಿ ಹಾಗೂ ಈಸ್ಟ್‌ ಬೆಂಗಾಲ್‌ ಎಫ್‌ಸಿ ತಂಡಗಳು ನಿರಾಕರಿಸಿದ್ದವು.

ಸುರಕ್ಷತೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸಂದೀಪ್, ‘ಇತರ ರಾಜ್ಯಗಳಲ್ಲಿ ಕ್ಲಬ್‌ಗಳು ಪಂದ್ಯ ಆಯೋಜಿಸುವ ವೇಳೆ ನೀಡುವ ಉತ್ತಮ ದರ್ಜೆಯ ಭದ್ರತೆಯನ್ನೇ ನಾವು ನಿರೀಕ್ಷಿಸುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.