ADVERTISEMENT

ವಿಯೆಟ್ನಾಂ ಎದುರು 2ನೇ ಪಂದ್ಯ: ಜಯದ ವಿಶ್ವಾಸದಲ್ಲಿ ಭಾರತ ಮಹಿಳಾ ತಂಡ

ಫುಟ್‌ಬಾಲ್‌

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 17:44 IST
Last Updated 5 ನವೆಂಬರ್ 2019, 17:44 IST
   

ನವದೆಹಲಿ: ಭಾರತ ಮಹಿಳಾ ಫುಟ್‌ಬಾಲ್‌ ತಂಡ, ವಿಯೆಟ್ನಾಂ ವಿರುದ್ಧ ಬುಧವಾರ ನಡೆಯುವ ಎರಡನೇ ಸೌಹಾರ್ದ ಪಂದ್ಯದಲ್ಲಿ ಗೆಲುವು ಸಾಧಿಸುವ ವಿಶ್ವಾಸದಲ್ಲಿದೆ. ಮೊದಲ ಪಂದ್ಯದಲ್ಲಿ ಭಾರತ 0–3ರಿಂದ ನಿರಾಸೆ ಕಂಡಿತ್ತು.

‘ಮೊದಲ ಪಂದ್ಯದ ಸೋಲಿನಿಂದ ಸಾಕಷ್ಟು ಪಾಠ ಕಲಿತಿದ್ದೇವೆ. ಅದೊಂದು ಕಠಿಣ ಹಣಾಹಣಿಯಾಗಿತ್ತು. ಎದುರಾಳಿಯ ಬಲಾಬಲವನ್ನು ಅರಿಯಲು ಆ ಪಂದ್ಯ ಅನುಕೂಲವಾಗಿದೆ. ಎರಡನೇ ಪಂದ್ಯದಲ್ಲಿ ಪುಟಿದೇಳಲಿದ್ದೇವೆ’ ಎಂದು ಭಾರತ ಮಹಿಳಾ ತಂಡದ ಮುಖ್ಯ ಕೋಚ್‌ ಮಾಯ್ಮೊಲ್‌ ರಾಕಿ ವಿಶ್ವಾಸ ವ್ಯಕ್ತಪಡಿಸಿದರು.

ಈ ವರ್ಷದ ಆರಂಭದಲ್ಲಿ ಉಜ್ಬೆಕಿಸ್ತಾನ ವಿರುದ್ಧದ ಸೌಹಾರ್ದ ಸರಣಿಯ ಮೊದಲ ಪಂದ್ಯದಲ್ಲೂ ಭಾರತ 1–5ರಿಂದ ಸೋಲು ಕಂಡಿತ್ತು. ಆದರೆ ಎರಡನೇ ಹಣಾಹಣಿಯಲ್ಲಿ ಉತ್ತಮ ಆಟವಾಡಿ 1–1 ಡ್ರಾ ಸಾಧಿಸಿತ್ತು.

ADVERTISEMENT

‘ಇಂಥ ಸ್ಪರ್ಧಾತ್ಮಕ ಪಂದ್ಯಗಳು ನಮ್ಮ ಆಟಗಾರ್ತಿಯರಿಗೆ ಅನುಭವವನ್ನು ಹೆಚ್ಚಿಸಿಕೊಳ್ಳಲು ಅನುಕೂಲವಾಗುತ್ತವೆ. ಮುಂದಿನ ವರ್ಷ ನಡೆಯಲಿರುವ ಎಎಫ್‌ಸಿ ಮಹಿಳಾ ಏಷ್ಯಾಕಪ್‌ ಅರ್ಹತಾ ಟೂರ್ನಿಗೆ ಸಜ್ಜುಗೊಳ್ಳಲು ಸಹಾಯವಾಗುತ್ತವೆ’ ಎಂದು ರಾಕಿ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.