ADVERTISEMENT

ಎಂಬಾಪೆ ಮೇಲೆ ನಿರೀಕ್ಷೆ ಭಾರ

ಕ್ವಾರ್ಟರ್‌ ಫೈನಲ್‌ನಲ್ಲಿ ಇಂದು ಫ್ರಾನ್ಸ್‌– ಇಂಗ್ಲೆಂಡ್‌ ಸೆಣಸು

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2022, 12:01 IST
Last Updated 9 ಡಿಸೆಂಬರ್ 2022, 12:01 IST

ದೋಹಾ: ಫ್ರಾನ್ಸ್‌ ಮತ್ತು ಇಂಗ್ಲೆಂಡ್‌ ತಂಡಗಳು ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಶನಿವಾರ ಪರಸ್ಪರ ಎದುರಾಗಲಿದ್ದು, ಸಹಜವಾಗಿ ಎಲ್ಲರ ಚಿತ್ತ ಕೈಲಿಯಾನ್‌ ಎಂಬಾಪೆ ಮೇಲೆ ನೆಟ್ಟಿದೆ.

ಅಲ್‌ ಖೊರ್‌ನಲ್ಲಿರುವ ಅಲ್‌ ಬೈತ್‌ ಕ್ರೀಡಾಂಗಣದಲ್ಲಿ ಸಮಬಲದ ಪೈಪೋಟಿ ನಡೆಯುವ ಸಾಧ್ಯತೆಯಿದೆ. ಹಾಲಿ ಚಾಂಪಿಯನ್‌ ಫ್ರಾನ್ಸ್‌ ತಂಡದ ಸ್ಟ್ರೈಕರ್‌ಗಳು ಮತ್ತು ಇಂಗ್ಲೆಂಡ್‌ನ ಡಿಫೆಂಡರ್‌ಗಳ ನಡುವಿನ ಹಣಾಹಣಿ, ಫುಟ್‌ಬಾಲ್‌ ಪ್ರೇಮಿಗಳಿಗೆ ಸಾಕಷ್ಟು ರಸದೌತಣ ಉಣಬಡಿಸಲಿದೆ.

ಫ್ರಾನ್ಸ್‌ ತಂಡದ ನಿರೀಕ್ಷೆಯ ಭಾರ ಎಂಬಾಪೆ ಅವರ ಮೇಲಿದೆ. ಐದು ಗೋಲುಗಳು ಮತ್ತು ಎರಡು ಅಸಿಸ್ಟ್‌ಗಳ ಮೂಲಕ ಅವರು ಎದುರಾಳಿ ತಂಡಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದಾರೆ. ಆಕರ್ಷಕ ಡ್ರಿಬ್ಲಿಂಗ್‌ ಮತ್ತು ಚೆಂಡನ್ನು ಬಿರುಸಿನ ವೇಗದಲ್ಲಿ ಗೋಲುಪೆಟ್ಟಿಗೆಯತ್ತ ಕಳಿಸಬಲ್ಲ ಅವರ ಸಾಮರ್ಥ್ಯ ಈಗಾಗಲೇ ಅನಾವರಣಗೊಂಡಿದೆ.

ADVERTISEMENT

ಈ ಪಂದ್ಯವನ್ನು ಎಂಬಾಪೆ ಮತ್ತು ಇಂಗ್ಲೆಂಡ್‌ನ ಡಿಫೆಂಡರ್‌ ಕೈಲಿ ವಾಕರ್‌ ನಡುವಿನ ಹೋರಾಟ ಎಂದೇ ಬಿಂಬಿಸಲಾಗಿದೆ. ಇಬ್ಬರೂ ವೇಗದ ಆಟದ ಮೂಲಕ ಗಮನ ಸೆಳೆದಿದ್ದಾರೆ. ಎಂಬಾಪೆ ಅಲ್ಲದೆ ಒಲಿವಿಯರ್‌ ಗಿರೋಡ್‌, ಉಸ್ಮಾನ್‌ ದೆಂಬೆಲೆ ಮತ್ತು ಆಂಟೋನ್‌ ಗ್ರೀಸ್‌ಮನ್‌ ಅವರೂ ಫ್ರಾನ್ಸ್‌ ಪರ ಮಿಂಚುವ ವಿಶ್ವಾಸದಲ್ಲಿದ್ಧಾರೆ.

ಅನುಭವಿ ಮತ್ತು ಯುವ ಆಟಗಾರರನ್ನು ಒಳಗೊಂಡಿರುವ ಇಂಗ್ಲೆಂಡ್‌ ತಂಡ ಸೆಮಿ ಪ್ರವೇಶದ ಕನಸಿನೊಂದಿಗೆ ಕಣಕ್ಕಿಳಿಯಲಿದೆ. 2018ರ ಟೂರ್ನಿಯಲ್ಲಿ ಇಂಗ್ಲೆಂಡ್‌ ಪರ ಅತಿಹೆಚ್ಚು ಗೋಲುಗಳನ್ನು ಗಳಿಸಿದ್ದ ಹ್ಯಾರಿ ಕೇನ್‌, ಕತಾರ್‌ನಲ್ಲಿ ಇದುವರೆಗೆ ಒಂದು ಸಲ ಮಾತ್ರ ಚೆಂಡನ್ನು ಗುರಿ ಸೇರಿಸಿದ್ಧಾರೆ. ಆದರೆ ಮೂರು ಗೋಲುಗಳಿಗೆ ಅಸಿಸ್ಟ್‌ ಮೂಲಕ ಅವರೂ ಮಿಂಚಿದ್ದಾರೆ.

ಜಾಕ್‌ ಗ್ರೀಲಿಶ್‌, ರಹೀಂ ಸ್ಟರ್ಲಿಂಗ್‌ ಅಲ್ಲದೆ ಯುವ ಆಟಗಾರರಾದ ಜೂಡ್‌ ಬೆಲಿಂಗ್‌ಹ್ಯಾಂ ಮತ್ತು ಮಾರ್ಕಸ್‌ ರ‍್ಯಾಷ್‌ಫೋರ್ಡ್‌ ಅವರು ಇಂಗ್ಲೆಂಡ್‌ನ ಬಲ ಹೆಚ್ಚಿಸಿದ್ದಾರೆ. ಡಿಫೆಂಡರ್‌ಗಳಿಗೆ ಹೋಲಿಸಿದರೆ ಇಂಗ್ಲೆಂಡ್‌ ತಂಡ ಫ್ರಾನ್ಸ್‌ಗಿಂತ ಹೆಚ್ಚಿನ ಶಕ್ತಿ ಹೊಂದಿದೆ. ಇದು ಹಾಲಿ ಚಾಂಪಿಯನ್ನರಿಗೆ ಮುಳುವಾಗಿ ಪರಿಣಮಿಸುವ ಸಾಧ್ಯತೆಯಿದೆ.

‘ಎಂಬಾಪೆ ಅವರ ವೇಗದ ಆಟಕ್ಕೆ ತಡೆಯೊಡ್ಡುವುದು ನನ್ನ ಕೆಲಸ. ಆ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಬಲ್ಲೆ’ ಎಂದು ವಾಕರ್‌ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಇಂಗ್ಲೆಂಡ್‌ ಮತ್ತು ಫ್ರಾನ್ಸ್‌ ತಂಡಗಳು ವಿಶ್ವಕಪ್‌ ಟೂರ್ನಿಯಲ್ಲಿ ಎರಡು ಸಲ ಎದುರಾಗಿದ್ದು, ಎರಡೂ ಪಂದ್ಯಗಳಲ್ಲಿ ಆಂಗ್ಲರ ನಾಡಿನ ತಂಡ ಗೆದ್ದಿದೆ. 1966ರ ಟೂರ್ನಿಯ ಗುಂಪು ಹಂತದ ಪಂದ್ಯವನ್ನು 2–0 ಗೋಲುಗಳಿಂದ ಹಾಗೂ 1982ರ ಟೂರ್ನಿಯ ಪಂದ್ಯವನ್ನು 3–1 ಗೋಲುಗಳಿಂದ ಜಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.