ADVERTISEMENT

ಕ್ವಾರ್ಟರ್‌ಫೈನಲ್‌ಗೆ ಫ್ರಾನ್ಸ್

ಕೈಲಿಯಾನ್ ಎಂಬಾಪೆ ಮಿಂಚು: ಪೋಲೆಂಡ್‌ಗೆ ಸೋಲು

ಏಜೆನ್ಸೀಸ್
Published 5 ಡಿಸೆಂಬರ್ 2022, 5:08 IST
Last Updated 5 ಡಿಸೆಂಬರ್ 2022, 5:08 IST
ಗೋಲು ಗಳಿಸಿದ ಕೈಲಿಯಾನ್ ಎಂಬಾಪೆ– ಎಎಫ್‌ಪಿ ಚಿತ್ರ
ಗೋಲು ಗಳಿಸಿದ ಕೈಲಿಯಾನ್ ಎಂಬಾಪೆ– ಎಎಫ್‌ಪಿ ಚಿತ್ರ   

ದೋಹಾ: ಕೈಲಿಯಾನ್ ಎಂಬಾಪೆ ಗಳಿಸಿದ ಎರಡು ಗೋಲುಗಳು ಮತ್ತು ಒಲಿವಿಯರ್‌ ಜಿರೋದ್‌ ಗಳಿಸಿದ ಐತಿಹಾಸಿಕ ಗೋಲಿನ ಬಲದಿಂದ ಫ್ರಾನ್ಸ್ ತಂಡವು ವಿಶ್ವಕಪ್ ಟೂರ್ನಿಯ ಎಂಟರಘಟ್ಟಕ್ಕೆ ತಲುಪಿತು.

ಇಲ್ಲಿಯ ಅಲ್‌ ತುಮಾಮಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪ್ರೀಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಫ್ರಾನ್ಸ್ 3–1ರಿಂದ ಪೋಲೆಂಡ್‌ ತಂಡವನ್ನು ಪರಾಭವಗೊಳಿಸಿತು.

44ನೇ ನಿಮಿಷದಲ್ಲಿ ಎಂಬಾಪೆ ನೀಡಿದ ನೆರವಿನಲ್ಲಿ ಒಲಿವಿಯರ್‌ ಜಿರೋದ್‌ ತಂಡದ ಮೊದಲ ಗೋಲು ದಾಖಲಿಸಿದರು. ಇದು ಫ್ರಾನ್ಸ್ ತಂಡಕ್ಕಾಗಿ ಅವರು ಗಳಿಸಿದ 52ನೇ ಗೋಲು. ಇದರೊಂದಿಗೆ ಥಿಯರಿ ಹೆನ್ರಿ (51 ಗೋಲು) ಅವರ ಸಾಧನೆಯನ್ನು ಮೀರಿನಿಂತ ಜಿರೋಡ್‌ದೇಶದ ಪರ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎನಿಸಿಕೊಂಡರು.

ADVERTISEMENT

74ನೇ ನಿಮಿಷದಲ್ಲಿ ಎಂಬಾಪೆ ತೋರಿದ ಕಾಲ್ಚಳಕವು ಫ್ರಾನ್ಸ್ ತಂಡದ ಗೆಲುವನ್ನು ಬಹುತೇಕ ಖಚಿತಪ‍ಡಿಸಿತು. 90+1ನೇ ನಿಮಿಷದಲ್ಲಿ ಅವರು ಮತ್ತೊಂದು ಬಾರಿ ಚೆಂಡನ್ನು ಗೋಲ್‌ಪೋಸ್ಟ್‌ಗೆ ಸೇರಿಸಿದರು. ಇದರೊಂದಿಗೆ ವಿಶ್ವಕಪ್ ಟೂರ್ನಿಯ ಒಟ್ಟು 11 ಪಂದ್ಯಗಳಿಂದ ಒಂಬತ್ತು ಗೋಲುಗಳನ್ನು ಗಳಿಸಿದ ಸಾಧನೆ ಮಾಡಿದರು.

90+9ನೇ ನಿಮಿಷದಲ್ಲಿ ರಾಬರ್ಟ್‌ ಲೆವಾಂಡೊಸ್ಕಿ ಪೋಲೆಂಡ್‌ ತಂಡಕ್ಕಾಗಿ ಸಮಾಧಾನಕರ ಗೋಲು ಹೊಡೆದರು. ಪೆನಾಲ್ಟಿ ಅವಕಾಶವನ್ನು ಅವರು ಗೋಲಿನಲ್ಲಿ ಪರಿವರ್ತಿಸಿದರು.

ದಾಖಲೆ ಸರಿಗಟ್ಟಿದ ಲಾರಿಸ್‌: ಫ್ರಾನ್ಸ್ ಗೋಲ್‌ಕೀಪರ್ ಹ್ಯೂಗೊ ಲಾರಿಸ್ ಅವರ ರಾಷ್ಟ್ರೀಯ ತಂಡದ ಪರ ಅತ್ಯಧಿಕ ‍ಪಂದ್ಯವಾಡಿದ ದಾಖಲೆ ಸರಿಗಟ್ಟಿದರು. ಲಾರಿಸ್‌ ಮತ್ತು ಮಾಜಿ ಆಟಗಾರ ಲಿಲಿಯನ್ ತುರಾಮ್‌ ತಲಾ 142 ಪಂದ್ಯಗಳನ್ನು ಆಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.