ADVERTISEMENT

ಫುಟ್‌ಬಾಲ್‌: ರಾಷ್ಟ್ರೀಯ ತಂಡಕ್ಕೆ ಯುವ ಕೀಪರ್‌ ಧೀರಜ್‌ಗೆ ಅವಕಾಶ

ಪಿಟಿಐ
Published 6 ನವೆಂಬರ್ 2019, 20:00 IST
Last Updated 6 ನವೆಂಬರ್ 2019, 20:00 IST

ನವದೆಹಲಿ: ಉದಯೋನ್ಮುಖ ಗೋಲ್‌ಕೀಪರ್‌ ಮೊಯಿರಂಗ್‌ಥೆಮ್‌ ಧೀರಜ್‌ ಸಿಂಗ್‌,ಈ ತಿಂಗಳ ಮಧ್ಯದಲ್ಲಿ ನಡೆಯಲಿರುವ ಅಫ್ಗಾನಿಸ್ತಾನ ಮತ್ತು ಒಮನ್‌ ತಂಡಗಳ ವಿರುದ್ಧ ನಡೆಯಲಿರುವ 2022ರ ಫಿಫಾ ವಿಶ್ವ ಕಪ್‌ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಆಡುವ ಭಾರತ ತಂಡದಲ್ಲಿ ಅವಕಾಶ ಪಡೆದಿದ್ದಾರೆ.

ರಾಷ್ಟ್ರೀಯ ತಂಡದ ಮುಖ್ಯ ಕೋಚ್‌ ಇಗೊರ್ ಸ್ಟಿಮ್ಯಾಕ್‌ ನೇತೃತ್ವದಲ್ಲಿ 26 ಆಟಗಾರರ ತಂಡವನ್ನು ಅಂತಿಮಗೊಳಿಸಲಾಯಿತು. ಧೀರಜ್‌ ಮೊದಲ ಬಾರಿ ಸೀನಿಯರ್‌ ತಂಡಕ್ಕೆ ಕರೆ ಪಡೆದಿದ್ದಾರೆ.

ಭಾರತ ನವೆಂಬರ್‌ 14ರಂದು ದುಷಾಂಬೆಯಲ್ಲಿ (ತಜಿಕಿಸ್ತಾನ ರಾಜಧಾನಿ) ನಡೆಯುವ ಮೊದಲ ಲೆಗ್‌ ಪಂದ್ಯದಲ್ಲಿ ಅಫ್ಗಾನಿಸ್ತಾನ ವಿರುದ್ಧ ಆಡಲಿದೆ. ಐದು ದಿನಗಳ ನಂತರ ಮಸ್ಕತ್‌ನಲ್ಲಿ ನಡೆಯಲಿರುವ ಎರಡನೇ ಲೆಗ್‌ ಪಂದ್ಯದಲ್ಲಿ ಒಮನ್‌ ವಿರುದ್ಧ ಆಡಲಿದೆ. ಗುವಾಹಟಿಯಲ್ಲಿ ಕಳೆದ ತಿಂಗಳು ನಡೆದ ತವರಿನ ಲೆಗ್‌ನಲ್ಲಿ ಭಾರತ 1–2 ಗೋಲುಗಳಿಂದ ಒಮನ್‌ಗೆ ಮಣಿದಿತ್ತು.‌

ADVERTISEMENT

2017ರ ಫಿಫಾ 17 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಧೀರಜ್‌ ಅವರ ಪ್ರದರ್ಶನ ಗಮನ ಸೆಳೆದಿತ್ತು. ಅಮರ್‌ಜಿತ್‌ ಸಿಂಗ್‌ ಮತ್ತು ರಕ್ಷಣೆ ಆಟಗಾರ ಅನ್ವರ್‌ ಅಲಿ ಅವರ ನಂತರ ಸೀನಿಯರ್‌ ತಂಡಕ್ಕೆ ಆಯ್ಕೆಯಾದ ಮೂರನೇ ಆಟಗಾರ ಎನಿಸಿದ್ದಾರೆ.

ಭಾರತ ತಂಡ ಗ್ರೂಪ್‌ ‘ಇ’ನಲ್ಲಿ ಮೂರು ಪಂದ್ಯಗಳಿಂದ ಎರಡು ಅಂಕ ಗಳಿಸಿದೆ. ಬಾಂಗ್ಲಾದೇಶ (1–1) ಮತ್ತು ಏಷ್ಯನ್‌ ಚಾಂಪಿಯನ್ಸ್‌ ಕತಾರ್‌ (0–0) ಜೊತೆ ‘ಡ್ರಾ’ ಮಾಡಿಕೊಂಡಿದೆ.

ತಂಡ ಇಂತಿದೆ:

ಗೋಲ್‌ಕೀಪರ್ಸ್‌: ಗುರುಪ್ರೀತ್‌ ಸಿಂಗ್‌ ಸಂಧು, ಅಮ್ರಿಂದರ್‌ ಸಿಂಗ್‌, ಧೀರಜ್‌ ಸಿಂಗ್‌ ಮೊಯಿರಂಗಥೆಮ್‌. ಡಿಫೆಂಡರ್ಸ್‌: ಪ್ರೀತಮ್‌ ಕೊಟಾಲ್‌, ನಿಶು ಕುಮಾರ್‌, ರಾಹುಲ್‌ ಭೆಕೆ, ಅನಾಸ್‌ ಎಡತೊಡಿಕಾ, ನರೇಂದರ್‌, ಆದಿಲ್‌ ಖಾನ್‌, ಸಾರ್ಥಕ್‌ ಗೊಲುಯಿ, ಸುಭಾಶಿಷ್‌ ಬೋಸ್‌, ಮಂದಾರ್‌ ರಾವ್‌ ದೇಸಾಯಿ. ಮಿಡ್‌ಫೀಲ್ಡರ್ಸ್‌: ಉದಾಂತ ಸಿಂಗ್‌, ಜಾಕಿಚಂದ್‌ ಸಿಂಗ್‌, ಸೀಮಿನ್‌ಲೆನ್‌ ಡಂಜೆಲ್‌, ರೇನಿಯರ್‌ ಫರ್ನಾಂಡಿಸ್‌, ವಿನಿತ್‌ ರಾಯ್‌, ಸಾಹಲ್‌ ಅಬ್ದುಲ್‌ ಸಮದ್‌, ಪ್ರಣಯ್‌ ಹಲ್ದಾರ್‌, ಅನಿರುದ್ಧ ಥಾಪ, ಲಾಲಿಯನ್‌ಝುವಲ ಚಾಂಗ್ಟೆ, ಬ್ರಂಡನ್‌ ಫರ್ನಾಂಡಿಸ್‌, ಆಶಿಕ್‌ ಕುರುಣಿಯನ್‌. ಫಾರ್ವರ್ಡ್ಸ್‌: ಸುನಿಲ್‌ ಚೆಟ್ರಿ, ಫಾರೂಕ್ ಚೌಧರಿ ಮತ್ತು ಮನವಿರ್‌ ಸಿಂಗ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.