ADVERTISEMENT

ಐಎಸ್‌ಎಲ್‌: ಮುಂಬೈ ಎಫ್‌ಸಿಗೆ ಅಗ್ರಸ್ಥಾನ ಉಳಿಸಿಕೊಳ್ಳುವ ಭರವಸೆ

ಪಿಟಿಐ
Published 8 ಡಿಸೆಂಬರ್ 2020, 13:02 IST
Last Updated 8 ಡಿಸೆಂಬರ್ 2020, 13:02 IST
ಮುಂಬೈ ವಿರುದ್ಧದ ಪಂದ್ಯಕ್ಕಾಗಿ ಅಭ್ಯಾಸ ನಡೆಸಿದ ಚೆನ್ನೈಯಿನ್ ಎಫ್‌ಸಿ ಆಟಗಾರರು –ಐಎಸ್‌ಎಲ್ ಮೀಡಿಯಾ ಚಿತ್ರ
ಮುಂಬೈ ವಿರುದ್ಧದ ಪಂದ್ಯಕ್ಕಾಗಿ ಅಭ್ಯಾಸ ನಡೆಸಿದ ಚೆನ್ನೈಯಿನ್ ಎಫ್‌ಸಿ ಆಟಗಾರರು –ಐಎಸ್‌ಎಲ್ ಮೀಡಿಯಾ ಚಿತ್ರ   

ಬ್ಯಾಂಬೊಲಿಮ್: ಅಮೋಘ ಆಟದ ಮೂಲಕ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿ ಪಾಯಿಂಟ್ ಪಟ್ಟಿಯ ಅಗ್ರಸ್ಥಾನದಲ್ಲಿರುವ ಮುಂಬೈ ಸಿಟಿ ಎಫ್‌ಸಿ ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ಬುಧವಾರ ಚೆನ್ನೈಯಿನ್‌ ಎಫ್‌ಸಿ ತಂಡವನ್ನು ಎದುರಿಸಲಿದೆ. ನಾಲ್ಕು ಪಂದ್ಯಗಳಲ್ಲಿ ಒಂದನ್ನು ಮಾತ್ರ ಸೋತಿರುವ ಮುಂಬೈ ಈ ಪಂದ್ಯದಲ್ಲಿ ಅಜೇಯವಾಗಿ ಉಳಿದು ಅಗ್ರಸ್ಥಾನವನ್ನು ಉಳಿಸಿಕೊಳ್ಳಲು ಪ್ರಯತ್ನಿಸಲಿದೆ.

ನಾರ್ತ್ ಈಸ್ಟ್ ಯುನೈಟೆಡ್‌ ಎಫ್‌ಸಿ ಎದುರು ಟೂರ್ನಿಯ ಮೊದಲ ಪಂದ್ಯದಲ್ಲೇ ಸೋಲುಂಡಿದ್ದ ಸರ್ಜಿಯೊ ಲೊಬೆರೊ ಅವರ ಮುಂಬೈ ಸಿಟಿ ನಂತರ ಪುಟಿದೆದ್ದು ಸತತ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ತಂಡದ ಖಾತೆಯಲ್ಲಿ ಈಗ ಒಂಬತ್ತು ಪಾಯಿಂಟ್‌ಗಳು ಇವೆ. ಎಟಿಕೆ ಮೋಹನ್ ಬಾಗನ್ ತಂಡವೂ ಒಂಬತ್ತು ಪಾಯಿಂಟ್‌ಗಳನ್ನು ಗಳಿಸಿದೆ. ಆದರೆ ಗೋಲು ಸರಾಸರಿ ಆಧಾರದಲ್ಲಿ ಮುಂಬೈ ಅಗ್ರಸ್ಥಾನದಲ್ಲಿದೆ. ಸೋಮವಾರದ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್ ತಂಡ ಜೆಮ್ಶೆಡ್‌ಪುರ ಎಫ್‌ಸಿ ಎದುರು ಸೋತ ಕಾರಣ ಮುಂಬೈ ತಂಡದ ಅಗ್ರ ಪಟ್ಟಕ್ಕೆ ಧಕ್ಕೆಯಾಗಲಿಲ್ಲ.

ಪಂದ್ಯದಿಂದ ಪಂದ್ಯಕ್ಕೆ ಆಟಗಾರರನ್ನು ಬದಲಿಸುವ ಲೊಬೆರೊ ಅವರ ತಂತ್ರ ಫಲ ನೀಡುತ್ತಿದೆ. ತಂಡದ ಎಲ್ಲ ವಿಭಾಗದವರೂ ಸಂಪೂರ್ಣ ಸಾಮರ್ಥ್ಯವನ್ನು ಹೊರಗೆಡಹುತ್ತಿರುವುದರಿಂದ ತಂಡದ ಭರವಸೆ ಹೆಚ್ಚಿದೆ. ಅಹಮ್ಮದ್ ಜಹೊ, ಹ್ಯೂಗೊ ಬೌಮೊಸ್, ರಾವ್ಲಿನ್ ಬೋರ್ಜೆಸ್‌, ಆ್ಯಡಂ ಲಿ ಫಾಂಡ್ರೆ ಮುಂತಾದವರು ಉತ್ತಮ ಲಯದಲ್ಲಿದ್ದಾರೆ. ಗೋಲ್‌ಕೀಪರ್ ಅಮರಿಂದರ್ ಸಿಂಗ್ ನೇತೃತ್ವದ ರಕ್ಷಣಾ ವಿಭಾಗವೂ ಬಲಿಷ್ಠವಾಗಿದೆ. ಮೂರು ಪಂದ್ಯಗಳಲ್ಲಿ ಒಂದು ಗೋಲನ್ನು ಕೂಡ ಬಿಟ್ಟುಕೊಡದ ತಂಡ ಒಂದು ಪಂದ್ಯದಲ್ಲಿ ಕೇವಲ ಒಂದು ಗೋಲು ನೀಡಿದೆ.

ADVERTISEMENT

‘ಸದ್ಯದ ಪರಿಸ್ಥಿತಿ ಖುಷಿ ತಂದಿದೆ. ಪ್ರತಿ ಪಂದ್ಯವನ್ನೂ ಗೆಲ್ಲುವ ಛಲ ತಂಡದಲ್ಲಿದೆ. ಹೀಗಾಗಿ ಪಾಯಿಂಟ್ ಪಟ್ಟಿಯ ಅಗ್ರಸ್ಥಾನದಲ್ಲಿರಲು ಸಾಧ್ಯವಾಗಿದೆ. ಹಾಗೆಂದು ಅಷ್ಟಕ್ಕೇ ತೃಪ್ತಿಪಟ್ಟುಕೊಳ್ಳುವಂತಿಲ್ಲ. ಮುಂದಿನ ಪಂದ್ಯದಲ್ಲಿ ಜಯ ಸಾಧಿಸಲು ಯಾವ ತಂತ್ರಗಳನ್ನು ಅನುಸರಿಸಬೇಕು ಎಂಬುದರ ಮೇಲೆ ಗಮನ ಇರಿಸಬೇಕಾಗಿದೆ‘ ಎಂದು ಲೊಬೆರಾ ಹೇಳಿದರು.‌

ಚೆನ್ನೈಯಿನ್ ಎಫ್‌ಸಿ ತಂಡ ಈಗ ಸಂದಿಗ್ಧ ಸ್ಥಿತಿಯಲ್ಲಿದೆ. ಮೊದಲ ಪಂದ್ಯದಲ್ಲಿ ಜೆಮ್ಶೆಡ್‌ಪುರ ಎಫ್‌ಸಿಯನ್ನು 2–1ರ ಅಂತರದಲ್ಲಿ ಮಣಿಸಿ ಆತ್ಮವಿಶ್ವಾಸದಲ್ಲಿದ್ದ ತಂಡ ಮುಂದಿನ ಎರಡು ಪಂದ್ಯಗಳಲ್ಲಿ ಜಯ ಗಳಿಸಲು ವಿಫಲವಾಗಿದೆ. ಕೇರಳ ಬ್ಲಾಸ್ಟರ್ಸ್ ವಿರುದ್ಧದ ಪಂದ್ಯದಲ್ಲಿ ಗೋಲುರಹಿತ ಡ್ರಾ ಸಾಧಿಸಿದ ತಂಡ ಕಳೆದ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಎದುರು ಸೋಲು ಕಂಡಿತ್ತು. ಈ ಎರಡು ಪಂದ್ಯಗಳಲ್ಲಿ ತಂಡಕ್ಕೆ ಗೋಲು ಗಳಿಸಲು ಸಾಧ್ಯವಾಗದೇ ಇರುವುದು ಚಿಂತೆಗೆ ಈಡುಮಾಡಿರುವ ಸಂಗತಿ.

ಸಾಬಾ ಲಾಜ್ಲೊ ಅವರ ಚೆನ್ನೈಯಿನ್‌ ತಂಡದ ಆಕ್ರಮಣ ವಿಭಾಗ ಪ್ರಬಲವಾಗಿದೆ. ಆದರೆ ಅವಕಾಶಗಳನ್ನು ಗೋಲಾಗಿ ಪರಿವರ್ತಿಸಲು ಸಾಧ್ಯವಾಗದೇ ಇರುವುದು ತಂಡವನ್ನು ಕಾಡುತ್ತಿರುವ ಸಮಸ್ಯೆ. ಮುಂಬೈ ವಿರುದ್ಧ ಗೋಲು ಗಳಿಸುವ ಭರವಸೆಯಿಂದ ತಂಡ ಬುಧವಾರ ಕಣಕ್ಕೆ ಇಳಿಯಲಿದೆ. ಗಾಯಗೊಂಡಿರುವ ಅನಿರುದ್ಧ ಥಾಪಾ ಈ ಪಂದ್ಯಕ್ಕೆ ಲಭ್ಯ ಇರುವುದಿಲ್ಲ. ಆದ್ದರಿಂದ ನಾಯಕ ರಫೆಲ್ ಕ್ರಿವೆಲಾರೊ ಅವರ ಜವಾಬ್ದಾರಿ ಹೆಚ್ಚಿದ್ದು ಗೋಲು ಗಳಿಸುವ ಅವಕಾಶಗಳನ್ನು ಸೃಷ್ಟಿಸಲು ಹೆಚ್ಚು ಶ್ರಮ ಹಾಕಬೇಕಾದ ಅನಿವಾರ್ಯ ಸ್ಥಿತಿಯಲ್ಲಿದ್ದಾರೆ.

‘ಗೋಲು ಗಳಿಸುವ ಸಾಮರ್ಥ್ಯ ತಂಡಕ್ಕೆ ಇದೆ. ಆದರೆ ಅದು ಇನ್ನೂ ಪ್ರಕಟವಾಗಿಲ್ಲ. ಮುಂಬೈ ತಂಡದ ಶಕ್ತಿಯ ಬಗ್ಗೆ ಅರಿವಿದೆ. ಹಾಗೆಂದು ನಾವೇನೂ ಕಡಿಮೆ ಇಲ್ಲ. ನೈಜ ಆಟವನ್ನು ಆಡಿ ಪಂದ್ಯ ಗೆಲ್ಲಲು ಆಟಗಾರರು ಪ್ರಯತ್ನಿಸಲಿದ್ದಾರೆ’ ಎಂದು ಸಾಬಾ ಲಾಜ್ಲೊ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.