ADVERTISEMENT

ಫಿಫಾ ರ‍್ಯಾಂಕಿಂಗ್‌: ಭಾರತಕ್ಕೆ ಹಿನ್ನಡೆ

15 ಸ್ಥಾನ ಕೆಳಗಿಳಿದ ಭಾರತ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2024, 13:49 IST
Last Updated 15 ಫೆಬ್ರುವರಿ 2024, 13:49 IST
   

ನವದೆಹಲಿ: ಭಾರತ ಫುಟ್‌ಬಾಲ್‌ ತಂಡ, ಫಿಫಾ ವಿಶ್ವಕ್ರಮಾಂಕಪಟ್ಟಿಯಲ್ಲಿ 15 ಸ್ಥಾನಗಳಷ್ಟು ಕುಸಿತ ಕಂಡಿದ್ದು, 117ನೇ ಸ್ಥಾನಕ್ಕೆ ಸರಿದಿದೆ. ಇದು ಏಳು ವರ್ಷಗಳಲ್ಲಿ ಭಾರತದ ಅತ್ಯಂತ ಕಳಪೆ ರ‍್ಯಾಂಕಿಂಗ್ ಆಗಿದೆ.

ಎಎಫ್‌ಸಿ ಏಷ್ಯನ್ ಕಪ್‌ನಲ್ಲಿ ಭಾರತದ ವೈಫಲ್ಯ ಈ ಕುಸಿತಕ್ಕೆ ಕಾರಣವಾಗಿದೆ. ಭಾರತ ಗುಂಪು ಹಂತದ ಮೂರೂ ಪಂದ್ಯಗಳಲ್ಲಿ ಸೋಲನುಭವಿಸಿತ್ತು. 2017ರಲ್ಲಿ ಭಾರತ 129ನೇ ಸ್ಥಾನಕ್ಕೆ ಸರಿದಿತ್ತು. ಆದಾದ ನಂತರ ಇದೇ ಕಳಪೆ ರ‍್ಯಾಂಕಿಂಗ್ ಆಗಿದೆ. ರ‍್ಯಾಂಕಿಂಗ್‌ನಲ್ಲಿ ಭಾರತದ ಸಾರ್ವಕಾಲಿಕ ಕನಿಷ್ಠ ರ‍್ಯಾಂಕಿಂಗ ಎಂದರೆ 2015ರಲ್ಲಿ ಗಳಿಸಿದ್ದ 173ನೇ ಸ್ಥಾನ.

2013ರ ಡಿಸೆಂಬರ್ 21ರಂದು ಪ್ರಕಟವಾದ ಕ್ರಮಾಂಕಪಟ್ಟಿಯಲ್ಲಿ ಭಾರತ 102ನೇ ಸ್ಥಾನಕ್ಕೇರಿತ್ತು. ಈಗ ಭಾರತ ಟೊಗೊ (116ನೇ) ಮತ್ತು ಗಿನಿಯಾ ಬಿಸಾವು (118ನೇ ಸ್ಥಾನ) ತಂಡಗಳ ಮಧ್ಯೆ ಇದೆ.

ADVERTISEMENT

ಏಷ್ಯನ್ ರಾಷ್ಟ್ರಗಳ ಪೈಕಿ ಭಾರತ 22ನೇ ಸ್ಥಾನದಲ್ಲಿದೆ. ಇತ್ತೀಚಿನ ಏಷ್ಯನ್ ಕಪ್‌ನಲ್ಲಿ, ಇಗೊರ್ ಸ್ಟಿಮ್ಯಾಚ್‌ ತರಬೇತಿಯ ಭಾರತ ಒಂದೂ ಪಾಯಿಂಟ್‌ ಪಡೆಯಲು ಆಗಿರಲಿಲ್ಲ ಮಾತ್ರವಲ್ಲ, ಗೋಲು ಕೂಡ ಗಳಿಸಲು ಆಗಿರಲಿಲ್ಲ. ಭಾರತ ‘ಬಿ’ ಗುಂಪಿನಲ್ಲಿ ಆಸ್ಟ್ರೇಲಿಯಾ (0–2), ಉಜ್ಬೇಕಿಸ್ತಾನ (0–3) ಮತ್ತು ಸಿರಿಯಾ (0–1) ತಂಡಗಳೆದುರು ಸೋತಿತ್ತು.

ಮೊದಲ 10 ತಂಡಗಳ ಸ್ಥಾನಗಳು ಬದಲಾಗಿಲ್ಲ. ಅರ್ಜೆಂಟೀನಾ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಫ್ರಾನ್ಸ್‌, ಇಂಗ್ಲೆಮಡ್‌, ಬೆಲ್ಜಿಯಂ, ಬ್ರೆಜಿಲ್‌ ನಂತರದ ಸ್ಥಾನಗಳಲ್ಲಿವೆ.

ಏಷ್ಯನ್ ಕಪ್ ಚಾಂಪಿಯನ್ ಕತಾರ್ 21 ಸ್ಥಾನ ಮೇಲೆರಿದ್ದು 37ನೇ ಸ್ಥಾನಕ್ಕೇರಿದೆ. ಜಪಾನ್‌ ಒಂದು ಸ್ಥಾನ ಹಿಂಬಡ್ತಿ ಪಡೆದು 18ನೇ ಸ್ಥಾನದಲ್ಲಿದ್ದು, ಏಷ್ಯಾ ಖಂಡದ ರಾಷ್ಟ್ರಗಳ ಪೈಕಿ ಅಗ್ರಸ್ಥಾನದಲ್ಲಿದೆ. ಏಷ್ಯಾ ಕಪ್‌ನಲ್ಲಿ, ಎಲ್ಲರನ್ನು ಬೆರಗಾಗಿಸಿ ರನ್ನರ್ ಅಪ್‌ ಸ್ಥಾನ ಪಡೆದ ಜೋರ್ಡಾನ್ 17 ಸ್ಥಾನ ಬಡ್ತಿ ಪಡೆದು 70ನೇ ಸ್ಥಾನಕ್ಕೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.