ADVERTISEMENT

ಸ್ಯಾಫ್ ಚಾಂಪಿಯನ್‌ಷಿಪ್‌: ಭಾರತ ತಂಡಕ್ಕೆ ನೇಪಾಳ ಎದುರಾಳಿ

ಪಿಟಿಐ
Published 9 ಅಕ್ಟೋಬರ್ 2021, 14:34 IST
Last Updated 9 ಅಕ್ಟೋಬರ್ 2021, 14:34 IST
ಸುನಿಲ್ ಚೆಟ್ರಿ –ಎಐಎಫ್‌ಎಫ್‌ ಚಿತ್ರ
ಸುನಿಲ್ ಚೆಟ್ರಿ –ಎಐಎಫ್‌ಎಫ್‌ ಚಿತ್ರ   

ಮಾಲಿ: ಮೊದಲ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿರುವ ಭಾರತ ತಂಡ ಸ್ಯಾಫ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಭಾನುವಾರ ನೇಪಾಳವನ್ನು ಎದುರಿಸಲಿದೆ. ನಾಕೌಟ್ ಹಂತ ಪ್ರವೇಶಿಸಬೇಕಾದರೆ ಸುನಿಲ್ ಚೆಟ್ರಿ ಬಳಗಕ್ಕೆ ಈ ಪಂದ್ಯದಲ್ಲಿ ಜಯ ಅನಿವಾರ್ಯ.

ಏಳು ಬಾರಿಯ ಚಾಂಪಿಯನ್ ಭಾರತ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 1–1ರ ಡ್ರಾ ಮಾಡಿಕೊಂಡಿತ್ತು. ಶ್ರೀಲಂಕಾ ವಿರುದ್ಧ ನಡೆದ ಎರಡನೇ ಪಂದ್ಯ ಗೋಲುರಹಿತ ಡ್ರಾದಲ್ಲಿ ಕೊನೆಗೊಂಡಿತ್ತು. ಆದ್ದರಿಂದ ಪೂರ್ಣ ಪಾಯಿಂಟ್ ಸಂಪಾದಿಸಲು ಈ ವರೆಗೆ ಸಾಧ್ಯವಾಗಲಿಲ್ಲ. ಹೀಗಾಗಿ ತಂಡ ಸಂಕಷ್ಟಕ್ಕೆ ಸಿಲುಕಿದ್ದು ಉಳಿದಿರುವ ಎರಡು ಪಂದ್ಯಗಳಲ್ಲಿ ಜಯ ಗಳಿಸಿದರೆ ಮಾತ್ರ ಮುಂದಿನ ಹಂತಕ್ಕೆ ಲಗ್ಗೆ ಇರಿಸಲು ಸಾಧ್ಯ.

ಭಾರತ ಮತ್ತು ನೇಪಾಳ ಕಳೆದ ತಿಂಗಳ ಮೊದಲ ವಾರದಲ್ಲಿ ಸತತ ಎರಡು ಸ್ನೇಹಪರ ಪಂದ್ಯಗಳನ್ನು ಆಡಿವೆ. ಮೊದಲ ಪಂದ್ಯ ಡ್ರಾಗೊಂಡಿದ್ದರೆ, ಎರಡನೇ ಪಂದ್ಯದಲ್ಲಿ ಭಾರತ 2–1ರ ಜಯ ಸಾಧಿಸಿತ್ತು.

ADVERTISEMENT

‘ಈಗಾಗಲೇ ನೇಪಾಳ ವಿರುದ್ಧ ಎರಡು ಪಂದ್ಯಗಳನ್ನು ತಂಡ ಆಡಿದೆ. ಹೀಗಾಗಿ ಸದ್ಯ ಆ ತಂಡದ ಸಾಮರ್ಥ್ಯ ಮತ್ತು ದೌರ್ಬಲ್ಯ ಏನೆಂದು ಗೊತ್ತು. ಭಾನುವಾರದ ಪಂದ್ಯದಲ್ಲಿ ಸುಲಭ ಜಯ ಗಳಿಸುವುದು ಸಾಧ್ಯ. ಅದು ಅನಿವಾರ್ಯ ಕೂಡ ಆಗಿದೆ’ ಎಂದು ಕೋಚ್ ಇಗೊರ್ ಸ್ಟಿಮ್ಯಾಚ್ ಹೇಳಿದ್ದಾರೆ.

ಮಾಲ್ಡಿವ್ಸ್‌ ಮತ್ತು ಶ್ರೀಲಂಕಾ ಎದುರಿನ ಪಂದ್ಯಗಳಲ್ಲಿ ಜಯ ಗಳಿಸಿರುವ ನೇಪಾಳ ಸದ್ಯ ಆರು ಪಾಯಿಂಟ್‌ಗಳೊಂದಿಗೆ ಪಟ್ಟಿಯ ಅಗ್ರ ಸ್ಥಾನದಲ್ಲಿದೆ. ಭಾರತ ತಂಡ ಶನಿವಾರ ಅಭ್ಯಾಸ ನಡೆಸಿದ್ದು ಎಲ್ಲ 23 ಆಟಗಾರರು ಕೂಡ ಪಂದ್ಯಕ್ಕೆ ಲಭ್ಯ ಇದ್ದಾರೆ ಎಂದು ಪಂದ್ಯಪೂರ್ವ ಪತ್ರಿಕಾಗೋಷ್ಠಿಯಲ್ಲಿ ಮಿಡ್‌ಫೀಲ್ಡರ್ ಬ್ರೆಂಡನ್ ಫರ್ನಾಂಡಿಸ್ ತಿಳಿಸಿದ್ದಾರೆ.

ಚಾಂಪಿಯನ್‌ಷಿಪ್‌ನಲ್ಲಿ ಮುಂದಿನ ಹಂತ ತಲುಪುವುದಕ್ಕೆ ಇನ್ನೂ ಅವಕಾಶ ಇದೆ. ಹೀಗಾಗಿ ತಂಡದ ಆಸೆ ಜೀವಂತವಾಗಿಯೇ ಇದೆ. ಪ್ರಶಸ್ತಿ ಗೆಲ್ಲುವ ಆಸೆ ಇನ್ನೂ ಕೈಚೆಲ್ಲಲಿಲ್ಲ.

- ಇಗೊರ್ ಸ್ಟಿಮ್ಯಾಚ್,ಭಾರತ ತಂಡದ ಕೋಚ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.