ADVERTISEMENT

ವಿಶ್ವಕಪ್‌ ಅರ್ಹತೆ ಎಂಬ ಕಬ್ಬಿಣದ ಕಡಲೆ!

ವಿಕ್ರಂ ಕಾಂತಿಕೆರೆ
Published 17 ನವೆಂಬರ್ 2019, 19:31 IST
Last Updated 17 ನವೆಂಬರ್ 2019, 19:31 IST
ಭಾರತ ತಂಡ
ಭಾರತ ತಂಡ   

ಒಲಿಂಪಿಕ್ಸ್‌, ಏಷ್ಯನ್‌ ಗೇಮ್ಸ್ ಮುಂತಾದ ಟೂರ್ನಿಗಳಲ್ಲಿ ಪದಾರ್ಪಣೆ ಮಾಡಿರುವ ಭಾರತ ಫುಟ್‌ಬಾಲ್‌ ತಂಡಕ್ಕೆ ವಿಶ್ವಕಪ್‌ ಫುಟ್‌ಬಾಲ್‌ನಲ್ಲಿ ಕಾಲ್ಚಳಕ ತೋರುವ ಕನಸು ನನಸು ಮಾಡಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ಈ ಬಾರಿಯೂ ತಂಡ ‘ಅರ್ಹತೆ’ಗಾಗಿ ನಡೆಸುತ್ತಿರುವ ಪ್ರಯತ್ನಕ್ಕೆ ನಿರೀಕ್ಷಿತ ಫಲ ಸಿಗದೇ ಇರುವುದು ಫುಟ್‌ಬಾಲ್ ಪ್ರಿಯರಲ್ಲಿ ಬೇಸರ ಮೂಡಿಸಿದೆ.

‘ನಾಲ್ಕು ವರ್ಷಗಳ ಅವಧಿ ಮುಗಿಯುತ್ತಿದೆ. ಈಗ ವಿದಾಯದ ಸಮಯ. ಯಾವ ಉದ್ದೇಶ ಇರಿಸಿಕೊಂಡು ಬಂದಿದ್ದೆನೋ ಅದರಲ್ಲಿ ಯಶಸ್ಸು ಗಳಿಸಿದ್ದೇನೆ. ಏಷ್ಯಾಕಪ್‌ಗೆ ಅರ್ಹತೆ ಗಳಿಸುವ ದೊಡ್ಡ ಕನಸು ನನಸಾಗಿದೆ...’

ಭಾರತ ಫುಟ್‌ಬಾಲ್ ತಂಡದ ಯಶಸ್ವಿ ಕೋಚ್‌ಗಳ ಪೈಕಿ ಒಬ್ಬರಾಗಿರುವ ಸ್ಟೀಫನ್ ಕಾನ್‌ಸ್ಟಂಟೇನ್ ಅವಧಿ ಮುಗಿಸಿ ತವರಿಗೆ ಮರಳುವ ಸಂದರ್ಭದಲ್ಲಿ ಆಡಿದ ಮಾತು ಇದು. ನಿಖರ ಯೋಜನೆ, ಅವುಗಳನ್ನು ಕಾರ್ಯಗತಗೊಳಿಸುವ ಬದ್ಧತೆ ಇರುವ ಸ್ಟೀಫನ್ ಇನ್ನೂ ಕೆಲವು ವರ್ಷ ತಂಡದ ಜೊತೆ ಇದ್ದಿದ್ದರೆ ವಿಶ್ವಕಪ್‌ ಟೂರ್ನಿಯಲ್ಲಿ ಆಡಲು ಭಾರತ ತಂಡ ಅರ್ಹತೆ ಗಳಿಸುತ್ತಿತ್ತೇನೋ ಎಂಬ ಆಸೆ, ಆಕಾಂಕ್ಷೆ ದೇಶದ ಫುಟ್‌ಬಾಲ್ ಪ್ರಿಯರನ್ನು ಆಗಾಗ ಕಾಡುತ್ತಿದೆ. ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ಭಾರತ ತಂಡ ಈಗ ಕುಂಟುತ್ತ, ಮುಗ್ಗರಿಸುತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ ಸ್ಟೀಫನ್ ಅವರನ್ನು ನೆನಪಿಸಿಕೊಳ್ಳುವುದರಲ್ಲಿ ವಿಶೇಷವಿಲ್ಲ.

ADVERTISEMENT

ಒಂದು ದಶಕದ ಅವಧಿಯಲ್ಲಿ ಎರಡು ಬಾರಿ ತಂಡದ ಕೋಚ್ ಆಗಿ ನೇಮಕಗೊಂಡ ಸ್ಟೀಫನ್ ಎರಡೂ ಅವಧಿಯಲ್ಲೂ ತಂಡಕ್ಕೆ ಸಾಕಷ್ಟು ಟಾನಿಕ್ ನೀಡಿದ್ದಾರೆ. ಕಳೆದ ಅವಧಿಯಲ್ಲಿ ಎರಡು ವರ್ಷ ತಂಡ ಅಜೇಯ ಓಟ ಮುಂದುವರಿಸಿತ್ತು. 8 ವರ್ಷಗಳ ನಂತರ ಏಷ್ಯಾ ಕಪ್‌ಗೆ ಪ್ರವೇಶಿಸಿತ್ತು. 21 ವರ್ಷಗಳಲ್ಲಿ ಫಿಫಾ ರ‍್ಯಾಂಕಿಂಗ್‌ನಲ್ಲಿ ಗರಿಷ್ಠ ಮಟ್ಟಕ್ಕೆ ಏರಿತ್ತು. ಆದರೆ ಈಗ ತಂಡ ಮತ್ತೊಮ್ಮೆ ನಿರಾಸೆಯ ಹಾದಿಯಲ್ಲಿ ಸಾಗುತ್ತಿದೆ. ಸೋಲಿನ ಸರಪಳಿಯನ್ನು ಸುತ್ತಿಕೊಂಡಿರುವ ತಂಡದ ಪ್ರಮುಖ ಸ್ಟ್ರೈಕರ್‌ಗಳಿಗೆ ಚೆಂಡನ್ನು ಗುರಿ ಸೇರಿಸಲು ಆಗುತ್ತಿಲ್ಲ. ಎದುರಾಳಿಗಳು ಹೊಡೆದ ಚೆಂಡು ಗೋಲ್‌ಕೀಪರ್‌ನ ಕೈ ಜಾರಿ ಸುಲಭವಾಗಿ ಬಲೆಯೊಳಗೆ ಬೀಳುತ್ತಿದೆ. ಆದ್ದರಿಂದ ಈ ಬಾರಿಯಾದರೂ ವಿಶ್ವಕಪ್‌ಗೆ ಅರ್ಹತೆ ಗಳಿಸಲು ಸಾಧ್ಯವೇ ಎಂಬ ಪ್ರಶ್ನೆಗೆ ‍‍ಪೂರಕ ಉತ್ತರ ಸಿಗುವುದು ಕಷ್ಟ ಎಂಬ ಆತಂಕ ಫುಟ್‌ಬಾಲ್ ಪ್ರಿಯರನ್ನು ಕಾಡತೊಡಗಿದೆ.

‌ವಿಶ್ವಕಪ್ ಅರ್ಹತಾ ಟೂರ್ನಿಗಿಂತ ಮುನ್ನ ಈ ವರ್ಷ ಕಿಂಗ್ಸ್ ಕಪ್ ಮತ್ತು ಇಂಟರ್ ನ್ಯಾಷನಲ್ ಕಪ್ ಟೂರ್ನಿಗಳಲ್ಲಿ ಒಟ್ಟು 5 ಪಂದ್ಯಗಳನ್ನು ಭಾರತ ಆಡಿತ್ತು. ಸಿರಿಯಾ ವಿರುದ್ಧ 1-1ರ ಡ್ರಾ ಸಾಧಿಸಿದ್ದು ಬಿಟ್ಟರೆ ಉಳಿದ 4 ಪಂದ್ಯಗಳಲ್ಲೂ ತಂಡ ನಿರಾಸೆ ಅನುಭವಿಸಿತ್ತು. 5 ಪಂದ್ಯಗಳಲ್ಲಿ 7 ಗೋಲುಗಳನ್ನಷ್ಟೇ ಗಳಿಸಿದ್ದ ಭಾರತ 13 ಗೋಲುಗಳನ್ನು ಬಿಟ್ಟುಕೊಟ್ಟಿತ್ತು.

ಈ ಫಲಿತಾಂಶಗಳಿಗೆ ಹೋಲಿಸಿದರೆ ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ತಂಡದ ಪ್ರದರ್ಶನ ಸಮಾಧಾನಕರವಾಗಿದೆ. ಒಮನ್ ವಿರುದ್ಧ ಸೋತರೂ ಏಷ್ಯನ್ ಚಾಂಪಿಯನ್ ಕತಾರ್ ವಿರುದ್ಧ ಗೋಲು ರಹಿತ ಡ್ರಾ ಸಾಧಿಸಿ ಸಂಭ್ರಮಿಸಿತ್ತು. ಬಾಂಗ್ಲಾದೇಶ ವಿರುದ್ಧವೂ ತಂಡ ಸಾಕಷ್ಟು ಪ್ರಯತ್ನಪಟ್ಟಿತ್ತು. ಆದರೆ ಗೆಲುವಿನ ಸವಿ ತಂಡಕ್ಕೆ ಸಿಗಲಿಲ್ಲ. ಅಫ್ಗಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಪ್ರತಿಕೂಲ ಹವಾಮಾನ ಮತ್ತು ಕೃತಕ ಟರ್ಫ್‌ನಲ್ಲಿ ಆಡಿದ ತಂಡ ಸೋಲಿನ ಆತಂಕದ ನಡುವೆಯೂ ಜಿದ್ದಾಜಿದ್ದಿಯ ಕಾದಾಟದ ಮೂಲಕ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು. ಆದರೆ ತಂಡದ ಮುಂದಿನ ಹಾದಿಯಂತೂ ತೀರಾ ಕಠಿಣವಿದೆ.

ಎರಡನೇ ಸುತ್ತಿನಲ್ಲಿ ಅರ್ಧ ಹಾದಿ ಸವೆದಾಗ ಭಾರತಕ್ಕೆ ಕೇವಲ 3 ಪಾಯಿಂಟ್ ಗಳಿಸಲಷ್ಟೇ ಸಾಧ್ಯವಾಗಿದೆ. ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ತಂಡ ಮುಂದಿನ ನಾಲ್ಕು ಪಂದ್ಯಗಳಲ್ಲಿ ಗಮನಾರ್ಹ ಸಾಧನೆ ಮಾಡದೇ ಇದ್ದರೆ 3ನೇ ಸುತ್ತು ಪ್ರವೇಶಿಸುವುದು ಕಷ್ಟ. ಇಗರ್ ಸ್ಟಿಮ್ಯಾಕ್ ಈ ಸವಾಲನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಈಗ ಉಳಿದಿರುವ ಕುತೂಹಲ.

ಅಂದು ಒಲಿದ ಅದೃಷ್ಟ

1950ರ ವಿಶ್ವಕಪ್‌ಗೆ ಭಾರತ ಅದೃಷ್ಟದಿಂದ ಅವಕಾಶ ಪಡೆದುಕೊಂಡಿತ್ತು. ಮ್ಯಾನ್ಮಾರ್‌, ಇಂಡೊನೇಷ್ಯಾ ಮತ್ತು ಫಿಲಿಪ್ಪಿನ್ಸ್‌ ತಂಡಗಳು ಅರ್ಹತಾ ಸುತ್ತಿನಿಂದ ಹಿಂದೆ ಸರಿದ ಕಾರಣ ಭಾರತಕ್ಕೆ ಅವಕಾಶ ಲಭಿಸಿತ್ತು. ಆದರೆ ಟೂರ್ನಿ ಆರಂಭವಾಗಲು ಕೆಲವೇ ದಿನ ಇರುವಾಗ ಸ್ವತಃ ಹಿಂದೆ ಸರಿದಿತ್ತು. ಬ್ರೆಜಿಲ್‌ಗೆ ತೆರಳಲು ತಗಲುವ ವೆಚ್ಚ ಭರಿಸಲು ಸಾಧ್ಯವಾಗುವುದಿಲ್ಲ ಎಂಬ ಕಾರಣ ಹೇಳಿತ್ತು. ಆಟಗಾರರಿಗೆ ಶೂ ಖರೀದಿಸುವ ಸಾಮರ್ಥ್ಯ ಇಲ್ಲವೆಂದೂ ಟೂರ್ನಿಗೆ ಬಂದರೆ ಬರಿಗಾಲಲ್ಲಿ ಆಡಬೇಕಾದೀತು ಎಂದೂ ಹೇಳಿತ್ತು. ನಂತರ ಪ್ರತಿಬಾರಿ ಅರ್ಹತಾ ಟೂರ್ನಿಯಲ್ಲಿ ಆಡುತ್ತಿದ್ದರೂ ಸಫಲವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.