ನಾಲ್ಕು ಗೋಲು ಗಳಿಸಿದ ಭಾರತ ತಂಡದ ಫಾರ್ವರ್ಡ್ ಆಟಗಾರ್ತಿ ಲಿಂಗ್ಡೈಕಿಮ್
–ಎಕ್ಸ್ ಚಿತ್ರ
ಬೆಂಗಳೂರು: ಫಾರ್ವರ್ಡ್ ಆಟಗಾರ್ತಿ ಲಿಂಗ್ಡೈಕಿಮ್ ಗಳಿಸಿದ ನಾಲ್ಕು ಗೋಲುಗಳ ನೆರವಿನಿಂದ ಭಾರತದ ವನಿತೆಯರು ಗುರುವಾರ ಇಲ್ಲಿ ನಡೆದ ಎರಡನೇ ಸ್ನೇಹಪರ ಫುಟ್‌ಬಾಲ್ ಪಂದ್ಯದಲ್ಲಿ 11–1ರಿಂದ ಮಾಲ್ಡೀವ್ಸ್ ತಂಡವನ್ನು ಮಣಿಸಿದರು.
ಪ್ರಕಾಶ್ ಪಡುಕೋಣೆ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಡೆದ ಎರಡು ಪಂದ್ಯದಲ್ಲಿ ಆತಿಥೇಯ ತಂಡವು ಒಟ್ಟು 25 ಗೋಲು ದಾಖಲಿಸಿ ಪಾರಮ್ಯ ಮೆರೆಯಿತು. ಮೊದಲ ಪಂದ್ಯವನ್ನು ಭಾರತ 14–0ರಿಂದ ಗೆದ್ದಿತ್ತು.
ತಮ್ಮ ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯದಲ್ಲಿ ಮಿಂಚು ಹರಿಸಿದ ಲಿಂಗ್ಡೈಕಿಮ್ ಅವರು 12ನೇ, 16ನೇ 56ನೇ ಮತ್ತು 59ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು. ನೋಂಗ್ಮೇಕಪಂ ಸಿವಾನಿ ದೇವಿ ಅವರಿಗೂ ಇದು ಪದಾರ್ಪಣೆ ಪಂದ್ಯವಾಗಿದ್ದು, ಅವರು 45+1ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ ಗಮನ ಸೆಳೆದರು.
ಉಳಿದಂತೆ ಕಾಜೋಲ್ ಡಿಸೋಜ (15ನೇ ನಿ.), ಪೂಜಾ (41ನೇ ನಿ.), ಸಿಮ್ರನ್ ಗುರುಂಗ್ (62ನೇ ಮತ್ತು 68ನೇ ನಿ.) ಮತ್ತು ಕೆ. ಭೂಮಿಕಾ ದೇವಿ (71ನೇ) ಭಾರತದ ಪರ ಗೋಲು ಹೊಡೆದರು.
ಮಾಲ್ಡೀವ್ಸ್ ಪರ 27ನೇ ನಿಮಿಷದಲ್ಲಿ ಮರಿಯಮ್ ರಿಫಾ ಏಕೈಕ ಗೋಲು ಗಳಿಸಿದರು. ಆದರೆ, 17ನೇ ನಿಮಿಷದಲ್ಲಿ ಮಾಲ್ಡೀವ್ಸ್ ತಂಡದ ನಾಯಕಿ ಹವ್ವಾ ಹನೀಫಾ ಅವರು ಭಾರತಕ್ಕೆ ಉಡುಗೊರೆ ಗೋಲು ನೀಡಿದರು.
ಭಾರತ ತಂಡದ ಕೋಚ್ ಜೋಕಿಮ್ ಅಲೆಕ್ಸಾಂಡರ್ಸನ್ ತಂಡದಲ್ಲಿ ಆರು ಬದಲಾವಣೆಯೊಂದಿಗೆ ಕಣಕ್ಕೆ ಇಳಿಸಿದ್ದರು. ಮೊದಲಾರ್ಧದಲ್ಲಿ 6–1 ಗೋಲುಗಳ ಮುನ್ನಡೆ ಪಡೆದ ಭಾರತದ ವನಿತೆಯರು, ಉತ್ತರಾರ್ಧದಲ್ಲೂ ಗೋಲಿನ ಮಳೆಗರೆದು ಜಯಭೇರಿ ಬಾರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.