ADVERTISEMENT

ವಿಶ್ವಕಪ್‌, ಏಷ್ಯಾಕಪ್‌ ಅರ್ಹತಾ ಟೂರ್ನಿ: ತಾಲೀಮು ಆರಂಭಿಸಿದ ಭಾರತ ಫುಟ್‌ಬಾಲ್ ತಂಡ

ಪಿಟಿಐ
Published 22 ಮೇ 2021, 13:55 IST
Last Updated 22 ಮೇ 2021, 13:55 IST
ಕೋಚ್ ಇಗರ್ ಸ್ಟಿಮ್ಯಾಚ್ ನೇತೃತ್ವದಲ್ಲಿ ತರಬೇತಿ ನಿರತ ಭಾರತ ಫುಟ್‌ಬಾಲ್ ತಂಡದ ಆಟಗಾರರು– ಎಐಎಫ್‌ಎಫ್‌ ಟ್ವಿಟರ್ ಚಿತ್ರ
ಕೋಚ್ ಇಗರ್ ಸ್ಟಿಮ್ಯಾಚ್ ನೇತೃತ್ವದಲ್ಲಿ ತರಬೇತಿ ನಿರತ ಭಾರತ ಫುಟ್‌ಬಾಲ್ ತಂಡದ ಆಟಗಾರರು– ಎಐಎಫ್‌ಎಫ್‌ ಟ್ವಿಟರ್ ಚಿತ್ರ   

ನವದೆಹಲಿ: 2022ರ ವಿಶ್ವಕಪ್ ಹಾಗೂ 2023 ಏಷ್ಯಾಕಪ್ ಜಂಟಿ ಅರ್ಹತಾ ಟೂರ್ನಿಯ ಪಂದ್ಯಗಳಲ್ಲಿ ಪಾಲ್ಗೊಳ್ಳಲು ಕತಾರ್‌ಗೆ ತೆರಳಿರುವ ಭಾರತ ಫುಟ್‌ಬಾಲ್ ತಂಡದ ಆಟಗಾರರು ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದು, ಎಲ್ಲರ ವರದಿ ‘ನೆಗೆಟಿವ್‘ ಬಂದಿದೆ. ಹೀಗಾಗಿ ಮುಂದಿನ ತಿಂಗಳು ಆರಂಭವಾಗಲಿರುವ ಪಂದ್ಯಗಳಿಗೆ ಶನಿವಾರ ಅವರು ತಾಲೀಮು ಆರಂಭಿಸಿದರು.

ಭಾರತ ತಂಡದ ಆಟಗಾರರು ಬುಧವಾರ ದೋಹಾ ತಲುಪಿದ್ದರು. ಕೋವಿಡ್‌–19ಕ್ಕೆ ಸಂಬಂಧಿಸಿದ ಆರ್‌ಟಿ–ಪಿಸಿಆರ್‌ ಪರೀಕ್ಷೆಗೆ ಒಳಗಾದ ನಂತರ ಫಲಿತಾಂಶಕ್ಕಾಗಿ ಕಾಯುತ್ತಿದ್ದರು.

‘ಎಲ್ಲ 28 ಆಟಗಾರರು ಹಾಗೂ ನೆರವು ಸಿಬ್ಬಂದಿಯ ಪರೀಕ್ಷೆಯ ವರದಿ ‘ನೆಗೆಟಿವ್‘ ಬಂದಿದೆ‘ ಎಂದು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ನ (ಎಐಎಫ್‌ಎಫ್‌) ಪ್ರಧಾನ ಕಾರ್ಯದರ್ಶಿ ಕುಶಲ್ ದಾಸ್ ಹೇಳಿದ್ದಾರೆ.

ADVERTISEMENT

ನಾಯಕ ಸುನಿಲ್ ಚೆಟ್ರಿ ಅವರು ಮರಳಿದ್ದರಿಂದ ತಂಡದ ಬಲ ವೃದ್ಧಿಸಿದೆ. ಜೂನ್‌ 3ರಂದು ನಡೆಯುವ ಆತಿಥೇಯ ಕತಾರ್ ಎದುರಿನ ಪಂದ್ಯಕ್ಕೂ ಮೊದಲು ಬಬಯೋಬಬಲ್‌ನಲ್ಲಿ ಪೂರ್ವಸಿದ್ಧತಾ ಶಿಬಿರದಲ್ಲಿ ಭಾರತದ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಜೂನ್‌ 7ರಂದು ಬಾಂಗ್ಲಾದೇಶ ಎದುರು, 15ರಂದು ಅಫ್ಗಾನಿಸ್ತಾನ ವಿರುದ್ಧ ಪಂದ್ಯಗಳು ನಿಗದಿಯಾಗಿವೆ.

ಕತಾರ್ ಫುಟ್‌ಬಾಲ್ ಸಂಸ್ಥೆಯ ಉತ್ತಮ ಅಧಿಕಾರಿಗಳ ಕಾರಣದಿಂದಾಗಿ, ಭಾರತ ತಂಡದ 10 ದಿನಗಳ ಕಠಿಣ ಕ್ವಾರಂಟೈನ್‌ಗೆ ವಿನಾಯಿತಿ ದೊರಕಿದೆ. ಹೀಗಾಗಿ ಅವರು ಶೀಘ್ರ ತರಬೇತಿ ಆರಂಭಿಸಲು ಸಾಧ್ಯವಾಗಿದೆ.

‘ಮುಂದಿನ ಸವಾಲುಗಳಿಗೆ ಸಿದ್ಧ. ಭಾರತದ ಆಟಗಾರರ ಮೊದಲ ಅವಧಿಯ ತರಬೇತಿಯು ದೋಹಾದಲ್ಲಿ ಆರಂಭವಾಗಿದೆ‘ ಎಂದು ಎಐಎಫ್‌ಎಫ್ ಟ್ವೀಟ್ ಮಾಡಿದೆ. ಇದರೊಂದಿಗೆ ಮುಖ್ಯ ಕೋಚ್‌ ಇಗರ್ ಸ್ಟಿಮ್ಯಾಚ್ ಅವರ ನೇತೃತ್ವದಲ್ಲಿ ತಂಡವು ಅಭ್ಯಾಸದಲ್ಲ ನಿರತವಾಗಿರುವ ಚಿತ್ರವನ್ನು ಹಂಚಿಕೊಂಡಿದೆ.

ಟೂರ್ನಿಯ ‘ಇ‘ ಗುಂಪಿನಲ್ಲಿ ಭಾರತ ತಂಡವು ನಾಲ್ಕನೇ ಸ್ಥಾನದಲ್ಲಿದ್ದು, ವಿಶ್ವಕಪ್ ಅರ್ಹತೆಯ ಅವಕಾಶವನ್ನು ಈಗಾಗಲೇ ಕಳೆದುಕೊಂಡಿದೆ. ಆದರೆ ಚೀನಾದಲ್ಲಿ 2023ರಲ್ಲಿ ನಡೆಯುವ ಏಷ್ಯಾಕಪ್‌ ಟೂರ್ನಿಗೆ ಅರ್ಹತೆ ಪಡೆಯಲು ಸ್ಪರ್ಧಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.