ADVERTISEMENT

ಕೋಚ್ ರೇಸ್‌ನಲ್ಲಿ ರೋಕಾ

ಪಿಟಿಐ
Published 4 ಮೇ 2019, 16:44 IST
Last Updated 4 ಮೇ 2019, 16:44 IST
ಆಲ್ಬರ್ಟ್‌ ರೋಕಾ
ಆಲ್ಬರ್ಟ್‌ ರೋಕಾ   

ನವದೆಹಲಿ: ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ನ (ಎಐಎಫ್‌ಎಫ್) ತಾಂತ್ರಿಕ ಸಮಿತಿಯು ಭಾರತ ಫುಟ್‌ಬಾಲ್‌ ತಂಡದ ಮುಖ್ಯ ಕೋಚ್‌ ಹುದ್ದೆಯ ಆಕಾಂಕ್ಷಿಗಳ ಸಂಭಾವ್ಯ ಪಟ್ಟಿಯನ್ನು ಸಿದ್ಧಪಡಿಸಿದೆ.

ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡದ ಮುಖ್ಯ ಕೋಚ್‌ ಆಲ್ಬರ್ಟ್‌ ರೋಕಾ, ದಕ್ಷಿಣ ಕೊರಿಯಾದ ಲೀ ಮಿನ್‌ ಸಂಗ್‌, ಈ ಹಿಂದೆ ಕ್ರೊವೇಷ್ಯಾ ತಂಡಕ್ಕೆ ಕೋಚ್‌ ಆಗಿದ್ದ ಇಗರ್‌ ಸ್ಟಿಮ್ಯಾಕ್‌ ಮತ್ತು ಸ್ವೀಡನ್‌ ತಂಡದ ತರಬೇತುದಾರರಾಗಿದ್ದ ಹಕನ್‌ ಎರಿಕ್ಸನ್‌ ಅವರ ಹೆಸರು ಪಟ್ಟಿಯಲ್ಲಿದೆ.

ತಾಂತ್ರಿಕ ಸಮಿತಿಯ ಮುಖ್ಯಸ್ಥರಾದ ಶ್ಯಾಮ್‌ ಥಾಪಾ ಅವರು ಸಂಭಾವ್ಯ ಆಕಾಂಕ್ಷಿಗಳ ಸಂದರ್ಶನ ನಡೆಸಿ ಕೋಚ್‌ ಹೆಸರು ಅಂತಿಮಗೊಳಿಸಲಿದ್ದಾರೆ.

ADVERTISEMENT

‘ಮೇ 5 ಅಥವಾ 6ರಂದು ‘ಸ್ಕೈಪ್’ ಮೂಲಕ ನಾಲ್ಕು ಮಂದಿಯ ಸಂದರ್ಶನ ನಡೆಸಿ ಅರ್ಹರ ಹೆಸರನ್ನು ಎಐಎಫ್‌ಎಫ್‌ ಕಾರ್ಯಕಾರಿ ಸಮಿತಿಗೆ ಶಿಫಾರಸು ಮಾಡುತ್ತೇವೆ. ಸಮಿತಿಯು ಈ ವಿಚಾರದಲ್ಲಿ ಅಂತಿಮ ನಿರ್ಣಯ ಕೈಗೊಳ್ಳಲಿದೆ’ ಎಂದು ಥಾಪಾ ತಿಳಿಸಿದ್ದಾರೆ.

‘ಸ್ಕೈಪ್‌’ ಸಂದರ್ಶನಕ್ಕೂ ಮುನ್ನ ತಾಂತ್ರಿಕ ಸಮಿತಿಯ ಸಭೆ ನಡೆಸಿ ಚರ್ಚಿಸುತ್ತೇವೆ. ಎಐಎಫ್ಎಫ್‌ ಪದಾಧಿಕಾರಿಗಳ ಜೊತೆಯೂ ಮಾತುಕತೆ ನಡೆಸುತ್ತೇವೆ’ ಎಂದಿದ್ದಾರೆ.

ಭಾರತ ತಂಡವು ಜೂನ್‌ 5 ರಿಂದ 8ರವರೆಗೆ ಆಯೋಜನೆಯಾಗಿರುವ ಕಿಂಗ್ಸ್‌ ಕಪ್‌ನಲ್ಲಿ ಭಾಗವಹಿಸಲಿದೆ. ಇದಕ್ಕೂ ಮುನ್ನ (ಮೇ ಮೂರನೇ ವಾರದಲ್ಲಿ) ರಾಷ್ಟ್ರೀಯ ಶಿಬಿರ ಆಯೋಜನೆಯಾಗಿದೆ. ಹೀಗಾಗಿ ಶೀಘ್ರವೇ ಕೋಚ್‌ ಹೆಸರು ಅಂತಿಮಗೊಳಿಸುವ ನಿರೀಕ್ಷೆ ಇದೆ.

ಈ ಹಿಂದೆ ಕೋಚ್‌ ಆಗಿದ್ದ ಸ್ಟೀಫನ್ ಕಾನ್ಸ್‌ಟೆಂಟೈನ್‌ ಅವರು ಏಷ್ಯಾಕಪ್‌ ಬಳಿಕ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅವರಿಂದ ತೆರವಾಗಿದ್ದ ಸ್ಥಾನಕ್ಕೆ 250ಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಸಿದ್ದರು. ಫ್ರಾನ್ಸ್‌ನ ರೇಮಂಡ್‌ ಡೊಮೆನೆಚ್‌, ಇಂಗ್ಲೆಂಡ್‌ನ ಸ್ವೆನ್‌ ಎರಿಕ್ಸನ್‌ ಮತ್ತು ಸ್ಯಾಮ್‌ ಅಲಾರ್ಡೈಸ್‌ ಅವರು ಅರ್ಜಿ ಹಾಕಿದವರ ಪೈಕಿ ಪ್ರಮುಖರಾಗಿದ್ದರು. ಅಧಿಕ ಸಂಭಾವನೆ ನಿರೀಕ್ಷಿಸಿದ್ದರಿಂದ ಇವರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿತ್ತು.

56 ವರ್ಷದ ರೋಕಾ ಅವರು ಈ ಹಿಂದೆ ಬಾರ್ಸಿಲೋನಾದ ಕ್ಲಬ್‌ವೊಂದರ ಸಹಾಯಕ ಕೋಚ್‌ ಆಗಿ ಕೆಲಸ ಮಾಡಿದ್ದರು. ಅವರ ಮಾರ್ಗದರ್ಶನದಲ್ಲಿ ಬಿಎಫ್‌ಸಿ ತಂಡ ಐಎಸ್‌ಎಲ್‌ ಸೇರಿಂದತೆ ಪ್ರಮುಖ ಟೂರ್ನಿಗಳಲ್ಲಿ ಚಾಂಪಿಯನ್‌ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.