ನವದೆಹಲಿ: ಭಾರತದ ಫುಟ್‌ಬಾಲ್‌ನ ಪ್ರಸಕ್ತ ವಿದ್ಯಮಾನ, ಐಎಸ್‌ಎಲ್ ಟೂರ್ನಿಯನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿರುವ ಕ್ರಮಕ್ಕೆ ಮಾಜಿ ನಾಯಕ ಸುನಿಲ್ ಚೆಟ್ರಿ ಬುಧವಾರ ಕಳವಳ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಫುಟ್‌ಬಾಲ್ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿ ತಮಗೆ ನೂರಾರು ಫೋನ್ ಕರೆ ಮತ್ತು ಸಂದೇಶ ಗಳು ಹರಿದುಬರುತ್ತಿವೆ ಎಂದು ಇಂಡಿಯನ್ ಸೂಪರ್ ಲೀಗ್‌ನಲ್ಲಿ (ಐಎಸ್‌ಎಲ್) ಬೆಂಗಳೂರು ಎಫ್‌ಸಿ ತಂಡದ ಪರ ಆಡುವ 40 ವರ್ಷ ವಯಸ್ಸಿನ ಚೆಟ್ರಿ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. ಆಟಗಾರರು, ತಂಡದ ಸಿಬ್ಬಂದಿ, ಫಿಸಿಯೊಗಳು ಕರೆ ಮಾಡುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ದೇಶದ ಫುಟ್‌ಬಾಲ್ ಕ್ಷೇತ್ರದ ಬಗ್ಗೆ ಕಾಳಜಿ ಹೊಂದಿರುವವರಿಗೆ ಈಗಿನ ವಿದ್ಯಮಾನದಿಂದ ನೋವಾಗಿದೆ ಎಂದಿದ್ದಾರೆ.
ಐಎಸ್‌ಎಲ್ ಆಯೋಜಕರಾದ ಫುಟ್‌ಬಾಲ್ ಸ್ಪೋರ್ಟ್ಸ್ ಡೆವಲಪ್‌ಮೆಂಟ್ ಲಿಮಿಟೆಡ್ (ಎಫ್‌ಎಸ್‌ಡಿಎಲ್) ಮತ್ತು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ನಡುವಣ ಮೂಲ ಹಕ್ಕುಗಳ ಒಪ್ಪಂದ (ಎಂಆರ್‌ಎ) ನವೀಕರಣಕ್ಕೆ ಸಂಬಂಧಿಸಿ ಅನಿಶ್ಚಿತತೆ ಮನೆಮಾಡಿದ್ದು ಈ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದಕ್ಕೆ ಹಾಕಲಾಗಿದೆ. ಈಗಿನ ಒಪ್ಪಂದ ಈ ವರ್ಷದ ಡಿ. 8ರಂದು ಕೊನೆಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.