ADVERTISEMENT

ಐಎಸ್‌ಎಲ್‌: ಸೋಲಿನಿಂದ ಪಾರಾದ ಜಮ್‌ಶೆಡ್‌ಪುರ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2018, 19:20 IST
Last Updated 4 ನವೆಂಬರ್ 2018, 19:20 IST
ಡೆಲ್ಲಿ ಡೈನಾಮೋಸ್‌ (ಬಿಳಿ ಪೋಷಾಕು) ಮತ್ತು ಜಮ್‌ಶೆಡ್‌ಪುರ ಎಫ್‌ಸಿ ಆಟಗಾರರ ಪೈಪೋಟಿಯ ಕ್ಷಣ
ಡೆಲ್ಲಿ ಡೈನಾಮೋಸ್‌ (ಬಿಳಿ ಪೋಷಾಕು) ಮತ್ತು ಜಮ್‌ಶೆಡ್‌ಪುರ ಎಫ್‌ಸಿ ಆಟಗಾರರ ಪೈಪೋಟಿಯ ಕ್ಷಣ   

ನವದೆಹಲಿ: ಜೋಸ್‌ ಲೂಯಿಸ್‌ ಎಸ್ಪಿನೋಸಾ ಅರೊಯೊ ಕಾಲ್ಚಳಕದಲ್ಲಿ ಅರಳಿದ ಗೋಲಿನ ನೆರವಿನಿಂದ ಜಮ್‌ ಶೆಡ್‌ಪುರ ಎಫ್‌ಸಿ ತಂಡ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ನ ಪಂದ್ಯದಲ್ಲಿ ಸೋಲಿನಿಂದ ಪಾರಾಯಿತು.

ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಹೋರಾಟದಲ್ಲಿ ಜಮ್‌ಶೆಡ್‌ಪುರ 2–2 ಗೋಲುಗಳಿಂದ ಡೆಲ್ಲಿ ಡೈನಾಮೋಸ್‌ ಎದುರು ಡ್ರಾ ಮಾಡಿಕೊಂಡಿತು.

ತವರಿನ ಅಭಿಮಾನಿಗಳ ಎದುರು ಆಡಿದ ಡೈನಾಮೋಸ್‌ ತಂಡ ಮೊದಲಾರ್ಧದಲ್ಲಿ ಮಿಂಚಿತು. ಜಮ್‌ಶೆಡ್‌ಪುರ ಆಟಗಾರರೂ ಮೋಡಿ ಮಾಡಿದರು. ಹೀಗಾಗಿ 35 ನಿಮಿಷಗಳ ಆಟ ಗೋಲುರಹಿತವಾಗಿತ್ತು. ನಂತರ ಜಮ್‌ಶೆಡ್‌ಪುರ ತಂಡ ಆಕ್ರಮಣಕಾರಿ ಆಟಕ್ಕೆ ಮುಂದಾ ಯಿತು. 39ನೇ ನಿಮಿಷದಲ್ಲಿ ಈ ತಂಡದ ಸರ್ಜಿಯೊ ಸಿಡೊಂಚಾ ಗೋಲು ಬಾರಿಸಿ ಕ್ರೀಡಾಂಗಣದಲ್ಲಿ ಮಿಂಚಿನ ಸಂಚಲನ ಮೂಡಿಸಿದರು. ನಂತರವೂ ಈ ತಂಡದವರು ಪರಿ ಣಾಮಕಾರಿ ಸಾಮರ್ಥ್ಯ ತೋರಿ 1–0 ಮುನ್ನಡೆಯೊಂದಿಗೆ ವಿರಾಮಕ್ಕೆ ಹೋದರು.

ADVERTISEMENT

ದ್ವಿತೀಯಾರ್ಧದಲ್ಲಿ ಡೆಲ್ಲಿ ತಂಡದ ಆಟ ರಂಗೇರಿತು. 55ನೇ ನಿಮಿಷದಲ್ಲಿ ಲಾಲಿಯಾಂಜುವಾಲ ಚಾಂಗ್ಟೆ ಗೋಲು ಗಳಿಸಿ 1–1ರ ಸಮಬಲಕ್ಕೆ ಕಾರಣರಾದರು. 58ನೇ ನಿಮಿಷದಲ್ಲಿ ಆಡ್ರಿಯಾ ಕಾರ್ಮೋನಾ ಕಾಲ್ಚಳಕ ತೋರಿದರು. ಅವರು ಒದ್ದ ಚೆಂಡು ಮಿಂಚಿನ ಗತಿಯಲ್ಲಿ ಸಾಗಿ ಎದುರಾಳಿ ತಂಡದ ಗೋಲುಪೆಟ್ಟಿಗೆಯ ಬಲೆಗೆ ಮುತ್ತಿಕ್ಕುತ್ತಿದ್ದಂತೆ ಡೈನಾಮೋಸ್‌ ಪಾಳಯದಲ್ಲಿ ಸಂಭ್ರಮ ಗರಿಗೆದರಿತು.

ನಂತರ ಜಮ್‌ಶೆಡ್‌ಪುರ ತಂಡ ಮಿಂಚಿತು. 72ನೇ ನಿಮಿಷದಲ್ಲಿ ಜೋಸ್‌ ಲೂಯಿಸ್‌ ಎಸ್ಪಿನೋಸಾ ಚೆಂಡನ್ನು ಗುರಿ ತಲುಪಿಸಿ ತಂಡದ ಆಟಗಾರರು ನೆಮ್ಮದಿಯ ನಿಟ್ಟುಸಿರುಬಿಡುವಂತೆ ಮಾಡಿದರು. ಕೊನೆಯಲ್ಲಿ ಉಭಯ ತಂಡಗಳೂ ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಹೀಗಿದ್ದರೂ ಯಾರಿಗೂ ಗೆಲುವಿನ ಗೋಲು ಗಳಿಸಲು ಆಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.