ADVERTISEMENT

ಎಎಫ್‌ಸಿ ಕಪ್‌: ಉಜ್ಬೇಕ್‌ ತಂಡಕ್ಕೆ ಮಣಿದ ಭಾರತ

ಎಎಫ್‌ಸಿ ಕಪ್‌ 19 ವರ್ಷದೊಳಗಿನವರ ಅರ್ಹತಾ ಸುತ್ತಿನ ಪಂದ್ಯ

ಪಿಟಿಐ
Published 6 ನವೆಂಬರ್ 2019, 20:15 IST
Last Updated 6 ನವೆಂಬರ್ 2019, 20:15 IST

ಅಲ್‌ ಖೋಬರ್‌, ಸೌದಿ ಅರೇಬಿಯಾ: ಭಾರತ ತಂಡ, 2020ರ ಎಎಫ್‌ಸಿ 19 ವರ್ಷದೊಳಗಿನವರ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಅರ್ಹತಾ ಸುತ್ತಿನ ಅಭಿಯಾನವನ್ನು ನಿರಾಶಾದಾಯಕ ರೀತಿಯಲ್ಲಿ ಆರಂಭಿಸಿತು. ಉಜ್ಬೇಕಿಸ್ತಾನ ಬುಧವಾರ ನಡೆದ ಪಂದ್ಯದಲ್ಲಿ ಭಾರತ ತಂಡವನ್ನು 2–0 ಗೋಲುಗಳಿಂದ ಸೋಲಿಸಿತು.

ವಿರಾಮಕ್ಕೆ ಮೊದಲಿನ ಅವಧಿ ಗೋಲುರಹಿತವಾಗಿತ್ತು. ಉತ್ತರಾರ್ಧದಲ್ಲಿ ಎರಡು ಗೋಲುಗಳನ್ನು ಬಾರಿಸಿದ ಉಜ್ಬೇಕ್‌ ತಂಡ ಗೆದ್ದು ಮೂರು ಪಾಯಿಂಟ್‌ಗಳನ್ನು ಗಳಿಸಿ ಸಂಭ್ರಮಿಸಿತು. ಭಾರತ ಶುಕ್ರವಾರ ನಡೆಯುವ ಪಂದ್ಯದಲ್ಲಿ ಆತಿಥೇಯ ಸೌದಿ ಅರೇಬಿಯಾ ತಂಡವನ್ನು ಎದುರಿಸಲಿದೆ.

ಭಾರತ ವಿರಾಮಕ್ಕೆ ಮೊದಲು ಕೆಲವು ಅವಕಾಶಗಳನ್ನು ಪರಿವರ್ತಿಸಲು ವಿಫಲವಾಯಿತು. ಉತ್ತರಾರ್ಧದಲ್ಲಿ ಉಜ್ಬೇಕಿಸ್ತಾನ ಹೆಚ್ಚಿನ ದಾಳಿ ನಡೆಸಿತು. 53ನೇ ನಿಮಿಷ ಉಜ್ಬೇಕಿಸ್ತಾನ ತಂಡಕ್ಕೆಖೊಶಿಮೊವ್‌ ಉಲುಗ್‌ಬೆಕ್‌ ಮುನ್ನಡೆ ಒದಗಿಸಿದರು. ಒಲಿಮ್‌ಜೊನೊವ್‌ ಮುಜಾಫರ್‌ ಎರಡನೇ ಗೋಲನ್ನು ಗಳಿಸಿದರು.

ADVERTISEMENT

80ನೇ ನಿಮಿಷ ಭಾರತದ ಸುಮಿತ್‌ ರಥಿ ಲಾಂಗ್‌ ಥ್ರೊ ಒಂದರಲ್ಲಿ ಚೆಂಡನ್ನು ಎದುರಾಳಿ ಗೋಲಿನತ್ತ ಹೆಡ್‌ ಮಾಡಿದರೂ ಅದು ಅಡ್ಡಪಟ್ಟಿಯ ಮೇಲಿಂದ ಹಾದುಹೋಯಿತು. ಪಂದ್ಯ ಮುಗಿಯಲು ಕ್ಷಣಗಳಿರುವಾಗ ನಿಂತೊಯ್‌ ಅವರ ಅತ್ಯುತ್ತಮ ಯತ್ನವನ್ನು ಉಜ್ಬೇಕ್‌ ಗೋಲ್‌ಕೀಪರ್‌ ನೆಮಟೊವ್‌ ಅಬ್ದುವಖಿದ್‌ ಅಮೋಘವಾಗಿ ತಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.