ADVERTISEMENT

ಸ್ಯಾಫ್‌ ಮಹಿಳಾ ಫುಟ್‌ಬಾಲ್‌: ಭಾರತ ಶುಭಾರಂಭ

ಪಿಟಿಐ
Published 7 ಸೆಪ್ಟೆಂಬರ್ 2022, 12:59 IST
Last Updated 7 ಸೆಪ್ಟೆಂಬರ್ 2022, 12:59 IST
ಭಾರತ ಮಹಿಳಾ ಫುಟ್‌ಬಾಲ್ ತಂಡ– ಟ್ವಿಟರ್‌ ಚಿತ್ರ
ಭಾರತ ಮಹಿಳಾ ಫುಟ್‌ಬಾಲ್ ತಂಡ– ಟ್ವಿಟರ್‌ ಚಿತ್ರ   

ನವದೆಹಲಿ (ಪಿಟಿಐ): ಹಾಲಿ ಚಾಂಪಿಯನ್ ಭಾರತ ತಂಡವು ಸ್ಯಾಫ್‌ ಮಹಿಳಾ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಗೆಲುವಿನ ಆರಂಭ ಮಾಡಿದೆ.

ನೇಪಾಳದ ಕಠ್ಮಂಡುವಿನಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ಮೊದಲ ಪಂದ್ಯದಲ್ಲಿ ಭಾರತದ ಮಹಿಳೆಯರು ಬುಧವಾರ 3–0ಯಿಂದ ಪಾಕಿಸ್ತಾನಕ್ಕೆ ಸೋಲುಣಿಸಿದರು. ಇದರೊಂದಿಗೆ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಸತತ 27ನೇ ಜಯ ಸಂಪಾದಿಸಿತು.

ಪಾಕಿಸ್ತಾನ ತಂಡದ ನಾಯಕಿ ಮರಿಯಾ ಜಮೀಲ್ ಖಾನ್‌ ಅವರು ಪಂದ್ಯದ 20ನೇ ನಿಮಿಷದಲ್ಲಿ ‘ಉಡುಗೊರೆ ಗೋಲು‘ ನೀಡುವ ಮೂಲಕ ಭಾರತ ತಂಡದ ಖಾತೆ ತೆರೆಯಿತು.

ADVERTISEMENT

ಭಾರತದ ಸಂಧ್ಯಾ ಅವರು ಒದ್ದ ಚೆಂಡನ್ನು ತಡೆಯುವ ಯತ್ನದಲ್ಲಿ ಎದುರಾಳಿ ಗೋಲ್‌ಕೀಪರ್‌ ಶಹೀದ್‌ ಬುಕಾರಿ ಮರಿಯಾ ಅವರತ್ತ ತಳ್ಳಿದರು. ಈ ಹಂತದಲ್ಲಿ ಮರಿಯಾ ಗಡಿಬಿಡಿಯಲ್ಲಿ ಚೆಂಡನ್ನು ತಮ್ಮದೇ ಗೋಲುಪೆಟ್ಟಿಗೆಗೆ ಸೇರಿಸಿದರು.

21ನೇ ನಿಮಿಷದಲ್ಲಿ ಡ್ಯಾಂಗ್ಲೆ ಗ್ರೇಸ್‌ ಸೊಗಸಾದ ಗೋಲು ಗಳಿಸಿ ತಂಡದ ಮುನ್ನಡೆಯನ್ನು 2–0ಗೆ ಹೆಚ್ಚಿಸಿದರು.

ಬಳಿಕ 55ನೇ ನಿಮಿಷದಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಲಭಿಸಿದರೂ ಗೋಲು ದಾಖಲಾಗಲಿಲ್ಲ. ಆದರೆ ಹೆಚ್ಚುವರಿ ಅವಧಿಯಲ್ಲಿ ಸೌಮ್ಯಾ ಗುಗಲೋತ್‌ ಕಾಲ್ಚಳಕ ತೋರಿ ಭಾರತದ ಗೆಲುವನ್ನು ಖಚಿತಪಡಿಸಿದರು.

ಇದೇ 10ರಂದು ನಡೆಯುವ ತನ್ನ ಎರಡನೇ ಪಂದ್ಯದಲ್ಲಿ ಭಾರತ ತಂಡವು ಮಾಲ್ಡೀವ್ಸ್ ತಂಡವನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.