ADVERTISEMENT

ಕೋವಿಡ್‌ನಿಂದ ಇರಾಕ್‌ನ ಫುಟ್‌ಬಾಲ್‌ ದಿಗ್ಗಜ ಅಹಮದ್‌ ರಾಧಿ ಸಾವು

ಏಜೆನ್ಸೀಸ್
Published 21 ಜೂನ್ 2020, 12:09 IST
Last Updated 21 ಜೂನ್ 2020, 12:09 IST
ಅಹಮದ್‌ ರಾಧಿ
ಅಹಮದ್‌ ರಾಧಿ   

ಬಾಗ್ದಾದ್‌: ಇರಾಕ್‌ನ ಫುಟ್‌ಬಾಲ್‌ ದಿಗ್ಗಜ ಅಹಮದ್‌ ರಾಧಿ (56) ಅವರು ಕೋವಿಡ್‌–19ನಿಂದ ಭಾನುವಾರ ಮೃತಪಟ್ಟಿದ್ದಾರೆ.

ಕೊರೊನಾ ಸೋಂಕು ತಗುಲಿದ್ದು ಖಾತರಿಯಾಗಿದ್ದರಿಂದ ಅವರು ಇದೇ ತಿಂಗಳ 13ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದರಿಂದ ಹೋದ ಗುರುವಾರ ಮನೆಗೆ ಮರಳಿದ್ದರು.

ಕೆಲವೇ ಗಂಟೆಗಳಲ್ಲಿ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಹೀಗಾಗಿ ಮತ್ತೆ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಜೋರ್ಡಾನ್‌‌ಗೆ ಕರೆದೊಯ್ಯಲು ನಿರ್ಧರಿಸಲಾಗಿತ್ತು. ಜೋರ್ಡಾನ್‌‌ಗೆ ಹೋಗುವ ಕೆಲವೇ ಗಂಟೆಗಳ ಮುಂಚೆ ಅವರು ಅಸುನೀಗಿದ್ದಾರೆ.

ADVERTISEMENT

1984 ಮತ್ತು 1988ರ ಗಲ್ಫ್‌ ಕಪ್‌ಗಳಲ್ಲಿ ಇರಾಕ್‌ ತಂಡವು ಪ್ರಶಸ್ತಿ ಗೆಲ್ಲುವಲ್ಲಿ ಮುಂಚೂಣಿ ವಿಭಾಗದ ಆಟಗಾರ‌ ರಾಧಿ ಅವರ ಪಾತ್ರ ಮಹತ್ವದ್ದಾಗಿತ್ತು. 1988ರಲ್ಲಿ ಅವರು ‘ಏಷ್ಯಾದ ವರ್ಷದ ಶ್ರೇಷ್ಠ ಫುಟ್‌ಬಾಲ್‌ ಆಟಗಾರ’ ಗೌರವಕ್ಕೆ ಭಾಜನರಾಗಿದ್ದರು. ಅದೇ ವರ್ಷ ನಡೆದಿದ್ದ ಒಲಿಂಪಿಕ್ಸ್‌ನಲ್ಲೂ ಕಣಕ್ಕಿಳಿದಿದ್ದರು.

1986ರಲ್ಲಿ ಮೆಕ್ಸಿಕೊದಲ್ಲಿ ಆಯೋಜನೆಯಾಗಿದ್ದ ವಿಶ್ವಕಪ್‌ ಟೂರ್ನಿಯ ಬೆಲ್ಜಿಯಂ ವಿರುದ್ಧದ ಪಂದ್ಯದಲ್ಲಿ ರಾಧಿ ಅವರು ಗೋಲು ಬಾರಿಸಿ ಗಮನ ಸೆಳೆದಿದ್ದರು. ಆ ಹೋರಾಟದಲ್ಲಿ ಇರಾಕ್‌ 1–2 ಗೋಲುಗಳಿಂದ ಸೋತು ಟೂರ್ನಿಯಿಂದ ಹೊರ ಬಿದ್ದಿತ್ತು.

1982 ರಿಂದ 1997ರ ಅವಧಿಯಲ್ಲಿ ಇರಾಕ್‌ ಪರ ಒಟ್ಟು 121 ಪಂದ್ಯಗಳನ್ನು ಆಡಿದ್ದ ಅವರು 62 ಗೋಲುಗಳನ್ನು ದಾಖಲಿಸಿದ್ದರು. ಫುಟ್‌ಬಾಲ್‌ ಬದುಕಿಗೆ ವಿದಾಯ ಹೇಳಿದ ಬಳಿಕ ರಾಜಕೀಯದಲ್ಲಿ ಸಕ್ರಿಯರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.