ಬೆಂಗಳೂರು: ನವೋಯೆಮ್ ರೋಷನ್ ಸಿಂಗ್ ಗಳಿಸಿದ ಏಕೈಕ ಗೋಲಿನ ಸಹಾಯದಿಂದ ಬೆಂಗಳೂರು ಫುಟ್‌ಬಾಲ್ ಕ್ಲಬ್ ತಂಡವು ಇಂಡಿಯನ್ ಸೂಪರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಪಂಜಾಬ್ ಎಫ್‌ಸಿ ವಿರುದ್ಧ ಜಯಿಸಿತು.
ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ 43ನೇ ನಿಮಿಷದಲ್ಲಿ ರೋಷನ್ ಸಿಂಗ್ ಗೋಲು ಹೊಡೆದರು. ಅದರ ನಂತರ ಬಿಎಫ್‌ಸಿಯ ರಕ್ಷಣಾ ಆಟಗಾರರು ಎದುರಾಳಿಗಳಿಗೆ ಒಂದೂ ಗೋಲು ಬಿಟ್ಟುಕೊಡಲಿಲ್ಲ. ಅದರಲ್ಲೂ ತಂಡದ ಗೋಲ್ ಕೀಪರ್ ಗುರುಪ್ರೀತ್ ಸಿಂಗ್ ಸಂಧು ಅವರ ಚಾಕಚಕ್ಯತೆಯ ಮುಂದೆ ಪಂಜಾಬ್ ತಂಡದವರ ಆಟ ನಡೆಯಲಿಲ್ಲ.
ಆರಂಭದಿಂದಲೂ ಉಭಯ ತಂಡಗಳು ಗೋಲು ಗಳಿಸಲು ತುರುಸಿನ ಸ್ಪರ್ಧೆ ನಡೆಸಿದವು. ಬಿಎಫ್‌ಸಿ ತಂಡವು ಎಲ್ಲ ವಿಭಾಗಗಳಲ್ಲಿಯೂ ಮುಂಚೂಣಿಯಲ್ಲಿತ್ತು. ಪಂದ್ಯದಲ್ಲಿ ಶೇ 59ರಷ್ಟು ಕಾಲ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿತ್ತು. 428 ಪಾಸ್‌ಗಳನ್ನು ಮಾಡಿದ ತಂಡದ ಆಟಗಾರರು ಶೇ 80ರಷ್ಟು ನಿಖರತೆ ಕಾಪಾಡಿಕೊಂಡರು. 287 ಪಾಸ್‌ಗಳನ್ನು ಮಾಡಿದ ಪಂಜಾಬ್ ಶೇ 78ರಷ್ಟು ನಿಖರತೆ ಸಾಧಿಸಿದರು.
ಬಿಎಫ್‌ಸಿಯ ಒಬ್ಬರು ಮತ್ತು ಪಂಜಾಬ್‌ನ ಇಬ್ಬರು ಆಟಗಾರರು ಹಳದಿ ಕಾರ್ಡ್ ದರ್ಶನ ಮಾಡಿದರು.
ಒರಟು ಆಟವಾಡಿದ್ದಕ್ಕಾಗಿ ಬಿಎಫ್‌ಸಿಯ ಚಿಂಗ್ಲೆಸನಾ ಸಿಂಗ್ (58ನೇ ನಿ) ಅವರು ಕೆಂಪು ಕಾರ್ಡ್ ದರ್ಶನ ಪಡೆದು ಹೊರಹೋಗಬೇಕಾಯಿತು.
ಸುನಿಲ್ ಚೆಟ್ರಿ ನಾಯಕತ್ವದ ಬೆಂಗಳೂರು ತಂಡಕ್ಕೆ ಇದು ಐದನೇ ಪಂದ್ಯ ಮತ್ತು 4ನೇ ಜಯವಾಗಿದೆ. ಒಂದು ಪಂದ್ಯ ಡ್ರಾ ಮಾಡಿಕೊಂಡಿದೆ. ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.