ADVERTISEMENT

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಕೇರಳ–ಗೋವಾ ಸಮಬಲದ ಹೋರಾಟ

ಪಿಟಿಐ
Published 2 ಜನವರಿ 2022, 19:30 IST
Last Updated 2 ಜನವರಿ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಸ್ಕೊ: ಅಗ್ರಸ್ಥಾನದ ಮೇಲೆ ಕಣ್ಣಿಟ್ಟು ಕಣಕ್ಕೆ ಇಳಿದ ಕೇರಳ ಬ್ಲಾಸ್ಟರ್ಸ್ ತಂಡಕ್ಕೆ ನಿರಾಸೆಯಾಯಿತು. ತಿಲಕ್ ಮೈದಾನ್ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಇಂಡಿಯನ್ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಕೇರಳ ಮತ್ತು ಎಫ್‌ಸಿ ಗೋವಾ ನಡುವಿನ ಪಂದ್ಯ 2–2ರಲ್ಲಿ ಡ್ರಾ ಆಯಿತು.

ಪಾಯಿಂಟ್‌ ಪಟ್ಟಿಯ 5ನೇ ಸ್ಥಾನದಲ್ಲಿದ್ದ ಕೇರಳ ಈ ಪಂದ್ಯದಲ್ಲಿ ಜಯ ಗಳಿಸಿದ್ದರೆ ಮುಂಬೈಯನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರುವ ಸಾಧ್ಯತೆ ಇತ್ತು. ಆರಂಭದಲ್ಲೇ ಮುನ್ನಡೆ ಸಾಧಿಸಿ ಭರವಸೆ ಮೂಡಿಸಿತ್ತು. ಆದರೆ ಮೊದಲಾರ್ಧದಲ್ಲೇ ಎರಡು ಗೋಲುಗಳನ್ನು ಗಳಿಸಿದ ಗೋವಾ ತಿರುಗೇಟು ನೀಡಿತು.

ಕಾರ್ನರ್‌ ಕಿಕ್‌ನಲ್ಲಿ ಜೀಕ್ಸನ್ ಸಿಂಗ್ ಗಳಿಸಿದ ಮೋಹಕ ಗೋಲಿನ ಮೂಲಕ ಕೇರಳ ಬ್ಲಾಸ್ಟರ್ಸ್‌ 10ನೇ ನಿಮಿಷದಲ್ಲೇ ಮುನ್ನಡೆ ಗಳಿಸಿತು. ಕಾರ್ನರ್‌ ಕಿಕ್‌ ತೆಗೆದ ಅಡ್ರಿಯಾನ್ ಲೂನಾ ಚೆಂಡನ್ನು ಗೋಲುಪೆಟ್ಟಿಗೆಯ ಸಮೀಪಕ್ಕೆ ಗಾಲಿಯಲ್ಲಿ ತೇಲಿಬಿಟ್ಟರು. ಅಲ್ಲಿ ಕಾಯುತ್ತಿದ್ದ ಜೀಕ್ಸನ್ ಅವರು ಹೆಡರ್ ಮೂಲಕ ಚೆಂಡನ್ನು ಬಲೆಯೊಳಗೆ ಸೇರಿಸಿದರು.

ADVERTISEMENT

10 ನಿಮಿಷಗಳ ನಂತರ ಅಡ್ರಿಯಾನ್ ಲೂನಾ ಗೋಲು ಗಳಿಸಿ ಮುನ್ನಡೆ ಹೆಚ್ಚಿಸಿದರು. ಈ ಗೋಲು ಈ ಆವೃತ್ತಿಯ ಅತ್ಯುತ್ತಮ ಗೋಲಾಗಿ ಮೂಡಿಬಂತು. ಚೆಂಡಿನೊಂದಿಗೆ ಧಾವಿಸಿದ ಅಡ್ರಿಯಾನ್ ಕೊನೆಯ ಕ್ಷಣದಲ್ಲಿ ಅನಿರೀಕ್ಷಿತವಾಗಿ ಮಿಂಚಿನ ವೇಗದಲ್ಲಿ ಗೋಲುಪೆಟ್ಟಿಗೆಯೊಳಗೆ ತೂರಿಬಿಟ್ಟರು. ಗೋಲ್‌ಕೀಪರ್ ನೋಡುತ್ತಿದ್ದಂತೆ ಚೆಂಡು ಬಲೆಯೊಳಗೆ ಸೇರಿತು.

ಇದಾಗಿ ನಾಲ್ಕೇ ನಿಮಿಷಗಳಲ್ಲಿ ಗೋವಾ ತಿರುಗೇಟು ನೀಡಿತು. ಸೇವಿಯರ್ ಗಾಮಾ ಎಡಬದಿಯಿಂದ ನೀಡಿದ ಕ್ರಾಸ್‌ನಲ್ಲಿ ಚೆಂಡನ್ನು ನಿಯಂತ್ರಿಸಿದ ಜಾರ್ಜ್‌ ಒರ್ಟಿಜ್‌ ವೇಗವಾಗಿ ಗೋಲುಪೆಟ್ಟಿಗೆಯೊಳಗೆ ಒದ್ದು ಗುರಿಮುಟ್ಟಿಸಿದರು. 38ನೇ ನಿಮಿಷದಲ್ಲಿ ಎಡು ಬೇಡಿಯಾ ಅವರ ಗೋಲಿನೊಂದಿಗೆ ಸಮಬಲ ಸಾಧಿಸುವಲ್ಲಿ ಗೋವಾ ಯಶಸ್ಸು ಕಂಡಿತು.

ಒಡಿಶಾಗೆ ಮುಂಬೈ ಸಿಟಿ ಸವಾಲು

ವಾಸ್ಕೊದಲ್ಲಿ ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಒಡಿಶಾ ಎಫ್‌ಸಿ ಮತ್ತು ಮುಂಬೈ ಸಿಟಿ ಎಫ್‌ಸಿ ತಂಡಗಳು ಮುಖಾಮುಖಿಯಾಗಲಿವೆ. ಸತತ 4 ಪಂದ್ಯಗಳಲ್ಲಿ ಜಯ ಗಳಿಸದೇ ಇರುವ ಒಡಿಶಾ ತಂಡ ಬಲಿಷ್ಠ ಮುಂಬೈ ಎದುರು ಯಾವ ತಂತ್ರಗಳೊಂದಿಗೆ ಕಣಕ್ಕೆ ಇಳಿಯಲಿದೆ ಎಂಬುದು ಕುತೂಹಲದ ವಿಷಯ.

ಆರಂಭದಲ್ಲಿ ಉತ್ತಮ ಸಾಮರ್ಥ್ಯ ತೋರುತ್ತ ಬಂದಿದ್ದ ಒಡಿಶಾ ನಂತರ ನಿರಾಸೆಗೆ ಒಳಗಾಗಿತ್ತು. ಹಿಂದಿನ 4 ಪಂದ್ಯಗಳ ಪೈಕಿ ಒಂದರಲ್ಲಿ ಮಾತ್ರ ಡಾ ಗಳಿಸಲು ಸಾಧ್ಯವಾಗಿದೆ. ಕಳೆದ ಪಂದ್ಯದಲ್ಲಿ ಹೈದರಾಬಾದ್ ಎಫ್‌ಸಿ ವಿರುದ್ಧ 6–1ರಲ್ಲಿ ಸೋತಿದೆ.

ತಂಡದ ರಕ್ಷಣಾ ವಿಭಾಗ ಕಳಪೆ ಆಟ ಆಡುತ್ತಿದ್ದು ಈ ವರೆಗೆ 8 ಪಂದ್ಯಗಳಲ್ಲಿ 20 ಗೋಲುಗಳನ್ನು ಬಿಟ್ಟುಕೊಟ್ಟಿದೆ. ಹಿಂದಿನ ಆವೃತ್ತಿಯಲ್ಲೂ ಒಡಿಶಾ ರಕ್ಷಣಾ ವಿಭಾಗದಲ್ಲಿ ವೈಫಲ್ಯ ಕಂಡಿತ್ತು. 20 ಪಂದ್ಯಗಳಲ್ಲಿ 44 ಗೋಲುಗಳನ್ನು ಬಿಟ್ಟುಕೊಟ್ಟು ಹೆಚ್ಚು ಗೋಲು ಕಟ್ಟ ತಂಡವಾಗಿತ್ತು.

ಅಮೋಘ ಲಯದಲ್ಲಿರುವ ಮುಂಬೈ ಹಿಂದಿನ ಎರಡು ಪಂದ್ಯಗಳಲ್ಲಿ ಹಿನ್ನಡೆ ಅನುಭವಿಸಿದೆ. ಕೇರಳ ಬ್ಲಾಸ್ಟರ್ಸ್ ಎದುರು ಸೋತಿದ್ದ ಮುಂಬೈ ನಂತರ ನಾರ್ತ್ ಈಸ್ಟ್ ಯುನೈಟೆಡ್‌ ಜೊತೆ ಡ್ರಾ ಮಾಡಿಕೊಂಡಿತ್ತು.

ಈ ವರೆಗಿನ ಪಂದ್ಯಗಳಲ್ಲಿ ತಂಡ ಮೊದಲಾರ್ಧದಲ್ಲಿ ಉತ್ತಮ ಆಟವಾಡಿದೆ. ತಂಡದ 60 ಶೇಕಡಾ ಗೋಲುಗಳು ಈ ಅವಧಿಯಲ್ಲಿ ಬಂದಿವೆ. ಬಿಟ್ಟುಕೊಟ್ಟ ಒಟ್ಟು 13 ಗೋಲುಗಳ ಪೈಕಿ ಒಂಬತ್ತನ್ನು ದ್ವಿತೀಯಾರ್ಧದಲ್ಲಿ ಕೊಟ್ಟಿದೆ.

ಬಿಪಿನ್ ಸಿಂಗ್ ತಂಡಕ್ಕೆ ಉತ್ತಮ ಕಾಣಿಕೆ ನೀಡುತ್ತಿದ್ದು ಈ ವರೆಗೆ 5 ಗೋಲು ಗಳಿಸಿದ್ದಾರೆ. ಲಿಸ್ಟನ್ ಕೊಲ್ಯಾಕೊ, ಇಗರ್‌ ಆಂಗುಲೊ ಅವರಿಂದಲೂ ತಂಡಕ್ಕೆ ಉತ್ತಮ ಕಾಣಿಕೆ ಸಿಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.