ADVERTISEMENT

ಕಂಠೀರವ ಕ್ರೀಡಾಂಗಣದಲ್ಲಿ ಐಎಸ್‌ಎಲ್ ಪಂದ್ಯ: BFCಗೆ ಕೇರಳ ಬ್ಲಾಸ್ಟರ್ಸ್ ಸವಾಲು

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2024, 16:19 IST
Last Updated 6 ಡಿಸೆಂಬರ್ 2024, 16:19 IST
ಸುನಿಲ್ ಚೆಟ್ರಿ
ಸುನಿಲ್ ಚೆಟ್ರಿ   

ಬೆಂಗಳೂರು: ಸುನಿಲ್ ಚೆಟ್ರಿ ನಾಯಕತ್ವದ ಬೆಂಗಳೂರು ಫುಟ್‌ಬಾಲ್ ಕ್ಲಬ್ ತಂಡವು  ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಗೆಲುವಿನ ಹಾದಿಗೆ ಮರಳುವತ್ತ ಚಿತ್ತ ನೆಟ್ಟಿದೆ. ತವರಿನಂಗಳದಲ್ಲಿ ಶನಿವಾರ ಕೇರಳ ಬ್ಲಾಸ್ಟರ್ಸ್‌ ಎದುರು ಪಂದ್ಯ ಆಡಲಿರುವ ತಂಡವು ಅಗ್ರಸ್ಥಾನಕ್ಕೆ ಮರಳುವ ಕನಸು ಕಾಣುತ್ತಿದೆ.

ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಉತ್ತಮ ಗೋಲು ವ್ಯತ್ಯಾಸದೊಂದಿಗೆ ಜಯಗಳಿಸುವ ವಿಶ್ವಾದಲ್ಲಿ ಚೆಟ್ರಿ ಬಳಗವಿದೆ. 

ಟೂರ್ನಿಯಲ್ಲಿ ಇದುವರೆಗೆ 10 ಪಂದ್ಯಗಳನ್ನು ಆಡಿರುವ ಬಿಎಫ್‌ಸಿ 6ರಲ್ಲಿ ಜಯಿಸಿದೆ. 2ರಲ್ಲಿ ಸೋತಿದೆ. 2 ಡ್ರಾ ಆಗಿವೆ. ಒಟ್ಟು 20 ಅಂಕಗಳನ್ನು ಗಳಿಸಿದೆ. ಮೋಹನ್ ಬಾಗನ್ ತಂಡವು 9 ಪಂದ್ಯಗಳಿಂದ 20 ಅಂಕ ಗಳಿಸಿ ಮೊದಲ ಸ್ಥಾನದಲ್ಲಿದೆ. ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಬಾಗನ್ 9 ಗೋಲು ಮತ್ತು ಬೆಂಗಳೂರು 6 ಗೋಲು ಗಳಿಸಿದೆ. 

ADVERTISEMENT

‘ನಮ್ಮ ತಂಡದಲ್ಲಿ ಬಹಳಷ್ಟು ಯುವ ಆಟಗಾರರು ಇದ್ದಾರೆ. ಪ್ರತಿಭಾನ್ವಿತರಾಗಿರುವ ಅವರು ಅಪಾರ ಉತ್ಸಾಹದಿಂದ ಆಡುತ್ತಿದ್ದಾರೆ. ಇಂದಿನ ಕಾಲಘಟ್ಟಕ್ಕೆ ತಕ್ಕ ವೇಗ ಮತ್ತು ಕೌಶಲಗಳನ್ನು ಅವರು ತೋರುತ್ತಿದ್ದಾರೆ. ಅನುಭವಿ ಆಟಗಾರರೊಂದಿಗೆ ಉತ್ತಮ ತಾಳಮೇಳ ಹೊಂದಿರುವುದು ಈ ತಂಡದ ಶಕ್ತಿ ಹೆಚ್ಚಿಸಿದೆ’ ಎಂದು ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಚೆಟ್ರಿ ಹೇಳಿದರು. 

ಬಿಎಫ್‌ಸಿ ತಂಡದ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ಅವರು ಬಂಡೆಗಲ್ಲಿನಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಂದಾಗಿ ತಂಡವು ಹೆಚ್ಚು ಗೋಲು ಬಿಟ್ಟುಕೊಟ್ಟಿಲ್ಲ. 

ಕೇರಳ ತಂಡವು 10ನೇ ಸ್ಥಾನದಲ್ಲಿದೆ. ಒಟ್ಟು ಹತ್ತು ಪಂದ್ಯಗಳಲ್ಲಿ 3ರಲ್ಲಿ ಮಾತ್ರ ಗೆದ್ದಿದೆ. 2ರಲ್ಲಿ ಡ್ರಾ ಆಗಿದೆ. 5ರಲ್ಲಿ ಸೋತಿದೆ. ಆದ್ದರಿಂದ 2ನೇ ಸ್ಥಾನದಲ್ಲಿರುವ ಚೆಟ್ರಿ ಬಳಗವು ಕೇರಳಕ್ಕೆ ಕಠಿಣ ಸವಾಲೊಡ್ಡುವುದು ಒಡ್ಡುವುದು  ಖಚಿತ. ಅದರಲ್ಲೂ ತವರಿನ ಅಭಿಮಾನಿಗಳ ಎದುರು ಚೆಟ್ರಿ ಬಳಗದ ಕಾಲ್ಚಳಕ ರಂಗೇರುವ ನಿರೀಕ್ಷೆ ಇದೆ.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಪೋರ್ಟ್ಸ್ 18

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.