
ಕೋಲ್ಕತ್ತ: ಇಂಡಿಯನ್ ಸೂಪರ್ ಲೀಗ್ ಟೂರ್ನಿಯ ವಾಣಿಜ್ಯ ಹಕ್ಕುಳಿಗೆ ಒಂದೂ ಬಿಡ್ ಪಡೆಯುವಲ್ಲಿ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ವಿಫಲವಾದ ಬೆನ್ನಲ್ಲೇ ಐಎಸ್‌ಎಲ್ ಚಾಂಪಿಯನ್ ತಂಡವಾದ ಮೋಹನ್ ಬಾಗನ್ ಸೂಪರ್ ಜೈಂಟ್ ತಂಡ ಶನಿವಾರದಿಂದಲೇ ಜಾರಿಗೆ ಬರುವಂತೆ ಅನಿರ್ದಿಷ್ಟಾವಧಿಗೆ ಫುಟ್‌ಬಾಲ್ ಚಟುವಟಿಕೆಗಳನ್ನು ಅಮಾನತುಗೊಳಿಸಿದೆ.
ಆಟಗಾರರು ಮತ್ತು ನೆರವು ಸಿಬ್ಬಂದಿಯ ಗುತ್ತಿಗೆ ಬಗ್ಗೆ ಮುಂದಿನ ತಿಂಗಳು ಪರಿಶೀಲನೆ ನಡೆಸುವುದಾಗಿ ಕ್ಲಬ್ ತಿಳಿಸಿದೆ.
ಐಎಸ್‌ಎಲ್ ಆರಂಭ ಈಗಾಗಲೇ ವಿಳಂಬವಾಗಿದೆ.
ಐಎಸ್‌ಎಲ್‌ಗೆ ವಾಣಿಜ್ಯ ಹಕ್ಕುಗಳನ್ನು ಪಡೆಯಲು ಯಾವ ಸಂಸ್ಥೆಯೂ ಮುಂದೆ ಬಂದಿಲ್ಲ ಎಂದು ಎಐಎಫ್‌ಎಫ್ ಶುಕ್ರವಾರ ತಡರಾತ್ರಿ ತಿಳಿಸಿತ್ತು. ಇದರಿದಾಗಿ ದೇಶೀ ಫುಟ್‌ಬಾಲ್ ಸ್ಥಿತಿಗತಿ ಅಯೋಮಯಗೊಂಡಿದೆ.
‘ಸೋಮವಾರದಿಂದ ನಮ್ಮ ಶಿಬಿರ ಆರಂಭವಾಗಬೇಕಿತ್ತು. ಆದರೆ ಈಗ ಶಿಬಿರವನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಲಾಗಿದೆ. ಐಎಸ್‌ಎಲ್ ಆರಂಭಕ್ಕೆ ಸಂಬಂಧಿಸಿ ಸ್ಪಷ್ಟತೆ ಮೂಡುವವರೆಗೆ ನಾವು ಚಟುವಟಿಕೆ ನಡೆಸುವುದಿಲ್ಲ’ ಎಂದು ಮೋಹನ್ ಬಾಗನ್ ಕ್ಲಬ್‌ನ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು.
ಐಎಸ್‌ಎಲ್ ಮೇಲೆ ಅನಿಶ್ಚಿತತೆಯ ಕಾರ್ಮೋಡ ಕವಿದಿದ್ದು, ನಮ್ಮ ಎಲ್ಲ ಆಟಗಾರರ ಗುತ್ತಿಗೆಗೆ ಸಂಬಂಧಿಸಿ ಮುಂದಿನ ತಿಂಗಳು ಪರಿಶೀಲನೆ ನಡೆಸುತ್ತೇವೆ. ಆದರೆ ಯಾವುದೇ ಆಟಗಾರನ ವೇತನ ನಿಲ್ಲಿಸಿಲ್ಲ. ಎಲ್ಲರಿಗೂ ಆಯಾ ತಿಂಗಳೇ ಪಾವತಿಯಾಗಿದೆ’ ಎಂದು ಅಧಿಕಾರಿ ತಿಳಿಸಿದರು.
ಒಂದೆಡೆ ಕ್ಲಬ್‌ಗಳು ಆತಂಕದಲ್ಲಿದ್ದರೆ, ಇನ್ನೊಂದೆಡೆ, ನ್ಯಾಯಮೂರ್ತಿ (ನಿವೃತ್ತ) ನಾಗೇಶ್ವರ ರಾವ್ ನೇತೃತ್ವದ ಫೆಡರೇಷನ್‌ನ ಬಿಡ್ ಮಾಲ್ಯಮಾಪನ ಸಮಿತಿಯು ಸಭೆ ಸೇರಲಿದ್ದು, ಮುಂದಿನ ಕ್ರಮದ ಬಗ್ಗೆ ಸಮಾಲೋಚನೆ ನಡೆಸಲಿದೆ.
ಯಥಾಸ್ಥಿತಿ:
ಗೋಲು ವ್ಯತ್ಯಾಸದ ಮೇಲೆ ಸೂಪರ್ ಕಪ್ ಟೂರ್ನಿಯ ಸೆಮಿಫೈನಲ್ ತಲುಪಿರುವ ಈಸ್ಟ್ ಬೆಂಗಾಲ್ ತನ್ನ ಚಟುವಟಿಕೆಗಳನ್ನು ಮುಂದುವರಿಸಿದೆ.
ಐಎಸ್‌ಎಲ್ ಮುಂದುವರಿಯುವ ವಿಶ್ವಾಸವಿದೆ. ದೇಶದ ಫುಟ್‌ಬಾಲ್ ಕ್ಷೇತ್ರವು ಅಧೋಗತಿಗೆ ಇಳಿಯಬಾರದು ಎಂದು ಈಸ್ಟ್ ಬೆಂಗಾಲ್‌ನ ಕಾರ್ಯಕಾರಿ ಸಮಿತಿಯ ಹಿರಿಯ ಸದಸ್ಯ ದೇವವೃತ (ನಿತು) ಸರ್ಕಾರ್ ಪಿಟಿಐ ಜೊತೆ ಕಳಕಳಿ ವ್ಯಕ್ತಪಡಿಸಿದರು.
ಬಿಸಿಸಿಐಗೆ ಮನವಿ:
ಭಾರತ ಫುಟ್‌ಬಾಲ್ ಅನ್ನು ಈಗಿನ ಬಿಕ್ಕಟ್ಟಿನಿಂದ ಹೊರಬರಲು ನೆರವಾಗುವಂತೆ ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾದ ಬಿಸಿಸಿಐಗೆ ಸರ್ಕಾರ್ ಮನವಿ ಮಾಡಿದ್ದಾರೆ.
ಮುಂದಿನ ಐದು ವರ್ಷಗಳಿಗೆ ಬಿಸಿಸಿಐ ಪ್ರಾಯೋಜಕತ್ವ ವಹಿಸಲಿ. ಅವರಿಗೆ ₹100 ಕೋಟಿ, 150 ಕೋಟಿ ನೀಡುವುದು ದೊಡ್ಡ ವಿಷಯವೇನಲ್ಲ. ಅವರು ಜವಾಬ್ದಾರಿ ವಹಿಸಿದಲ್ಲಿ ಭಾರತದ ಫುಟ್‌ಬಾಲ್ ಏಳಿಗೆ ಕಾಣಲಿದೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.